ಮಡಿಕೇರಿ, ಅ. 18: ಜನ ಯೋಜನಾ ಅಭಿಯಾನ ಪ್ರಮುಖವಾಗಿ ಸಮುದಾಯದ ಸಹಭಾಗಿತ್ವದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಯೋಜನೆಯನ್ನು ಸಿದ್ಧಪಡಿಸುವದಕ್ಕಾಗಿ ಪಂಚಾಯತ್ ರಾಜ್ ಸಂಸ್ಥೆಗಳ ಭಾಗಿದಾರರಾದ ಚುನಾಯಿತ ಜನಪ್ರತಿನಿಧಿಗಳು, ಅಧಿಕಾರಿ/ಸಿಬ್ಬಂದಿಗಳು, ಸ್ವ-ಸಹಾಯ ಸಂಘದ ಸದಸ್ಯರುಗಳು, ಸಮುದಾಯ ಆಧಾರಿತ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಸಮುದಾಯದ ಎಲ್ಲಾ ಪ್ರತಿನಿಧಿಗಳನ್ನು ಒಳಗೊಂಡಂತೆ ಅಭಿವೃದ್ಧಿ ಯೋಜನೆಯನ್ನು ತಯಾರಿಸುವದು ಹಾಗೂ ಪಂಚಾಯತ್ ರಾಜ್ ಸಂಸ್ಥೆಯಡಿಯಲ್ಲಿರುವ 29 ವಿಷಯಗಳಿಗೆ ಸಂಬಂಧಿಸಿದಂತೆ ಪುರಾವೆ ಆಧಾರಿತ ಪ್ರಗತಿಯನ್ನು ವಿಶ್ಲೇಷಿಸಿ ಸರ್ಕಾರದ ವಿವಿಧ ಯೋಜನೆಗಳ ಹಣಕಾಸು ಮತ್ತು ಇತರ ವಿಷಯಗಳ ಮಾಹಿತಿಯನ್ನು ಸಮುದಾಯಕ್ಕೆ ತಲಪಿಸುವದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.
ಈ ಹಿನ್ನೆಲೆ ಗ್ರಾಮ ಪಂಚಾಯಿತಿಗಳು ಪರಿಣಾಮಕಾರಿಯಾಗಿ ಈ ಯೋಜನೆಯನ್ನು ತಯಾರಿಸಲು ಅನುವಾಗುವಂತೆ ಜಿಲ್ಲಾ ಮಟ್ಟದ ನೋಡೆಲ್ ಅಧಿಕಾರಿಯಾಗಿ ಮುಖ್ಯ ಯೋಜನಾಧಿಕಾರಿಗಳನ್ನು, ತಾಲೂಕು ಮಟ್ಟದಲ್ಲಿ ನೋಡೆಲ್ ಅಧಿಕಾರಿಯಾಗಿ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನೋಡೆಲ್ ಅಧಿಕಾರಿಯಾಗಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ನೇಮಿಸಲಾಗಿರುತ್ತದೆ. ಈ ಯೋಜನೆಗೆ ಸಂಬಂಧಿಸಿದಂತೆ ಸೆಪ್ಟೆಂಬರ್ 27 ರಂದು ಜಿಲ್ಲಾ ಮಟ್ಟದಲ್ಲಿ ಎಲ್ಲಾ ಹಂತದ ನೋಡೆಲ್ ಮತ್ತು ಮೇಲ್ವಿಚಾರಣಾಧಿಕಾರಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯಿತಿಯ ಡಾಟಾ ಎಂಟ್ರಿ ಆಪರೇಟರ್‍ಗಳಿಗೆ ತರಬೇತಿಯನ್ನು ನೀಡಲಾಗಿರುತ್ತದೆ.
ತಾಲೂಕು ಮಟ್ಟದಲ್ಲಿ ಕೂಡ ತರಬೇತಿ ಕಾರ್ಯಾಗಾರವನ್ನು ಏರ್ಪಡಿಸಿ ಸೂಕ್ತ ಮಾರ್ಗದರ್ಶನ ನೀಡಲಾಗುತ್ತಿದೆ. ಈ ಯೋಜನೆಯ ಸಂಬಂಧ ಗ್ರಾಮಸಭೆಯನ್ನು ಆಯೋಜಿಸಿ “ನಮ್ಮ ಗ್ರಾಮ ನಮ್ಮ ಯೋಜನೆ”ಯನ್ನು ಸಿದ್ದಪಡಿಸಲು ಸರ್ಕಾರದ ಪತ್ರದಲ್ಲಿ ವೇಳಾಪಟ್ಟಿ ನಿಗದಿಪಡಿಸಿದ್ದು, ಅದರಂತೆ ಕ್ರಮವಹಿಸಬೇಕಾಗಿದೆ.
ಆದ್ದರಿಂದ ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಗ್ರಾಮ ಪಂಚಾಯಿತಿವಾರು ಏರ್ಪಡಿಸುವ ಗ್ರಾಮ ಸಭೆಗಳಲ್ಲಿ ಸಾರ್ವಜನಿಕರು ಭಾಗವಹಿಸಿ ಸಲಹೆ ನೀಡಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಈ ಮೂಲಕ ಕೋರಿದೆ. ಹೆಚ್ಚಿನ ಮಾಹಿತಿಗೆ ಜಿಲ್ಲಾ ನೋಡೆಲ್ ಅಧಿಕಾರಿ ಮೊಬೈಲ್ ಸಂಖ್ಯೆ 9480869004, ಯೋಜನಾ ವ್ಯವಸ್ಥಾಪಕರ ಮೊಬೈಲ್ ಸಂಖ್ಯೆ: 9743144135 ನ್ನು ಸಂಪರ್ಕಿಸಬಹುದು ಎಂದು ಜಿ.ಪಂ. ಸಿಇಒ ತಿಳಿಸಿದ್ದಾರೆ.
‘ಸಬ್ ಕೀ ಯೋಜನಾ ಸಬ್ ಕಾ ವಿಕಾಸ್’ ಯಡಿಯಲ್ಲಿ ‘ಜನ ಯೋಜನಾ ಅಭಿಯಾನ’ ಆಯೋಜನೆ ಹಾಗೂ 20-19-20ರ “ನಮ್ಮ ಗ್ರಾಮ ನಮ್ಮ ಯೋಜನೆ”ಯನ್ನು ಸಿದ್ಧಪಡಿಸಲು ವಿವರವಾದ ಮಾರ್ಗಸೂಚಿಯನ್ನು ಹೊರಡಿಸಲಾಗಿದ್ದು, ವಿವರಗಳನ್ನು ತಿತಿತಿ.gಠಿಜಠಿ.ಟಿiಛಿ.iಟಿನಲ್ಲಿ ನೋಡಬಹುದಾಗಿದೆ.