*ಸಿದ್ದಾಪುರ, ಅ. 21: 600ಕ್ಕೂ ಅಧಿಕ ಸಂಖ್ಯೆಯಲ್ಲಿ ಗ್ರಾಮಸ್ಥರು ಸೇರಿದ್ದ ವಾಲ್ನೂರು ತ್ಯಾಗತ್ತೂರು ಗ್ರಾಮಸಭೆಯಲ್ಲಿ ‘ಸೂರು’ ಇಲ್ಲದವರಿಗೆ ಮನೆ ಸಿಗಬಹುದೆಂಬ ನಿರೀಕ್ಷೆ ಹುಸಿಯಾಗಿದ್ದು, ಅಧ್ಯಕ್ಷರನ್ನು ಹಿಗ್ಗಾ ಮಗ್ಗಾ ತರಾಟೆಗೆ ತೆಗೆದುಕೊಂಡು ಸಭೆ ಗೊಂದಲದ ಗೂಡಾಗಿ ಪರಿವರ್ತನೆಗೊಂಡಿತು.

ವಾಲ್ನೂರು ತ್ಯಾಗತ್ತೂರು ಗ್ರಾಮ ಸಭೆಯು ವಾಲ್ನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಗ್ರಾ.ಪಂ.ಅಧ್ಯಕ್ಷೆ ನಾಗರತ್ನ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು.

ಪ್ರಧಾನಿ ನರೇಂದ್ರಮೋದಿ ಅವರ ಯೋಜನೆಯಂತೆ ಗ್ಯಾಸ್ ಒದಗಿಸುವದಾಗಿ ಪ್ರಮುಖರೊಬ್ಬರು ಹಣ ಪಡೆದಿದ್ದಾರೆ. ಆದರೆ ಗ್ಯಾಸ್ ಇನ್ನೂ ಸಿಕ್ಕಿಲ್ಲ, ಅಧ್ಯಕ್ಷರು ವಾರ್ಡಿಗೆ ಭೇಟಿ ಕೊಡುತ್ತಿಲ್ಲ ಏನೂ ಅಭಿವೃದ್ಧಿ ಕೆಲಸ ಮಾಡಿಲ್ಲ, ಚರಂಡಿ ನೀರು ಮನೆಗೆ ನುಗ್ಗುತ್ತಿದೆ, ಕಾಡಾನೆ ಕಾಟಕ್ಕೆ ಜನರು ರೋಸಿ ಹೋಗಿದ್ದಾರೆ ಎಂದು ಪುರಂದರ, ಮಂಡ್ರಮನೆ ನಿಕಿನ್ ಚಕ್ರವರ್ತಿ ಮತ್ತಿತರರು ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡರು.

ಜಿ.ಪಂ.ನಿಂದ ಗೋಣಿಗೆರೆ ಮನೆಗೆ ಹೋಗುವ ರಸ್ತೆ ನಿರ್ಮಿಸಿದ್ದು ಕಳಪೆಯಾಗಿದೆ ಎಂದು ಜಿ.ಪಂ. ಸದಸ್ಯೆ ಸುನಿತಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮಸ್ಥರಿಂದ ಮನೆ ಇಲ್ಲದವರ ಅರ್ಜಿಯನ್ನು ಗ್ರಾಮ ಪಂಚಾಯಿತಿಯವರು ಸ್ವೀಕರಿಸಿದ್ದಾರೆ. 600ಕ್ಕೂ ಅಧಿಕ ಸೂರು ಇಲ್ಲದವರು ಸಭೆಗೆ ಬಂದ ವೇಳೆ ಅರ್ಜಿ ಸ್ವೀಕರಿಸಿದ್ದೇವೆ. ಸರಕಾರದಿಂದ ಇನ್ನೂ ಜಾಗ ಗುರುತಿಸಿಲ್ಲ ಎಂಬ ಉತ್ತರದಿಂದ ನಿರಾಶರಾಗಿ ಕೆಲ ಗ್ರಾಮಸ್ಥರು ಸಭೆಯಿಂದ ಹೊರನಡೆದರು

ನೋಡಲ್ ಅಧಿಕಾರಿಯಾಗಿ ಪಶುವೈದ್ಯ ಇಲಾಖೆಯ ಸಂಜೀವ ಕುಮಾರ ಶಿಂಧೆ ಸೆಸ್ಕ್‍ನಿಂದ ಇಂಜಿನಿಯರ್, ದಿನೇಶ, ಜಿ.ಪಂ. ಇಂಜಿನಿಯರ್ ಫಯಾಜ್, ಗ್ರಾಮಲೆಕ್ಕಿಗರಾದ ಅನುಷಾ, ಅರಣ್ಯ ಇಲಾಖೆಯ ಜಗ್ಗ ಪೊಲೀಸ್ ಸಿಬ್ಬಂದಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸತೀಶ್, ಸದಸ್ಯರುಗಳಾದ ಕಮಲಮ್ಮ, ದಿನೇಶ, ಸುಧಿಕುಮಾರ್ ,ಅಜಿರಾ ಹಾಜರಿದ್ದರು.