ಸಿದ್ದಾಪುರ, ನ. 5 : ಬಡ ಹೆಣ್ಣು ವಧುವಿನ ವಿವಾಹ ಕಾರ್ಯವನ್ನು ಜಿಲ್ಲಾ ಎಸ್.ಎನ್.ಡಿ.ಪಿ ಯೂನಿಯನ್ ನೆರವೇರಿಸಿ ಕೊಡುವ ಮೂಲಕ ಮಾನವೀಯತೆಯನ್ನು ಮೆರೆದಿದೆ. ಸಿದ್ದಾಪುರ ಸಮೀಪ ಗುಹ್ಯ ಗ್ರಾಮದ ಕೂಡುಗದ್ದೆ ಬಡಮಹಿಳೆಯಾಗಿರುವ ಶ್ರೀಜಾ ಎಂಬುವವರ ಪುತ್ರಿ ಶ್ರುತಿ ಎಂಬ ವಧುವನ್ನು, ಕೇರಳ ರಾಜ್ಯದ ಕನ್ನವಂ ಗ್ರಾಮದ ನಿವಾಸಿ ಕುಂಜ್ಞಿರಾಮನ್ ಎಂಬುವವರ ಪುತ್ರ ಮಹೇಶ್ ಎಂಬ ವರನಿಗೆ ಸಿದ್ದಾಪುರ ಶ್ರೀ ನಾರಾಯಣ ಗುರು ಸಭಾಂಗಣದಲ್ಲಿ ಜಿಲ್ಲಾ ಎಸ್.ಎನ್.ಡಿ.ಪಿ ಯೂನಿಯನ್ ಸಂಚಾಲಕ ಕೆ.ಎನ್ ವಾಸು ಹಾಗೂ ಅಧ್ಯಕ್ಷ ಕೆ.ಜಿ ಬಾಲಕೃಷ್ನ ನೇತೃತ್ವದಲ್ಲಿ ವಿವಾಹ ಮಾಡಿಕೊಡಲಾಯಿತು.

ಈ ಸಂದರ್ಭದಲ್ಲಿ ಸಂಚಾಲಕ ಕೆ.ಎನ್ ವಾಸು ಮಾತನಾಡಿ ಎಸ್.ಎನ್.ಡಿ.ಪಿ ಯೂನಿಯನ್ ವತಿಯಿಂದ ಸಮಾಜ ಬಾಂಧವರಿಗೆ ಸರಕಾರದಿಂದ ಸಿಗುವ ಸೌಲಭ್ಯ ಗಳನ್ನು ಒದಗಿಸಿ ಕೊಡಲಾಗುತ್ತಿದ್ದು, ಇದಲ್ಲದೆ ಸಂಘದ ಸದಸ್ಯರ ಪ್ರತಿಭಾನ್ವಿತ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಿ ಧನ ಸಹಾಯ ಮಾಡಲಾಗುತ್ತಿದೆ. ಬಡ ಹೆಣ್ಣು ವಧುವಿನ ವಿವಾಹ ಕಾರ್ಯಕ್ಕೆ ಚಿನ್ನಾಭರಣ, ಬಟ್ಟೆ ಹಾಗೂ ಮದುವೆಯ ಸಂಪೂರ್ಣ ವೆಚ್ಚವನ್ನು ಸಂಘಟನೆಯು ವಹಿಸಿದೆ ಎಂದು ತಿಳಿಸಿದರು. ಎಸ್.ಎನ್.ಡಿ.ಪಿ ಮಹಿಳಾ ಘಟಕದ ಅಧ್ಯಕ್ಷೆ ರೀಶಾ ಸುರೇಂದ್ರ, ಪದಾಧಿಕಾರಿಗಳಾದ ಗಿರೀಶ್, ಟಿ.ಸಿ.ಅಶೋಕ್, ದೇವಜಾನು, ವಿ.ವಿ ಮನೋಹರ್, ರಾಜನ್, ರವಿ, ರತೀಶ್ ಮತ್ತಿತರು ಹಾಜರಿದ್ದರು.