ಸೋಮವಾರಪೇಟೆ, ನ. 4: ಜಿ.ಪಂ. ಮತ್ತು ತೋಟಗಾರಿಕಾ ಇಲಾಖೆಯ ವತಿಯಿಂದ ಸಮೀಪದ ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಜೇನು ಕೃಷಿ ಕುರಿತ ಮಾಹಿತಿ ಕಾರ್ಯಾಗಾರ ಮತ್ತು ಜೇನು ಪೆಟ್ಟಿಗೆ ವಿತರಣೆ ಕಾರ್ಯಕ್ರಮ ನಡೆಯಿತು.
ಸಭೆಯಲ್ಲಿ ಭಾಗವಹಿಸಿದ್ದ ಪ್ರಗತಿಪರ ಜೇನುಕೃಷಿಕ ಶಾಂತಳ್ಳಿ ಸುಂದರ್ ಮಾತನಾಡಿ, ಜೇನು ಕೃಷಿಯಿಂದಾಗುವ ಲಾಭ, ಮಾರುಕಟ್ಟೆ ವ್ಯವಸ್ಥೆ, ಬೇಡಿಕೆ, ಜೇನು ಹುಳುಗಳಿಂದ ಪರಿಸರಕ್ಕಾಗುವ ಲಾಭಗಳು, ಜೇನು ಹುಳುಗಳ ಸಾಕಾಣಿಕೆ ಬಗ್ಗೆ ಮಾಹಿತಿ ಒದಗಿಸಿದರು. ಇಲಾಖೆಯ ವಿಷಯ ತಜ್ಞ ಕೆ.ಪಿ. ಪ್ರವೀಣ್‍ಕುಮಾರ್ ಮಾತನಾಡಿ, ಬೆಟ್ಟದಳ್ಳಿ ಸೇರಿದಂತೆ ಶಾಂತಳ್ಳಿ ಹೋಬಳಿಯ ಪ್ರದೇಶ ಜೇನು ಕೃಷಿಗೆ ಯೋಗ್ಯ ಪ್ರದೇಶವಾಗಿದ್ದು, ಈ ಭಾಗದಲ್ಲಿ ಇನ್ನಷ್ಟು ಮಂದಿ ಜೇನು ಕೃಷಿಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಆರ್ಥಿಕ ಸ್ವಾವಲಂಬಿ ಗಳಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದ ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಮಾತನಾಡಿ, ಸರ್ಕಾರದ ವಿವಿಧ ಯೋಜನೆಗಳು, ಸಹಾಯಧನವನ್ನು ಪಡೆದುಕೊಳ್ಳಲು ಜೇನು ಕೃಷಿಕರು ಮುಂದೆಬರಬೇಕು ಎಂದರು.
ವೇದಿಕೆಯಲ್ಲಿ ತಾ.ಪಂ. ಸದಸ್ಯ ಧರ್ಮಪ್ಪ, ಬೆಟ್ಟದಳ್ಳಿ ಗ್ರಾ.ಪಂ. ಅಧ್ಯಕ್ಷೆ ಪವಿತ್ರ, ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಎಸ್. ಮುತ್ತಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ 2018-19ನೇ ಸಾಲಿನ ರಾಜ್ಯ ವಲಯ ಯೋಜನೆಯಡಿ ಶಾಂತಳ್ಳಿ ಹೋಬಳಿ ವ್ಯಾಪ್ತಿಯ 30 ಮಂದಿ ಜೇನು ಕೃಷಿಕರಿಗೆ ತಲಾ 2 ಜೇನು ಪೆಟ್ಟಿಗೆಯನ್ನು ವಿತರಿಸಲಾಯಿತು.