ಶನಿವಾರಸಂತೆ, ಅ. 18: ಗ್ರಾಮ ಸಮಸ್ಯೆಗಳ ಪರಿಹಾರದ ಬಗ್ಗೆ ಏರ್ಪಡಿಸಿದ್ದ ಅಷ್ಟಮಂಗಲ ಪ್ರಶ್ನೆಯಲ್ಲಿ ತಿಳಿದು ಬಂದಂತೆ ಗ್ರಾಮ ದೇವತೆ ಹಾಗೂ ಪರಿವಾರ ದೇವತೆಗಳ ಜೀರ್ಣೋದ್ಧಾರ ಮತ್ತು ಪೂಜಾ ಕೈಂಕರ್ಯಗಳನ್ನು ನಡೆಸಬೇಕಿದೆ. ಅದಕ್ಕೆ ಊರಿನ ಜನತೆಯ ಸಂಪೂರ್ಣ ಸಹಕಾರ ಬೇಕು. ಜಾತಿ - ಮತ, ಭೇದವಿಲ್ಲದೆ ಸಂಘಟಿತರಾಗಬೇಕು ಎಂದು ರಾಮ ಮಂದಿರ ಸಮಿತಿ ಅಧ್ಯಕ್ಷ ಅರವಿಂದ್ ಕರೆ ನೀಡಿದರು.
ಪಟ್ಟಣದ ರಾಮ ಮಂದಿರದ ಸಭಾಂಗಣದಲ್ಲಿ ನಡೆದ ಗ್ರಾಮ ದೇವತೆಯಾದ ಬೀರ ಲಿಂಗೇಶ್ವರ, ಪ್ರಬಲ ಭೈರವಿ ಪರಿವಾರ ದೇವರುಗಳ ಜೀರ್ಣೋದ್ಧಾರ ಮತ್ತು ಪೂಜಾ ಕೈಂಕರ್ಯಗಳನ್ನು ಹಮ್ಮಿಕೊಳ್ಳುವ ಬಗ್ಗೆ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಊರಿನ 4 ದಿಕ್ಕಿನಲ್ಲಿರುವ 9 ಗ್ರಾಮ ದೇವತೆಗಳಿಗೆ ಸರಿಯಾಗಿ ಪೂಜೆ ನಡೆಯುತ್ತಿಲ್ಲ. ಪ್ರಬಲ ಭೈರವಿ ದೇವತೆ ಭೂಮಿಯಲ್ಲಿ 18 ಅಡಿ ಆಳದಲ್ಲಿ ಮುಚ್ಚಿಹೋಗಿದೆ. ದೀಪಾವಳಿ ಅಮಾವಾಸ್ಯೆ ದಿನ ನಡೆಸುವ ಜೀರ್ಣೋದ್ಧಾರ ಪೂಜಾ ಕಾರ್ಯಕ್ಕೆ ಪ್ರತಿ ಮನೆಯಿಂದ ರೂ. 1 ಸಾವಿರ ದೇಣಿಗೆ ನೀಡಬೇಕು ಎಂದು ಅರವಿಂದ್ ತಿಳಿಸಿದರು.
ಸಹಕಾರ ಸಂಘದ ಅಧ್ಯಕ್ಷ ಎಸ್.ಸಿ. ಶರತ್ ಮಾತನಾಡಿ, ಊರಿನ ಗ್ರಾಮ ದೇವತೆಗಳ ಜೀರ್ಣೋದ್ಧಾರ ಕಾರ್ಯಕ್ಕೆ ಜನತೆ ಜಾತಿ-ಮತ, ಭೇದವಿಲ್ಲದೆ ಸಂಘಟಿತರಾಗಿದ್ದಾರೆ. ವಿವಿಧ ಸಮಿತಿಗಳ ರಚನೆ ಮಾಡಿ ಪೂಜಾ ಕೈಂಕರ್ಯ ನಡೆಯಲಿ. ಜನತೆಯ ಈ ಒಗ್ಗಟ್ಟು ಜಿಲ್ಲೆಗೆ ಮಾದರಿಯಾಗಲಿ ಎಂದು ಹಾರೈಸಿದರು.
ಗ್ರಾಮ ಪಂಚಾಯಿತಿ ಸದಸ್ಯ ಸರ್ದಾರ್ ಅಹಮ್ಮದ್ ಮಾತನಾಡಿ, ಗ್ರಾಮಾಭಿವೃದ್ಧಿ ನಿಮಿತ್ತ ನಡೆಯುವ ಜೀರ್ಣೋದ್ಧಾರ ಕಾರ್ಯಕ್ಕೆ ವಿವಿಧ ಜಾತಿ, ಧರ್ಮದವರನ್ನು ಆಹ್ವಾನಿಸಿ ವಿಶ್ವಾಸಕ್ಕೆ ತೆಗೆದುಕೊಂಡಿರುವದು ಶ್ಲಾಘನೀಯ. ಸಂಪೂರ್ಣ ಸಹಕಾರ ನೀಡಲಾಗುವದು ಎಂದರು.
ಜಾಮೀಯ ಮಸೀದಿ ಅಧ್ಯಕ್ಷ ಅಕ್ಮಲ್, ಮುಖಂಡರಾದ ಪಟ್ಟಾಭಿರಾಂ ಹಾಗೂ ಕಾಂತರಾಜ್ ಮಾತನಾಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಗೌಸ್, ಪ್ರಮುಖರಾದ ದಿವಾಕರ್, ಮಂಜುನಾಥ್, ಮಹಮ್ಮದ್ ಪಾಶ, ಬಿ.ಎಸ್. ಪ್ರಕಾಶ್, ಎಸ್.ಆರ್. ಮಧು, ರವಿ, ಚಂದನ್, ಬಿ.ಎಸ್. ಕುಮಾರ್, ಗಣೇಶ್, ಯತೀಶ್, ಮಹೇಶ್ ಇತರರು ಉಪಸ್ಥಿತರಿದ್ದರು.
ಜೀರ್ಣೋದ್ಧಾರ ಸಮಿತಿಗೆ ಆಯ್ಕೆ: ಅಧ್ಯಕ್ಷರಾಗಿ ಎಸ್.ಸಿ. ಶರತ್ ಶೇಖರ್, ಗೌರವ ಅಧ್ಯಕ್ಷರಾಗಿ ಬಿ.ಡಿ. ಅರವಿಂದ್, ಉಪಾಧ್ಯಕ್ಷರಾಗಿ ಬಿ.ಕೆ. ಚಂದ್ರು, ಕಾರ್ಯದರ್ಶಿಯಾಗಿ ದಿವಾಕರ್, ಸಹ ಕಾರ್ಯದರ್ಶಿಯಾಗಿ ಎನ್.ಪಿ. ರವಿ, ಖಜಾಂಚಿಯಾಗಿ ಜೀವನ್ ಹಾಗೂ ನಿರ್ದೇಶಕರಾಗಿ 9 ಮಂದಿಯನ್ನು ಆಯ್ಕೆ ಮಾಡಲಾಯಿತು.