ಕುಶಾಲನಗರ, ಅ. 21: ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಮಿಷನ್ ಇಂದ್ರ ಧನುಷ್ ಆರೋಗ್ಯ ಕಾರ್ಯಕ್ರಮದ ಅಡಿಯಲ್ಲಿ ಮಾತೃಪೂರ್ಣ ಮತ್ತು ಮಾತೃ ವಂದನಾ ಕಾರ್ಯಕ್ರಮ ನಡೆಯಿತು. ಕುಶಾಲನಗರದ ಎಚ್ಆರ್ಪಿ ಅಂಗನವಾಡಿ ಕೇಂದ್ರದಲ್ಲಿ ನಡೆದ ಆರೋಗ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಹೆಚ್1.ಎನ್1 ಬಗ್ಗೆ ಮಾಹಿತಿ, ರೋಗ ಹರಡುವ ರೀತಿ, ಲಕ್ಷಣಗಳು, ಆ ಸೋಂಕನ್ನು ತಡೆಗಟ್ಟುವ ಮಾರ್ಗಗಳ ಬಗ್ಗೆ ಮಾಹಿತಿ ನೀಡಲಾಯಿತು.
ಇದರೊಂದಿಗೆ ಮಹಿಳೆಯರಿಗೆ ಅಯೋಡಿನ್ ಪ್ರಾಮುಖ್ಯತೆ ಬಗ್ಗೆ ಅರಿವು ಮೂಡಿಸಲಾಯಿತು. ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ಡಿ.ಎಂ. ಸುಶೀಲ ಮಾಹಿತಿ ಒದಗಿಸಿದರು. 5 ವರ್ಷದ ಒಳಗಿನ ಮಕ್ಕಳಿಗೆ ಮತ್ತು ಗರ್ಭಿಣಿಯರಿಗೆ ರೋಗನಿರೋಧಕ ಚುಚ್ಚುಮದ್ದು ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂಗನವಾಡಿ ಸಮನ್ವಯ ಸಲಹಾ ಸಮಿತಿಯ ಸದಸ್ಯೆ ಸಲೀನ ಡಿ. ಕುನ್ನ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅಂಗನವಾಡಿ ಕೇಂದ್ರದ ಶಿಕ್ಷಕಿ ಸುಚಿತ್ರ, ಮಾತೃ ವಂದನಾ ಮತ್ತು ಮಾತೃಪೂರ್ಣ ಕಾರ್ಯಕ್ರಮಗಳ ಬಗ್ಗೆ ವಿವರ ನೀಡಿದರು. ಕಾರ್ಯಕ್ರಮದಲ್ಲಿ ಕಿರಿಯ ಆರೋಗ್ಯ ಸಹಾಯಕಿ ಬಿ.ಡಿ. ಗೌರಮ್ಮ, ಆಶಾ ಕಾರ್ಯಕರ್ತೆಯರಾದ ನಸ್ರೀನ ತಾಜ್, ರಾಧಾ, ಮಂಜುಳಾ ಇದ್ದರು.