ಕುಶಾಲನಗರ, ನ. 9: ಕುಶಾಲನಗರದ ಶ್ರೀ ಕೋಣಮಾರಿಯಮ್ಮ ದೇವಾಲಯದ 16ನೇ ವರ್ಷದ ವಾರ್ಷಿಕ ಪೂಜೋತ್ಸವ ಶ್ರದ್ಧಾಭಕ್ತಿಯಿಂದ ಆರಂಭಗೊಂಡಿತು. ಎರಡು ದಿನಗಳ ಕಾಲ ನಡೆಯುವ ಪೂಜೋತ್ಸವದ ಅಂಗವಾಗಿ ಗುರುವಾರ ಕಾವೇರಿ ನದಿಯಿಂದ ಪವಿತ್ರ ಕಲಶ ಸ್ಥಾಪಿಸಿ ದೇವಿಯ ವಿಗ್ರಹದೊಂದಿಗೆ ಮೆರವಣಿಗೆ ಮೂಲಕ ದೇವಾಲಯಕ್ಕೆ ತಂದು ಪ್ರತಿಷ್ಠಾಪಿಸಲಾಯಿತು.
ಸಾಂಪ್ರದಾಯಿಕವಾಗಿ ಗಣಪತಿ ಹೋಮ, ಮಹಾಮಂಗಳಾರತಿ ಬಳಿಕ ನೆರೆದಿದ್ದ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ನೆರವೇರಿತು. ಅರ್ಚಕ ಕುಳ್ಳಯ್ಯ ಪೂಜಾ ವಿಧಿ ನೆರವೇರಿಸಿದರು. ಸುತ್ತಮುತ್ತಲ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಕುಶಾಲನಗರ ದೇವಾಲಯ ಒಕ್ಕೂಟದ ಪದಾಧಿಕಾರಿಗಳಿಂದ ಸಾಮೂಹಿಕ ಪೂಜೆ ನಡೆಯಿತು. ದೇವಾಲಯ ಸಮಿತಿ ಅಧ್ಯಕ್ಷರಾದ ಬಿ.ಕೆ. ಚೆಲುವರಾಜ್, ಉಪಾಧ್ಯಕ್ಷ ಎಂ. ಮಂಜುನಾಥ್, ಕಾರ್ಯದರ್ಶಿ ಆರ್. ಸುರೇಶ್, ಖಜಾಂಚಿ ಎಂ.ಎಸ್. ಕುಮಾರ್, ಸಹ ಕಾರ್ಯದರ್ಶಿ ಇ. ರಾಜು, ಪ್ರಮುಖರಾದ ಶಿವಾನಂದ, ಕೇಶವ, ಸತೀಶ್, ಲೋಕೇಶ್, ಎಸ್.ಜೆ. ರಾಜು, ತಮ್ಮಯ್ಯ, ರಮೇಶ್, ದೇವಾಲಯ ಒಕ್ಕೂಟದ ಅಧ್ಯಕ್ಷ ಎಂ.ಕೆ. ದಿನೇಶ್, ಉಪಾಧ್ಯಕ್ಷ ವಿ.ಎನ್. ವಸಂತಕುಮಾರ್, ಶ್ರೀನಿವಾಸರಾವ್, ರಾಮದಾಸ್, ಚಿಕ್ಕೇಗೌಡ, ಗಣಪತಿ, ಕೆ.ಕೆ. ದಿನೇಶ್, ಪ್ರಧಾನ ಕಾರ್ಯದರ್ಶಿ ಎಂ.ಎನ್. ಚಂದ್ರಮೋಹನ್, ವಿವಿಧ ದೇವಾಲಯಗಳ ಪ್ರತಿನಿಧಿಗಳು ಇದ್ದರು.
ಪೂಜೋತ್ಸವದ ಅಂಗವಾಗಿ ದೇವಾಲಯದ ಆವರಣದಲ್ಲಿ ಸಂಜೆ ಸಾಂಪ್ರದಾಯಿಕ ನೃತ್ಯ ಕಾರ್ಯಕ್ರಮ ನಡೆಯಿತು. ಶುಕ್ರವಾರ ದೇವಿಗೆ ದೀಪಾಲಂಕಾರ, ಪುಷ್ಪಾಲಂಕಾರ, ಮಧ್ಯಾಹ್ನ ಮಹಾಮಂಗಳಾರತಿ ಬಳಿಕ ಅನ್ನಸಂತರ್ಪಣೆ ನೆರವೇರಲಿದೆ. ಸಂಜೆ 6 ಗಂಟೆಯಿಂದ ವಿವಿಧ ಕಲಾ ತಂಡಗಳು, ವಾದ್ಯಗೋಷ್ಠಿಗಳ ಸಮ್ಮುಖದಲ್ಲಿ ವಿದ್ಯುತ್ ಅಲಂಕೃತ ಮಂಟಪದಲ್ಲಿ ದೇವಿಯ ಮೂರ್ತಿಯ ಮೆರವಣಿಗೆ ಜರುಗಲಿದೆ.