ಮಡಿಕೇರಿ, ನ. 5: ಮಡಿಕೇರಿಯ ಜಿಲ್ಲಾ ಕ್ರೀಡಾಂಗಣದಲ್ಲಿರುವ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕಚೇರಿಯಲ್ಲಿ ಇತ್ತೀಚೆಗೆ ಜಿಲ್ಲಾ ಕ್ರೀಡಾಂಗಣದಲ್ಲಿರುವ ಕಿರಿಯರ ಕ್ರೀಡಾ ವಸತಿ ನಿಲಯದ ಪೋಷಕರ ಸಭೆ ಜಿ.ಪಂ. ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ನೆಲ್ಲಚಂಡ ಕಿರಣ್ ಕಾರ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಕ್ರೀಡಾ ವಿದ್ಯಾರ್ಥಿಗಳ ಊಟೋಪಚಾರ, ಶೌಚಾಲಯದ ವ್ಯವಸ್ಥೆ, ಸ್ವಚ್ಛತೆ, ಆರೋಗ್ಯ ತಪಾಸಣೆ ಮತ್ತಿತರ ಅಗತ್ಯತೆಗಳ ಕುರಿತು ಚರ್ಚೆ ನಡೆಸಲಾಯಿತು. ಈ ಸಂದರ್ಭ ವಿದ್ಯಾರ್ಥಿಗಳನ್ನು ವಾರದಲ್ಲಿ ಎರಡು ದಿನ ಟರ್ಫ್ ಮೈದಾನಕ್ಕೆ ಕರೆದೊಯ್ದು ತರಬೇತಿ ನೀಡುವ ಕುರಿತು ತೀರ್ಮಾನಿಸಲಾಯಿತು. ಬಳಿಕ ಕ್ರೀಡಾಪಟುಗಳಿಗೆ ಇಲಾಖೆಯಿಂದ ಬಂದ ಕ್ರೀಡಾ ಸಾಮಗ್ರಿಗಳನ್ನು ವಿತರಿಸಲಾಯಿತು. ಸಭೆಯಲ್ಲಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ವಿ. ನಂದೀಶ್, ತರಬೇತುದಾರರಾದ ಬಿಂದಿಯಾ, ಭರತ್, ಮಂಜುನಾಥ್ ಮತ್ತಿತರರು ಪಾಲ್ಗೊಂಡಿದ್ದರು.