ವೀರಾಜಪೇಟೆ, ನ. 5 : ಶತಮಾನಗಳ ಇತಿಹಾಸವಿರುವ ವೀರಾಜಪೇಟೆಯ ಸಂತ ಅನ್ನಮ್ಮ ದೇವಾಲಯದ ವತಿಯಿಂದ ಮೃತ ವಿಶ್ವಾಸಿಗಳ ಸ್ಮರಣಾ ದಿನವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಕ್ರೈಸ್ತ ಸಮುದಾಯದಲ್ಲಿ ಮೃತಪಟ್ಟಿರುವ ವಿಶ್ವಾಸಿಗಳನ್ನು ಸ್ಮರಿಸಿ ಅವರಿಗೆ ಶಾಶ್ವತವಾಗಿ ಶಾಂತಿ ಕೋರುವ ದಿನವನ್ನು ಸ್ಮರಣಾ ದಿನವನ್ನಾಗಿ ಆಚರಿಸಿ ಬಲಿಪೂಜೆಯನ್ನು ನೆರವೇರಿಸಲಾಯಿತು. ಸಂತ ಅನ್ನಮ್ಮ ಪ್ರಧಾನ ಗುರು ರೆವರೆಂಡ್ ಫಾದರ್ ಮದಲೈಮುತ್ತು ಅವರ ನೇತೃತ್ವದಲ್ಲಿ ಕ್ರೈಸ್ತ ಸಮುದಾಯದವರು ಒಟ್ಟಾಗಿ ಸೇರಿ ದಿವ್ಯ ಬಲಿಪೂಜೆಯೊಂದಿಗೆ ಮೃತರನ್ನು ಸ್ಮರಿಸಿ ಅವರುಗಳ ಆತ್ಮಕ್ಕೆ ಶಾಂತಿಗಾಗಿ ಪ್ರಾರ್ಥಿಸಿದರು. ಫಾದರ್ ಮದಲೈ ಮುತ್ತು ಜೊತೆಯಲ್ಲಿ ಸಹ ಗುರುಗಳಾದ ಫಾದರ್ ಮೈಕಲ್ ಮೇನೇಜಸ್, ಫಾದರ್ ಐಸಾಕ್ ರತ್ನಾಕರ್, ರೋಷನ್ ಮೇನೇಜಸ್ ಪಾಲ್ಗೊಂಡಿದ್ದರು. ಕ್ರೈಸ್ತ ಸಮುದಾಯದ ನೂರಾರು ಮಂದಿ ಭಾಗವಹಿಸಿದ್ದರು.