ಮಡಿಕೇರಿ, ಅ. 18: ತಲಕಾವೇರಿ ತೀರ್ಥೋದ್ಭವದ ಮರುದಿನವಾದ ಇಂದೂ ಭಗಂಡೇಶ್ವರ ದೇವಸ್ಥಾನ ಹಾಗೂ ಕಾವೇರಿ ಸನ್ನಿಧಿಯಲ್ಲಿ ಭಕ್ತಾದಿಗಳ ಸಂಖ್ಯೆ ವಿರಳವಾಗಿತ್ತು. ಆಗಮಿಸಿದ್ದ ಕಡಿಮೆ ಸಂಖ್ಯೆಯಲ್ಲಿ ಕಂಡು ಬಂದ ಭಕ್ತಾಧಿಗಳ ಪೈಕಿ ಜಿಲ್ಲೆಯ ಸ್ಥಳಿಕರೇ ಕಂಡುಬಂದರು. ನೆರೆಯ ಕೇರಳ ಹಾಗೂ ತಮಿಳುನಾಡು, ಮಂಡ್ಯ ವಿಭಾಗದಿಂದ ಆಗಮಿಸುತ್ತಿದ್ದ ಭಕ್ತರು ಹೆಚ್ಚಾಗಿ ಗೋಚರಿಸಲಿಲ್ಲ. ಈ ದಿನ ಆಯುಧ ಪೂಜೆ ಹಾಗೂ ತಾ. 19ರ ವಿಜಯದಶಮಿಯ ಹಿನ್ನೆಲೆಯಲ್ಲಿ ಹಾಗೂ ಕೇರಳ ರಾಜ್ಯದಲ್ಲಿ ಶಬರಿಮಲೆ ವಿಚಾರದ ಕುರಿತಾಗಿ ನಡೆಯುತ್ತಿರುವ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಜನತೆ ವಿರಳ ಸಂಖ್ಯೆಯಲ್ಲಿ ಕಂಡು ಬರುತ್ತಿರುವದಾಗಿ ಹೇಳಲಾಗುತ್ತಿದೆ.ತ್ರಿವೇಣಿ ಸಂಗಮ ಸೇರಿದಂತೆ ಭಗಂಡೇಶ್ವರ ಸನ್ನಿಧಿ ಹಾಗೂ ಕಾವೇರಿ ಕ್ಷೇತ್ರದಲ್ಲಿ ಆಗಮಿಸಿದ್ದ ಭಕ್ತರು ಸುಲಲಿತವಾಗಿ ಕೈಂಕರ್ಯ ನೆರವೇರಿಸಿದರು.