ಮಡಿಕೇರಿ, ಅ. 18: ನಾಡಿನ ಜೀವನದಿ ಲೋಕಕಲ್ಯಾಣಿ ಶ್ರೀ ಕಾವೇರಿಯ ಉಗಮ ಸ್ಥಾನವಾದ ಶ್ರೀ ತಲಕಾವೇರಿಯಲ್ಲಿ ತುಲಾ ಸಂಕ್ರಮಣದಂದು ಪವಿತ್ರ ತೀರ್ಥೋದ್ಭವ ಘಟಿಸಿದ ಮರುದಿನ ನಾಡಿನೆಲ್ಲೆಡೆ ಮಾತೆಯ ಆರಾಧನೆ ನಡೆಯುವದು ವಾಡಿಕೆ. ಇಲ್ಲಿನ ಸಂಪ್ರದಾಯದಂತೆ ತೀರ್ಥೋದ್ಭವದ ಮರುದಿನ ಬೆಳಗ್ಗಿನ ಜಾವ ಮನೆಮನೆಗಳಲ್ಲಿ ಸೂರ್ಯೋದಯಕ್ಕೂ ಮುಂಚಿತವಾಗಿ ಕಾವೇರಿಮಾತೆಯ ಪ್ರತಿರೂಪ ಸೃಷ್ಟಿಸಿ ಇದನ್ನು ಅವರವರ ಶಕ್ತ್ಯಾನುಸಾರ ಹೂವು, ಆಭರಣಗಳಿಂದ ಶೃಂಗರಿಸಿ ಪೂಜಿಸಲಾಗುತ್ತದೆ. ಕಣಿಪೂಜೆ ಎಂಬ ಈ ಪದ್ಧತಿ ಹಿಂದಿನಿಂದಲೂ ನಡೆದುಕೊಂಡು ಬರುತ್ತಿರುವ ಸಂಪ್ರದಾಯ. ಕಾವೇರಿಯ ಪ್ರತಿರೂಪವನ್ನು ಬಿದಿರಿನ ಆಕೃತಿ ಮೂಲಕ ತಯಾರಿಸಲಾಗುತ್ತದೆ. ಇದು ಇಲ್ಲದಿದ್ದಲ್ಲಿ ಸೌತೆಕಾಯಿ, ತೆಂಗಿನಕಾಯಿಯನ್ನೂ ಬಳಸಿ ಶೃಂಗರಿಸಲಾಗುವದು. ಕೆಂಪು ವಸ್ತ್ರದೊಂದಿಗೆ ಹೂವು, ಹಣ್ಣು, ಆಭರಣಗಳೊಂದಿಗೆ ದೀಪವಿಟ್ಟು ಅಲಂಕರಿಸಿ ಆರಾಧಿಸಲಾಗುತ್ತದೆ. ಜತೆಯಲ್ಲಿ ತೀರ್ಥವನ್ನು ಇಟ್ಟು ಪೂಜಿಸಲಾಗುತ್ತದೆ. ಬಹುತೇಕ ಮಹಿಳೆಯರು ಮಾತೆಯನ್ನು ಈ ರೀತಿಯಲ್ಲಿ ಅಲಂಕರಿಸುತ್ತಾರೆ. ಕೃಷಿಮಾಡಿದ ಗದ್ದೆಯಲ್ಲಿ ‘ಬೊತ್ತ್‍ಪುಟ್ಟ್’ ಇಡುವದು ಕೂಡ ಸೂರ್ಯೋದಯಕ್ಕೆ ಮುಂಚಿತವಾಗಿ ನಡೆಯುವದೂ ಸಂಪ್ರದಾಯಬದ್ಧವಾಗಿ ನಡೆಯುತ್ತದೆ. ಇದಾದ ಬಳಿಕ ಪೂಜಿಸಿದ ಆಕೃತಿಗೆ ಅಕ್ಕಿ ಹಾಕುವದರೊಂದಿಗೆ ಕಿರಿಯರು ಪೂರ್ವಿಕರನ್ನು ಸ್ಮರಿಸುವದು, ಹಿರಿಯರ ಕಾಲುಹಿಡಿದು ಆಶೀರ್ವಾದ ಪಡೆದುಕೊಳ್ಳುವದೂ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪದ್ಧತಿಯಾಗಿದ್ದು, ಇಂದು ಈ ಪರಂಪರೆಯನ್ನು ಆಚರಿಸಲಾಯಿತು.

ಜಿಲ್ಲೆಯಲ್ಲಿ ಕೊಡವ ಜನಾಂಗದವರು ಹೆಚ್ಚಾಗಿ ಈ ಪದ್ಧತಿಯನ್ನು ಪಾಲಿಸುತ್ತಾರೆ. ಅರೆಭಾಷಾ ಜನಾಂಗದದಲ್ಲೂ ಹಲವೆಡೆ ಈ ಆರಾಧನೆ ನಡೆಯುತ್ತದೆ. ಇದರೊಂದಿಗೆ ನಾಡಿನ ಹಲವೆಡೆಗಳಲ್ಲಿ ಸರ್ವ ಭಕ್ತಾಧಿಗಳಿಗೆ ವಿವಿಧ ಸಂಘ- ಸಂಸ್ಥೆಗಳ ಮೂಲಕ ತೀರ್ಥವನ್ನು ಕೊಂಡೊಯ್ದು ವಿತರಣೆ ಮಾಡಲಾಗಿದೆ. ವಿವಿಧ ಸಮಾಜ, ಸಂಸ್ಥೆಗಳಲ್ಲಿ ಈ ಪ್ರಯುಕ್ತ ಕಾವೇರಿ ತೀರ್ಥಪೂಜೆ, ಮೆರವಣಿಗೆಗಳೂ ನಡೆದವು. ಕೊಡಗು ಮಾತ್ರವಲ್ಲದೆ ಬೆಂಗಳೂರು, ಮೈಸೂರು ಸೇರಿದಂತೆ ಇತರೆಡೆಗಳಿಗೂ ತಲಕಾವೇರಿಯಿಂದ ತೀರ್ಥವನ್ನು ಕೊಂಡೊಯ್ದು ತೀರ್ಥಪೂಜೆಯೊಂದಿಗೆ ಭಕ್ತಾದಿಗಳಿಗೆ ಕಾವೇರಿ ತೀರ್ಥವನ್ನು ವಿತರಣೆ ಮಾಡಲಾಯಿತು.