ಮಡಿಕೇರಿ, ಅ. 21: ಕೊಡವರ ಆಂತರಿಕ ರಾಜಕೀಯ ಸ್ವಯಂ ನಿರ್ಣಯ ಹಕ್ಕು ಮತ್ತು ಭೂ ರಾಜಕೀಯ ಆಶೋತ್ತರಕ್ಕಾಗಿ ಕಳೆದ 28 ವರ್ಷಗಳಿಂದ ಶಾಂತಿಯುತವಾಗಿ ರೂಪಿಸಿರುವ ಆಂದೋಲನದ ಅಂಗವಾಗಿ ಪ್ರತೀ ವರ್ಷ ನ. 24 ರಂದು ನಡೆಸಲಾಗುತ್ತಿದ್ದ ಕೊಡವ ನ್ಯಾಷನಲ್ ಡೇ ಕಾರ್ಯಕ್ರಮವನ್ನು ಈ ಬಾರಿ ಹುತ್ತರಿ ಹಬ್ಬದ ಹಿನ್ನೆಲೆ ಡಿ. 2 ರಂದು ಆಯೋಜಿಸಲಾಗುವದು ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು. ನಾಚಪ್ಪ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡವ ನ್ಯಾಷನಲ್ ಡೇ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನಡೆಸುವ ಬದಲು ವಾಯುವ್ಯ ಕೊಡಗಿನ ಏಳು ನಾಡುಗಳಲ್ಲಿ ಘಟಿಸಿದ ಜಲಸ್ಫೋಟ, ಭೂ ಸ್ಫೋಟದÀಲ್ಲಿ ಸಂತ್ರಸ್ತರಾದವರು ಮತ್ತೊಮ್ಮೆ ಅವರದ್ದೇ ಮೂಲ ನೆಲೆಯಲ್ಲಿ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುವ ಹಕ್ಕಿಗಾಗಿ ಸ್ಫೂರ್ತಿ ನೀಡುವ ದಿನವನ್ನಾಗಿ ಆಚರಿಸಲಾಗುವದು ಎಂದರು.

ಅತಿವೃಷ್ಟಿಯಿಂದ ಸಂಕಷ್ಟಕ್ಕೆ ಸಿಲುಕಿರುವ ಸಂತ್ರಸ್ತರಿಗಾಗಿ ವಿವಿಧ ಸಂಘ-ಸಂಸ್ಥೆಗಳು ಹಾಗೂ ದಾನಿಗಳಿಂದ ನೆರವಿನ ಮಹಾ ಪೂರವೇ ಹರಿದು ಬರುತ್ತಿದ್ದರೂ ಸರಕಾರ ಪುನರ್ ವಸತಿ ಕಲ್ಪಿಸುವ ನಿಟ್ಟಿನಲ್ಲಿ ಇನ್ನೂ ಕೂಡ ಸ್ಪಷ್ಟ ನಿಲುವನ್ನು ತಳೆದಿಲ್ಲವೆಂದು ನಾಚಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ಸಂತ್ರಸ್ತರಲ್ಲಿ ಕವಿದಿರುವ ಕಾರ್ಮೋಡವನ್ನು ನೀಗಿಸುವ ಬದಲು ಸರಕಾರ ಕೇವಲ ತಾತ್ಕಾಲಿಕ ಪರಿಹಾರ ವಿತರಣೆಯ ದೊಂಬರಾಟ ಪ್ರದರ್ಶಿಸುತ್ತಿದೆ. ಪರಿಹಾರದ ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತಿದೆ ಎಂದು ಟೀಕಿಸಿದರು.

ಕೊಡಗಿನಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರಾಕೃತಿಕ ವಿಕೋಪ ಮುಂದೆಯೂ ಮರುಕಳಿಸಬಹುದೆಂದು ಭಯ ಹುಟ್ಟಿಸಿ ಸಂತ್ರಸ್ತರನ್ನು ಅಲ್ಲಿಂದ ಶಾಶ್ವತವಾಗಿ ಹೊರಗಟ್ಟಲು ಕೆಲವು ಪರಿಸರವಾದಿಗಳು ಹುನ್ನಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ರೋಹಿಂಗ್ಯಾಗಳನ್ನು ಹೊರಗಟ್ಟಿ

ವಿದೇಶಿ ರೋಹಿಂಗ್ಯಗಳನ್ನು ಹೊರಹಾಕಲು ಕೇಂದ್ರ ಸರಕಾರ ರೂಪಿಸಿರುವ ನ್ಯಾಷನಲ್ ರಿಜಿಸ್ಟ್ರೇಷನ್ ಸರ್ಟಿಫಿಕೇಟ್ (ಎನ್‍ಆರ್‍ಸಿ) ಪೌರತ್ವ ನೋಂದಣಿಯನ್ನು ದೆಹಲಿ, ಕಾಶ್ಮೀರ, ಅಸ್ಸಾಂ, ಪಶ್ಚಿಮ ಬಂಗಾಳ ಮತ್ತು ಭಾರತದ ಈಶಾನ್ಯ ರಾಜ್ಯಗಳಲ್ಲಿ ಅನುಷ್ಠಾನಗೊಳಿಸಿರುವಂತೆ ಕೊಡಗು ಜಿಲ್ಲೆಯಲ್ಲೂ ಅಗತ್ಯವಾಗಿ ಅನುಷ್ಠಾನ ಗೊಳಿಸಬೇಕು ಮತ್ತು ಆ ಮೂಲಕ ಸಂತ್ರಸ್ತರ ಹೆಸರಿನಲ್ಲಿ ಕೊಡಗಿನಲ್ಲಿ ಅಧಿಕೃತ ನೆಲೆಕಂಡುಕೊಳ್ಳಲು ಹವಣಿಸುತ್ತಿರುವ ರೊಹಿಂಗ್ಯಾ ಮತ್ತು ಬಾಂಗ್ಲಾ ದೇಶಿಗರನ್ನು ಕೊಡಗಿನಿಂದ ಹೊರದಬ್ಬುವ ಮೂಲಕ ಆಂತರಿಕ ಭದ್ರತೆಯನ್ನು ಹೆಚ್ಚಿಸಬೇಕು ಎಂದು ನಾಚಪ್ಪ ಆಗ್ರಹಿಸಿದರು.

ಗೋಷ್ಠಿಯಲ್ಲಿ ಸಂಘಟನೆಯ ಪ್ರಮುಖರಾದ ಪುಲ್ಲೇರ ಕಾಳಪ್ಪ, ಕಾಟುಮಣಿಯಂಡ ಉಮೇಶ್, ಕಿರಿಯಮಾಡ ಶರೀನ್ ಹಾಗೂ ಕೂಪದಿರ ಸಾಬು ಉಪಸ್ಥಿತರಿದ್ದರು.