ಮಡಿಕೇರಿ, ಅ. 21 : ಮಡಿಕೇರಿ ಸರ್ಕಾರಿ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಮಡಿಕೇರಿ ತಾಲೂಕಿನ ಕಾಟಕೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ಎನ್.ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರ ಮುಕ್ತಾಯಗೊಂಡಿತು.
ಮದೆ ಮಹೇಶ್ವರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಟಿ.ಎಸ್. ಗುಲಾಬಿ ಮಾತನಾಡಿ, ಉತ್ತಮ ನಾಯಕತ್ವ ಹಾಗೂ ವ್ಯಕ್ತಿತ್ವ ಬೆಳೆಸಲು ಸಹಕಾರಿಯಾದ ಇಂತಹ ಶಿಬಿರಗ ಳಿಂದ ವಿದ್ಯಾರ್ಥಿಗಳು ತಮ್ಮನ್ನು ಸಮಾಜ ಸೇವಾ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಎ.ಪಿ. ಧನಂಜಯ ಮಾತನಾಡಿ, ಇಂತಹ ಶಿಬಿರಗಳು ಯುವ ಜನಾಂಗದಲ್ಲಿ ವೈಚಾರಿಕ ಚಿಂತನೆ ಬೆಳೆಸಿಕೊಳ್ಳಲು ಸಹಕಾರಿಯಾಗಿವೆ ಎಂದರು.
ಕಾಲೇಜಿನ ಪ್ರಾಂಶುಪಾಲ ವಿ.ಆರ್. ವಿಜಯ್ ಮಾತನಾಡಿ, ಶಿಬಿರಾರ್ಥಿಗಳು ಶ್ರಮದಾನದ ಮೂಲಕ ಶಾಲೆ ಮತ್ತು ಗ್ರಾಮದಲ್ಲಿ ಸ್ವಚ್ಛ ಪರಿಸರ ನಿರ್ಮಾಣದ ಬಗ್ಗೆ ಜಾಗೃತಿ ಮೂಡಿಸಿದ್ದಾರೆ ಎಂದರು.
ಎನ್‍ಎಸ್‍ಎಸ್ ಅಧಿಕಾರಿ ಬಿ.ಡಿ. ರವೀಶ್ ಶಿಬಿರದಲ್ಲಿ ಕೈಗೊಂಡ ಸೇವಾ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು. ಮದೆ ಗ್ರಾ.ಪಂ. ಉಪಾಧ್ಯಕ್ಷೆ ಬಿ.ಎಸ್. ರತ್ನ, ಮುಖ್ಯ ಶಿಕ್ಷಕಿ ಜಾನಕಿ, ಎಸ್‍ಡಿಎಂಸಿ ಅಧ್ಯಕ್ಷ ಎನ್.ಬಿ. ನಂದಕುಮಾರ್, ಉಪನ್ಯಾಸಕ ಅಮೃತ್ ಇದ್ದರು. ಶಿಬಿರಾರ್ಥಿ ಶಿವ ಸ್ವಾಗತಿಸಿ, ವಿನುತ ಕಾರ್ಯಕ್ರಮ ನಿರ್ವಹಿಸಿದರು. ಮಳೆ ನೀರಿನ ಇಂಗು ಗುಂಡಿ ನಿರ್ಮಾಣದೊಂದಿಗೆ ಗಿಡಗಳನ್ನು ನೆಟ್ಟರು.
ಇದಕ್ಕೂ ಮುನ್ನ ಪ್ರತಿನಿತ್ಯ ನಡೆದ ಉಪನ್ಯಾಸ ಕಾರ್ಯಕ್ರಮಗಳಲ್ಲಿ ವಿವಿಧ ವಿಷಯಗಳ ಕುರಿತು ಸಂಪನ್ಮೂಲ ವ್ಯಕ್ತಿಗಳು ಮಾಹಿತಿ ನೀಡಿದರು.
ಮಡಿಕೇರಿ ಆಕಾಶವಾಣಿ ಕೇಂದ್ರದ ಪ್ರಸಾರ ನಿರ್ವಾಹಕ ಬಿ. ದಿಗ್ವಿಜಯ್ ‘ಸಮೂಹ ಮಾಧ್ಯಮಗಳಲ್ಲಿ ಯುವಕರ ಪಾತ್ರ’ ಹಾಗೂ ಕುಶಾಲನಗರ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಬಿ.ಜಿ. ಶಾಂತಿ ‘ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರ’ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಹಿರಿಯ ಸಿವಿಲ್ ನ್ಯಾಯಾಧೀಶೆ ನೂರುನ್ನೀಸ ‘ವಿದ್ಯಾರ್ಥಿಗಳಲ್ಲಿ ಕಾನೂನು ಅರಿವು’ ಕುರಿತು ಉಪನ್ಯಾಸ ನೀಡಿದರು.
ಮಡಿಕೇರಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ರಾಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕಿ ಹೆಚ್.ಪಿ. ನಿರ್ಮಲ ‘ದುಶ್ಚಟಗಳ ಮುಕ್ತ ಸಮಾಜ’ ಕುರಿತು, ಮದೆ ಮಹೇಶ್ವರ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಬಿ.ಆರ್. ಜೋಯಪ್ಪ, ‘ವಿದ್ಯಾರ್ಥಿಗಳಲ್ಲಿ ನಾಡಾಭಿಮಾನ ಹಾಗೂ ಸಾಹಿತ್ಯದ ಒಲವು ಕುರಿತು’ ಹಾಗೂ ಮಡಿಕೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕಿ ಎಂ.ಹೆಚ್. ಚಂದ್ರಕಲಾ, ‘ನಾಯಕತ್ವ ಹಾಗೂ ವ್ಯಕ್ತಿತ್ವ ವಿಕಸನ’ ಕುರಿತು ಉಪನ್ಯಾಸ ನೀಡಿದರು.
ಈ ಸಂದರ್ಭ ಶಾಲಾ ಆವರಣದಲ್ಲಿ ಪ್ರಾಂಶುಪಾಲ ವಿ.ಆರ್. ವಿಜಯ್, ಎನ್.ಎಸ್.ಎಸ್. ಅಧಿಕಾರಿ ಬಿ.ಡಿ. ರವೀಶ್, ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಂಯೋಜಕ ಟಿ.ಜಿ. ಪ್ರೇಮ ಕುಮಾರ್, ಉಪಾಧ್ಯಕ್ಷ ಎಂ.ಎನ್. ವೆಂಕಟನಾಯಕ್ ವಿದ್ಯಾರ್ಥಿಗ ಳೊಂದಿಗೆ ಜತೆಗೂಡಿ ಸಂಪಿಗೆ, ನೇರಳೆ ಗಿಡಗಳನ್ನು ನೆಡಲಾಯಿತು.