ಮೂರ್ನಾಡು, ಅ. 14: ಅಗಸ್ತ್ಯೇಶ್ವರ ದೇವಾಲಯದಲ್ಲಿ ಅರ್ಚಕ ಚಂದ್ರಶೇಖರ್ ಐತಾಳ್ ಅವರ ನೇತೃತ್ವದಲ್ಲಿ ಬೆಳಿಗ್ಗೆ 5 ಗಂಟೆಯಿಂದ ಧಾರ್ಮಿಕ ಕೈಂಕರ್ಯಗಳು ಆರಂಭಗೊಂಡಿತು. ದೇವರಿಗೆ ಕರ್ಪೂರಾರತಿ, ರುದ್ರಾಭಿಷೇಕ, ಕುಂಕುಮಾರ್ಚನೆ, ಮಹಾಪೂಜೆ ಅರ್ಪಿಸಲಾಯಿತು. ಬಳಿಕ ಭಕ್ತಾಧಿಗಳು ತೀರ್ಥ ಪ್ರಸಾದ ಸ್ವೀಕರಿಸಿದರು.ಕಾವೇರಿ ನದಿಯ ಎಡಭಾಗದಲ್ಲಿರುವ ಕಾವೇರಿ ಕಣ್ವ ಮುನೀಶ್ವರ ದೇವಾಲಯದಲ್ಲಿ ಬೆಳಿಗ್ಗೆಯಿಂದ ಪೂಜಾ ಕಾರ್ಯಕ್ರಮಗಳು ಪ್ರಾರಂಭಗೊಂಡು ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರು ಮೊದಲು ಕಾವೇರಿ ಕಣ್ವ ಮುನೀಶ್ವರ ದೇವಾಲಯಕ್ಕೆ ಸಾಗಿ ಹಣ್ಣುಕಾಯಿ ಪೂಜೆ ಸಲ್ಲಿಸಿ ಅಲ್ಲಿಂದ ಅಗಸ್ತ್ಯೇಶ್ವರ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು.ಬಲಮುರಿ, ಮೂರ್ನಾಡು, ಪಾರಾಣೆ, ಬೇತ್ರಿ, ಹೊದ್ದೂರು, ನಾಪೋಕ್ಲು, ಕೊಂಡಂಗೇರಿ ಸುತ್ತಮುತ್ತಲ ಗ್ರಾಮಗಳಿಂದ ಭಕ್ತರು ಆಗಮಿಸಿ ಪೂಜಾ ಕಾರ್ಯದಲ್ಲಿ ಪಾಲ್ಗೊಂಡರು. ತುಲಾ ಸಂಕ್ರಮಣದ ಸಂದರ್ಭದಲ್ಲಿ ಕಾವೇರಿಯ ಉಗಮ ಸ್ಥಾನವಾದ ತಲಕಾವೇರಿಗೆ ತೆರಳಲು ಸಾಧ್ಯವಾಗದ ಭಕ್ತರು ಬಲಮುರಿಗೆ ಬಂದು ಕಾವೇರಿ ತೀರ್ಥಸ್ನಾನ ಮಾಡಿ ಪುನೀತರಾಗಿ ತೆರಳಿದರು. ಕಾವೇರಿ ನದಿಯ ತೀರದಲ್ಲಿ ಕೇಶ ಮುಂಡನ, ಪೂರ್ವಿಕರಿಗೆ ಪಿಂಡಾರ್ಪಣೆ ಕಾರ್ಯಗಳು ನಡೆದವು.

(ಮೊದಲ ಪುಟದಿಂದ) ಮಧ್ಯಾಹ್ನ ನೆರೆದ ಭಕ್ತಾಧಿಗಳಿಗೆ ಬಲಮುರಿ ಗ್ರಾಮದ ನೆರವಂಡ ಗಂಗಮ್ಮ ಮತ್ತು ಮಕ್ಕಳಿಂದ ಅನ್ನಸಂತರ್ಪಣೆ ನಡೆಯಿತು.

ಈ ಸಂದರ್ಭದಲ್ಲಿ ಅಗಸ್ತ್ಯೇಶ್ವರ ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಕೊಂಗೀರಂಡ ಸಾಧು ತಮ್ಮಯ್ಯ, ಕಾರ್ಯದರ್ಶಿ ಪೊನ್ನಚ್ಚನ ಜಯ, ಕಾವೇರಿ ಕಣ್ವ ಮುನೀಶ್ವರ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ನೆರವಂಡ ಎಂ. ಅಪ್ಪಚ್ಚು, ಕಾರ್ಯದರ್ಶಿ ಚೆಯ್ಯಂಡ ಗಣಪತಿ ಹಾಗೂ ಆಡಳಿತ ಮಂಡಳಿಯ ಸದಸ್ಯರು ಹಾಜರಿದ್ದರು.