ಮಡಿಕೇರಿ, ನ. 4: ಕೊಡಗು ಜಿಲ್ಲೆಯಲ್ಲಿ ಕಳೆದ ಮಳೆಗಾಲದಿಂದ ಸಂಭವಿಸಿರುವ ಪ್ರಾಕೃತಿಕ ವಿಕೋಪದ ನಡುವೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮಕ್ಕೆ (ಚೆಸ್ಕಾಂ) ಅಂದಾಜು ರೂಪಾಯಿ ಏಳು ಕೋಟಿ ಎಂಬತ್ತೊಂಭತ್ತು ಲಕ್ಷದ ಐವತ್ತೊಂಬತ್ತು ಸಾವಿರದಷ್ಟು ನಷ್ಟ ಸಂಬವಿಸಿದ್ದು, ಈಗಾಗಲೇ ಬಹುತೇಕ ಸರಿಪಡಿಸುವ ಕೆಲಸವೂ ಪೂರ್ಣ ಗೊಂಡಿದೆ ಎಂದು ಸಂಬಂಧಿಸಿದ ಅಧಿಕಾರಿಗಳು ವಿವರಿಸಿದ್ದಾರೆ.ಚೆಸ್ಕಾಂ ಮೂಲಗಳ ಪ್ರಕಾರ ಪ್ರಸಕ್ತ ಮುಗಿದಿರುವ ಮಳೆಗಾಲದಲ್ಲಿ ಭೂಕುಸಿತ ಇತ್ಯಾದಿ ತೊಡಕುಗಳ ನಡುವೆ ಮಡಿಕೇರಿ ತಾಲೂಕಿನಲ್ಲಿ 1659 ವಿದ್ಯುತ್ ಕಂಬಗಳು ಹಾನಿಗೊಂಡಿವೆ. ಅಲ್ಲದೆ 104 ಟ್ರಾನ್ಸ್ಫಾರ್ಮರ್ ಇತ್ಯಾದಿ ನಷ್ಟದೊಂದಿಗೆ, 23.31 ಕಿ.ಲೋ. ಮೀಟರ್ಗಳಷ್ಟು ತಂತಿಗಳು ಸಂಪರ್ಕ ಮಾರ್ಗದಲ್ಲಿ ಹಾನಿಗೊಂಡಿವೆ.ಸೋಮವಾರಪೇಟೆ ವಿಭಾಗದಲ್ಲಿ ಆ ತಾಲೂಕಿಗೆ ಸಂಬಂಧಿಸಿದಂತೆ ಪ್ರಾಕೃತಿಕ ವಿಕೋಪದಿಂದ 1833 ವಿದ್ಯುತ್ ಕಂಬಗಳು ಮುರಿದು ಹೋಗಿತ್ತು. 116 ಟ್ರಾನ್ಸ್ಫಾರ್ಮರ್ಗಳು ಹಾನಿಗೊಂಡಿದ್ದು, ಈ ತಾಲೂಕಿನಲ್ಲಿ 32.67 ಕಿ.ಮೀ.ಗಳಷ್ಟು ವಿದ್ಯುತ್ ತಂತಿಗಳು ಹಾನಿಗೀಡಾಗಿತ್ತು.
ಇನ್ನು ದಕ್ಷಿಣ ಕೊಡಗಿನ ಗ್ರಾಮೀಣ ಭಾಗಗಳನ್ನು ಒಳಗೊಂಡಂತೆ ವೀರಾಜಪೇಟೆ ತಾಲೂಕಿನಲ್ಲಿ 777 ವಿದ್ಯುತ್ ಕಂಬಗಳು ಹಾನಿಯಾಗಿದ್ದು, 137 ಟ್ರಾನ್ಸ್ಫಾರ್ಮರ್ಗಳು ನಷ್ಟಗೊಂಡಿವೆ. ಈ ತಾಲೂಕಿನಲ್ಲಿ 9.71 ಕಿ.ಮೀ.ಗಳಷ್ಟು ಸಾಮಥ್ರ್ಯದ ವಿದ್ಯುತ್ ತಂತಿಗಳು ಹಾನಿಗೊಂಡಿರುವದು ಗೋಚರಿಸಿದೆ.
ಚೆಸ್ಕಾಂ ಕೊಡಗು ಜಿಲ್ಲಾ ಆರ್ಥಿಕ ಇಲಾಖೆಯ ಪ್ರಕಾರ ಮೂರು ತಾಲೂಕುಗಳಿಂದ ಒಟ್ಟು 4269 ವಿದ್ಯುತ್ ಕಂಬಗಳು ಹಾನಿಗೊಂಡಿವೆ. ಮಾತ್ರವಲ್ಲದೆ ಒಟ್ಟು 357 ಟ್ರಾನ್ಸ್ಫಾರ್ಮರ್ಗಳು ನಷ್ಟದೊಂದಿಗೆ 65.69 ಕಿಲೋ ಮೀಟರ್ ವಿದ್ಯುತ್ ತಂತಿಗಳು ಹಾನಿಯಾಗಿರುವದು ಖಾತರಿಯಾಗಿದೆ. ಇಷ್ಟೊಂದು ಹಾನಿ ಸಂಭವಿಸಲು ಭೂಕುಸಿತ, ಜಲಸ್ಫೋಟ ಹಾಗೂ ರಸ್ತೆ ಸಂಪರ್ಕ ಕಡಿತಗೊಂಡು ಎದುರಾಗಿದ್ದ ಹಲವು ಕಾರಣಗಳು ಇರುವದಾಗಿ ಇಲಾಖೆ ಸರಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಮಾಹಿತಿ ರವಾನಿಸಿದೆ.
ಕಳೆದ ಏಪ್ರಿಲ್ನಿಂದ ಅಕ್ಟೋಬರ್ ಮಾಸಾಂತ್ಯದವರೆಗೆ ಕೊಡಗಿನಲ್ಲಿ ಸಂಭವಿಸಿರುವ ವಿದ್ಯುತ್ ಉಪಕರಣಗಳ ನಷ್ಟ ಸಂಬಂಧಿ ಈಗಾಗಲೇ ಬಹುತೇಕ ಕೆಲಸಗಳನ್ನು ಪೂರ್ಣಗೊಳಿಸಿದ್ದು, ರೂ. 7.89 ಕೋಟಿ ಹಣ ಬಿಡುಗಡೆಗೆ ಕ್ರಿಯಾ ಯೋಜನೆಯೊಂದಿಗೆ ಪ್ರಸ್ತಾವನೆ ಕೂಡ ಸಲ್ಲಿಸಲಾಗಿದೆ. ಜಿಲ್ಲಾಡಳಿತದಿಂದ ಮಳೆ ಹಾನಿ ಸಂದರ್ಭ ರೂ. 25 ಲಕ್ಷ ತುರ್ತು ನೆರವು ಚೆಸ್ಕಾಂಗೆ ಲಭಿಸಿದೆ. ಅಲ್ಲದೆ ರೂ. 206 ಲಕ್ಷ ರಾಜ್ಯ ಸರಕಾರದಿಂದ ಮಂಜೂರಾಗಿದ್ದು, ಮಿಕ್ಕ ಹಣ ಇನ್ನಷ್ಟೇ ಬಿಡುಗಡೆ ಆಗಬೇಕಿದೆ ಎಂದು ಇಲಾಖೆ ಮೂಲಗಳಿಂದ ಗೊತ್ತಾಗಿದೆ.
ಸೌಭಾಗ್ಯ ಯೋಜನೆ: ಇನ್ನು ಕೇಂದ್ರ ಸರಕಾರದಿಂದ ಇದುವರೆಗೂ ವಿದ್ಯುತ್ ಸಂಪರ್ಕ ಸಾಧ್ಯವಾಗದೇ ಇರುವ ಕುಟುಂಬಗಳಿಗೆ ಉಚಿತ ವಿದ್ಯುತ್ ಕಲ್ಪಿಸಲು ಸೌಭಾಗ್ಯ ಯೋಜನೆಯು ಜಾರಿಯಲ್ಲಿದೆ. ಈ ದಿಸೆಯಲ್ಲಿಯೂ ಚೆಸ್ಕಾಂನಿಂದ ಎಲ್ಲ ಗ್ರಾಮ ಪಂಚಾಯಿತಿಗಳು, ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಅಧಿಕಾರಿಗಳಿಂದ ಮಾಹಿತಿ ಕಲೆಹಾಕಲಾಗುತ್ತಿದೆ.
ರೂ. 10 ಕೋಟಿ ಯೋಜನೆ: ಹೀಗೆ ನೈಜ ಫಲಾನುಭವಿಗಳಿಂದ ಸೌಭಾಗ್ಯ
(ಮೊದಲ ಪುಟದಿಂದ) ಯೋಜನೆ ಮೂಲಕ, ವಿದ್ಯುತ್ ಸಂಪರ್ಕ ದೊರಕದಿರುವ ಮನೆಗಳಿಗೆ ಉಚಿತ ವಿದ್ಯುತ್ ಅಳವಡಿಸಲು ಯೋಜನೆಯನ್ನು ರೂಪಿಸಿ ರೂ. 19.08 ಕೋಟಿಯ ಪ್ರಸ್ತಾವನೆಯನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಲಾಗಿದೆ ಎಂದು ಲೆಕ್ಕಪತ್ರ ವಿಭಾಗದ ಅಧಿಕಾರಿ ದೇವಯ್ಯ ಮಾಹಿತಿ ನೀಡಿದ್ದಾರೆ.
4138 ಅರ್ಜಿಗಳು: ಈ ಯೋಜನೆಯ ಫಲಾನುಭವಿಗಳನ್ನು ಗುರುತಿಸುವ ಕೆಲಸ ನಡೆದಿದೆಯಾದರೂ, ಈಗಾಗಲೇ 4138 ಮಂದಿ ಸೌಭಾಗ್ಯ ಯೋಜನೆಯಡಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿದಾರರಲ್ಲಿ ಕೆಲವರು ಬಡತನ ರೇಖೆಗಿಂತ ಹೊರತಾಗಿ ಇರುವವರು ಮತ್ತು ಈಗಾಗಲೇ ವಿದ್ಯುತ್ ಹೊಂದಿಕೊಂಡು, ನೂತನವಾಗಿ ನಿರ್ಮಿಸಿರುವ ಬೇರೆ ಮನೆಗಳು, ಹೋಂಸ್ಟೇ ಇತ್ಯಾದಿಗೆ ಸಂಪರ್ಕಕ್ಕೆ ಮುಂದಾಗಿರುವ ಶಂಕೆ ಇದೆ.ಆ ದಿಸೆಯಲ್ಲಿ ಸಂಬಂಧಿಸಿದ ಸ್ಥಳೀಯ ಸಂಸ್ಥೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಮಾಹಿತಿ ಆಧರಿಸಿ ಫಲಾನುಭವಿಗಳನ್ನು ಅರ್ಹತೆಯ ಮೇರೆಗೆ ಗುರುತಿಸಲು ಕ್ರಮ ವಹಿಸಲಾಗಿದೆ. ಜಿಲ್ಲೆಯ ಅನೇಕ ಹಾಡಿಗಳಲ್ಲಿ ಇಂದಿಗೂ ವಿದ್ಯುತ್ ಸಂಪರ್ಕವಿಲ್ಲದ ಕುಟುಂಬಗಳಿದ್ದು, ಅಂತಹ ಕುಟುಂಬಗಳಿಗೆ ಸರಕಾರದ ಬೇರೆ ಬೇರೆ ಯೋಜನೆಗಳ ಮೂಲಕ ಸೌರ ವಿದ್ಯುತ್ ಬೆಳಕು ಕಲ್ಪಿಸುವ ಪ್ರಯತ್ನವೂ ಸಾಗಿದ ಎಂದು ಇಲಾಖಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಒಟ್ಟಿನಲ್ಲಿ ಕೇಂದ್ರ ಸರಕಾರದಿಂದ ಗ್ರಾಮೀಣ ವಿದ್ಯುತ್ ಸೌಲಭ್ಯಕ್ಕಾಗಿ ಸಿದ್ಧಗೊಳಿಸಿರುವ ರೂ. 19 ಕೋಟಿಯ ಪ್ರಸ್ತಾವನೆಗೆ ಅನುಮೋದನೆಯೊಂದಿಗೆ, ಹಣ ಲಭಿಸಿದರೆ ಕೊಡಗಿನ ಬಹುತೇಕ ವಿದ್ಯುತ್ ಸಮಸ್ಯೆ ಪೂರ್ಣಗೊಳ್ಳುವ ವಿಶ್ವಾಸವನ್ನು ಚೆಸ್ಕಾಂ ಅಧಿಕಾರಿಗಳು ‘ಶಕ್ತಿ’ಯೊಂದಿಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.