ಮಡಿಕೇರಿ, ನ. 9 : ರಾಂಚಿಯಲ್ಲಿ ಇತ್ತೀಚೆಗೆ ನಡೆದ ಕಿರಿಯರ ರಾಷ್ಟ್ರೀಯ ಅಥ್ಲೇಟಿಕ್ಸ್ ಕ್ರೀಡಾಕೂಡದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ಕೊಡಗಿನ ಉನ್ನತ್ತಿ ಅಯ್ಯಪ್ಪ ಲಾಂಗ್ಜಂಪ್ ಸ್ಪರ್ಧೆಯಲ್ಲಿ ಚಿನ್ನದ ಪದಕದ ಸಾಧನೆ ಮಾಡಿದ್ದಾಳೆ. ಪಾಲ್ಗೊಂಡ ಮೊದಲ ರಾಷ್ಟ್ರೀಯ ಕ್ರೀಡಾಕೂಟದಲ್ಲೇ ಚಿನ್ನದ ಪದಕ ಗಳಿಸಿರುವದು ಉನ್ನತಿ ಅಯ್ಯಪ್ಪಳ ಸಾಧನೆಯಾಗಿದೆ. 14 ವರ್ಷ ವಯೋಮಿತಿಯೊಳಗಿನ ಬಾಲಕಿಯರ ಸ್ಪರ್ಧೆಯಲ್ಲಿ ಈಕೆ ಈ ಸಾಧನೆ ಮಾಡಿದ್ದಾಳೆ.
ಉನ್ನತಿ ಈ ಹಿಂದೆ 2000ನೇ ಇಸವಿಯಲ್ಲಿ ಸಿಡ್ನಿ 2008ರಲ್ಲಿ ಬೀಜಿಂಗ್ ಒಲಿಂಪಿಕ್ಸ್ನಲ್ಲಿ ಭಾರತವನ್ನು ಪ್ರತಿನಿಧಿಸಿರುವ ಹಾಗೂ 2010ರಲ್ಲಿ ಚೈನಾದಲ್ಲಿ ನಡೆದ ಏಷ್ಯನ್ ಗೇಮ್ಸ್ನಲ್ಲಿ ಕಂಚಿನ ಪದಕ ಗಳಿಸಿರುವ ಕೊಡಗಿನ ಕ್ರೀಡಾ ತಾರೆ ಜಿ.ಜಿ. ಪ್ರಮೀಳಾ (ಈಗ ಬೊಳ್ಳಂಡ) ಹಾಗೂ ಅಯ್ಯಪ್ಪ ದಂಪತಿಯ ಪುತ್ರಿ. ಪುತ್ರಿಗೆ ಬೆಂಗಳೂರಿನಲ್ಲಿರುವ ಪೋಷಕರೇ ತರಬೇತಿ ನೀಡುತ್ತಿರುವದು ವಿಶೇಷವಾಗಿದೆ.