ಸೋಮವಾರಪೇಟೆ, ನ. 9: ವಿದ್ಯಾರ್ಥಿಗಳು ಶಾಲಾ ಬಿಡುವಿನ ಅವಧಿಯಲ್ಲಿ ಪುಸ್ತಕ ಅಥವಾ ಪತ್ರಿಕೆಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಹೇಳಿದರು.
ಮಾದಾಪುರ ಡಿ. ಚೆನ್ನಮ್ಮ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ಹಟ್ಟಿಹೊಳೆಯ ನಿರ್ಮಲ ವಿದ್ಯಾಭವನದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ವಿಶೇಷ ಶಿಬಿರದಲ್ಲಿ ‘ಯುವ ಸಮೂಹ ಮತ್ತು ಪತ್ರಿಕೋದ್ಯಮ’ ವಿಚಾರದ ಕುರಿತು ಅವರು ಮಾತನಾಡಿದರು.
ಪತ್ರಿಕೋದ್ಯಮದ ಕುರಿತು ಹೆಚ್ಚಿನ ಆಸಕ್ತಿ ಹೊಂದಿದರೆ ಪ್ರತಿನಿತ್ಯ ಹೊಸ ಸವಾಲುಗಳು, ಇನ್ನಷ್ಟೂ ಕಲಿಯುವ ತುಡಿತ ಹೆಚ್ಚುತ್ತದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಪ್ರತಿಯೊಂದು ಕ್ಷೇತ್ರದಲ್ಲೂ ಪೈಪೋಟಿ ಇದ್ದು, ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಚಾಕಚಕ್ಯತೆ ಮೂಡಿಸಿಕೊಳ್ಳಬೇಕು ಎಂದರು.
ಸಾಮಾಜಿಕ ಕಾರ್ಯಕರ್ತ ಮಂದೆಯಂಡ ದೀಪಕ್ ಮಾತನಾಡಿ, ಇತ್ತೀಚೆಗೆ ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದ ಸಂದರ್ಭ ಜಿಲ್ಲೆಯ ಯುವಜನಾಂಗ ಎಲ್ಲರೂ ಮೆಚ್ಚುವಂತಹ ಕೆಲಸ ಮಾಡಿದ್ದಾರೆ. ಅದರಲ್ಲೂ ಮಾಧ್ಯಮ ರಂಗ ಸಮರ್ಥವಾಗಿ ಕಾರ್ಯನಿರ್ವಹಿಸಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ತಾಲೂಕು ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ತೇಲಪಂಡ ಕವನ್ ಕಾರ್ಯಪ್ಪ ಮಾತನಾಡಿ, ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಮತ್ತು ಉಪನ್ಯಾಸಕರು ಪ್ರಕೃತಿ ವಿಕೋಪ ನಡೆದಂತಹÀ ಹಟ್ಟಿಹೊಳೆ ಗ್ರಾಮದ ಶಾಲೆಯಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳುತ್ತಿರುವದು ಪ್ರಶಂಸÀನೀಯ ಎಂದರು.
ವೇದಿಕೆಯಲ್ಲಿ ಪ್ರಾಂಶುಪಾಲ ಸಿ.ಜಿ.ಮಂದಪ್ಪ, ಉಪನ್ಯಾಸಕಿ ಸೀಮಾ, ಶಿಬಿರಾಧಿಕಾರಿ ಮೋಹನ್ ಹೆಗಡೆ ಉಪಸ್ಥಿತರಿದ್ದರು.