ಮಡಿಕೇರಿ, ಅ. 21 : ಕೊಡಗು ಜಿಲ್ಲೆಯಲ್ಲಿ ಈ ವರ್ಷದಲ್ಲಿ ತಾ. 17 ರವರೆಗೆ 5 ಶಂಕಿತ ಎಚ್.1 ಎನ್.1 ಇನ್‍ಫ್ಲುಯೆಂಜಾ ರೋಗ ಪ್ರಕರಣಗಳು ವರದಿಯಾಗಿದ್ದು, ಅವುಗಳಲ್ಲಿ 03 ಪ್ರಕರಣಗಳಿಗೆ ಎಚ್1 ಎನ್1 ರೋಗ ಇರುವುದು ಪ್ರಯೋಗಾಲಯದ ವರದಿಯಿಂದ ದೃಡಪಟ್ಟಿದೆ ಎಂದು ಇಲಾಖೆ ವೈದ್ಯಾಧಿಕಾರಿ ಡಾ. ಎಂ. ಶಿವಕುಮಾರ್ ತಿಳಿಸಿದ್ದಾರೆ.

ಎಚ್.1 ಎನ್.1 ಇನ್‍ಫ್ಲುಯೆಂಜಾ ರೋಗವು ವೈರಸ್‍ನಿಂದ ಬರುವ ಕಾಯಿಲೆ ಆಗಿದೆ. ಎಚ್.1 ಎನ್.1 ಇನ್‍ಫ್ಲುಯೆಂಜಾ ರೋಗಕ್ಕೂ ಹಂದಿಗಳಿಗೂ ಯಾವದೇ ಸಂಬಂದವಿಲ್ಲ. ಹಂದಿ ಸಾಕಾಣಿಕೆ ಮಾಡುವದರಿಂದ ಮತ್ತು ಮಾಂಸ ಸೇವನೆಯಿಂದ ರೋಗವು ಹರಡುವದಿಲ್ಲ. ಈ ರೋಗವು ಕೇವಲ ಮನುಷ್ಯರಿಂದ ಮನುಷ್ಯರಿಗೆ ಮಾತ್ರ ಹರಡುತ್ತದೆ ಎಂದರು.

ಎಚ್.1 ಎನ್.1 ಇನ್‍ಫ್ಲುಯೆಂಜಾ ರೋಗ ಲಕ್ಷಣಗಳೆಂದರೆ, ತೀವ್ರ ಸ್ವರೂಪದ ಜ್ವರ, ಕೆಮ್ಮು ಮತ್ತು ಹಳದಿ ಕಫ, ನೆಗಡಿ ಮತ್ತು ಗಂಟಲು ಕೆರೆತ. ಅತೀ ಬೇಧಿ ವಾಂತಿ. ತೀವ್ರ ತರಹವಾದ ರೋಗ ಲಕ್ಷಣಗಳು ಅತೀಯಾದ ಮೈ ಕೈ ನೋವು, ಉಸಿರಾಟ ತೊಂದರೆ ಇರುತ್ತದೆ. ಸಾಮಾನ್ಯ ಪ್ಲೂ ಹರಡುವ ರೀತಿಯಲ್ಲಿಯೇ ಇನ್‍ಪ್ಲೂಯೆಂಜಾ ಎಚ್1ಎನ್1 ಹರಡುತ್ತದೆ. ಸಾಮಾನ್ಯವಾಗಿ ಸೋಂಕಿತರು ಕೆಮ್ಮಿದಾಗ, ಸೀನಿದಾಗ ಈ ವೈರಸ್‍ಗಳು ಹರಡುತ್ತವೆ. ವೈಯುಕ್ತಿಕ ಸ್ವಚ್ಛತೆ ಇಲ್ಲದೇ, ಮೂಗು ಬಾಯಿ ಆಗಿಂದಾಗ್ಗೆ ಮುಟ್ಟುವದರಿಂದಲೂ ಸೋಂಕು ಹರಡಬಹುದು. ಈ ಲಕ್ಷಣಗಳು ಕಂಡುಬಂದ ವ್ಯಕ್ತಿಯ ಮೂಗು, ಗಂಟಲಿನ ಸ್ರಾವದ ಲೇಪನವನ್ನು ಪ್ರಯೋಗಶಾಲೆಯಲ್ಲಿ ಪರೀಕ್ಷೆಗೆ ಒಳಪಡಿಸಿ ಸೋಂಕನ್ನು ದೃಢ ಪಡಿಸಲಾಗುತ್ತದೆ. ಪರೀಕ್ಷೆಯನ್ನು ಎಲ್ಲಾ ಶಂಕಿತ ಪ್ರಕರಣಗಳಿಗೆ ಮಾಡುವ ಅವಶ್ಯಕತೆ ಇರುವದಿಲ್ಲ. ಸರ್ಕಾರದ ಮಾರ್ಗದರ್ಶಿಯಂತೆ ಕೇವಲ ತೀವ್ರ ತರಹದ ಲಕ್ಷಣಗಳುಳ್ಳ ಪ್ರಕರಣಗಳಿಗೆ ಮಾತ್ರ ಪರೀಕ್ಷೆ ಮಾಡಬೇಕಾಗಿದೆ. ಎಚ್.1 ಎನ್.1 ಇನ್‍ಫ್ಲುಯೆಂಜಾ ಸೋಂಕಿಗೆ ಪರಿಣಾಮಕಾರಿಯಾದ ಔಷಧಿ ಲಭ್ಯವಿದೆ. ಜಿಲ್ಲೆಯಲ್ಲಿ ರೋಗ ಪ್ರಕರಣ ವರದಿಯಾದರೆ ಸೂಕ್ತ ಚಿಕಿತ್ಸೆ ನೀಡಲು ಟ್ಯಾಮಿಪ್ಲೂ ಔಷಧ ದಾಸ್ತಾನು ಇರುತ್ತದೆ ಎಂದರು.

ಹೆಚ್.1 ಎನ್.1 ಇನ್‍ಫ್ಲುಯೆಂಜಾ ರೋಗದ ಹೆಚ್ಚಿನ ಮಾಹಿತಿಗೆ ಆರೋಗ್ಯ ಇಲಾಖೆಯ ಸಹಾಯವಾಣಿ 104 ರ ಉಚಿತ ಸೌಲಭ್ಯ ಪಡೆಯಬಹುದು ಎಂದು ಡಾ. ಎಂ. ಶಿವಕುಮಾರ ತಿಳಿಸಿದ್ದಾರೆ.