ಸೋಮವಾರಪೇಟೆ, ಅ. 18: ಇಲ್ಲಿನ ಮೋಟಾರ್ ಯೂನಿಯನ್ ವತಿಯಿಂದ ವರ್ಷಂಪ್ರತಿ ವಿವಿಧ ಕಾರ್ಯಕ್ರಮಗಳ ಮೂಲಕ ಅದ್ಧೂರಿಯಾಗಿ ನಡೆಯುತ್ತಿದ್ದ ಆಯುಧ ಪೂಜೋತ್ಸವ ಈ ಬಾರಿ ಸರಳ ಆಚರಣೆಗಷ್ಟೇ ಸೀಮಿತವಾಯಿತು.
ಜಿಲ್ಲೆಯಲ್ಲಿ ಉಂಟಾದ ಪ್ರಾಕೃತಿಕ ವಿಕೋಪ ಹಿನ್ನೆಲೆ ಮೋಟಾರ್ ಯೂನಿಯನ್‍ನಿಂದ ನಡೆಸಲು ಉದ್ದೇಶಿಸಲಾಗಿದ್ದ ಅದ್ಧೂರಿ ಉತ್ಸವ ರದ್ದುಗೊಳಿಸಿದ್ದು, ರೂ. 50 ಸಾವಿರ ಹಣವನ್ನು ಜಿಲ್ಲಾಧಿಕಾರಿಗಳ ಮೂಲಕ ಸಂತ್ರಸ್ತರ ನಿಧಿಗೆ ಅರ್ಪಿಸಲಾಗಿದೆ. ಇದನ್ನು ಹೊರತುಪಡಿಸಿದಂತೆ ಸಂಘದಿಂದ ಯಾವದೇ ಮನೋರಂಜನಾ ಕಾರ್ಯಕ್ರಮಗಳನ್ನು ನಡೆಸುತ್ತಿಲ್ಲ ಎಂದು ಸಂಘದ ಅಧ್ಯಕ್ಷ ಸಿ.ಸಿ. ನಂದ ತಿಳಿಸಿದರು.
ಪ್ರತಿ ವರ್ಷ ಉತ್ತರ ಕೊಡಗಿನ ದಸರಾದಂತೆಯೇ ಜನೋತ್ಸವವಾಗಿ ಜರುಗುತ್ತಿದ್ದ ಉತ್ಸವದಲ್ಲಿ ಹತ್ತು ಹಲವು ಕಾರ್ಯಕ್ರಮಗಳನ್ನು ಆಯೋಜಿಸ ಲಾಗುತ್ತಿತ್ತು. ಸಂಘದ ಸದಸ್ಯರಿಗೆ ಕ್ರೀಡಾಕೂಟ, ಅಲಂಕೃತ ವಾಹನ-ವರ್ಕ್‍ಶಾಪ್‍ಗಳಿಗೆ ಬಹುಮಾನ ವಿತರಣೆ, ಶಾಲಾ ಕಾಲೇಜು ಮಕ್ಕಳಿಗೆ ನೃತ್ಯ ಸ್ಪರ್ಧೆ, ಮಧ್ಯಾಹ್ನ ಸಾವಿರಾರು ಮಂದಿಗೆ ಅನ್ನಸಂತರ್ಪಣೆ, ಸಂಜೆ ಸಂಗೀತ ರಸಮಂಜರಿ ಕಾರ್ಯಕ್ರಮ ಗಳನ್ನು ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಡೆಸಿ ಜನೋತ್ಸವದಂತೆ ಆಯುಧ ಪೂಜೋತ್ಸವವನ್ನು ನಡೆಸಲಾಗುತ್ತಿತ್ತು. ಆದರೆ ಈ ಬಾರಿ ಸರಳ ಆಚರಣೆಗೆ ಉತ್ಸವ ಸೀಮಿತವಾಯಿತು.
ಸಂಘದ ಅಧ್ಯಕ್ಷ ಸಿ.ಸಿ. ನಂದ, ಕಾರ್ಯದರ್ಶಿ ಬಾಲಕೃಷ್ಣ ಪೂಜಾರಿ ಸೇರಿದಂತೆ ಪದಾಧಿಕಾರಿಗಳು ಇಂದು ಬೆಳಗ್ಗೆ ಪಟ್ಟಣದ ಎಲ್ಲಾ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿದರು. ನಂತರ ಇಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ದಾಖಲಾಗಿರುವ ಮಂದಿಗೆ ಹಣ್ಣು ಹಂಪಲು ವಿತರಿಸುವ ಮೂಲಕ ಪ್ರಸಕ್ತ ಸಾಲಿನ ಉತ್ಸವಕ್ಕೆ ತೆರ ಎಳೆದರು.
ಕಳೆದ ಅನೇಕ ವರ್ಷಗಳಿಂದ ಆಯುಧ ಪೂಜೋತ್ಸವದಂದು ಪಟ್ಟಣದಲ್ಲಿ ಸಾವಿರಾರು ಮಂದಿಯ ಓಡಾಟ ಕಂಡುಬರುತ್ತಿತ್ತು. ಮೋಟಾರ್ ಯೂನಿಯನ್‍ನಿಂದ ಆಯೋಜಿಸ ಲಾಗುತ್ತಿದ್ದ ಕಾರ್ಯಕ್ರಮದಲ್ಲಿ ಸಹಸ್ರಾರು ಮಂದಿ ಭಾಗಿಯಾಗುತ್ತಿದ್ದರು. ಪ್ರಸಕ್ತ ಸಾಲಿನಲ್ಲಿ ಅಂತಹ ಕಾರ್ಯಕ್ರಮಗಳು ಇಲ್ಲದ್ದರಿಂದ ಪಟ್ಟಣದಲ್ಲಿ ಅಷ್ಟೊಂದು ಜನ ಸಂಚಾರ ಕಂಡುಬರಲಿಲ್ಲ.
ಪಟ್ಟಣದಲ್ಲಿ ಹೂವು, ಬೂದುಕುಂಬಳ ಕಾಯಿ ಮಾರಾಟದ ಭರಾಟೆ ಜೋರಾಗಿತ್ತು. ಇದರೊಂದಿಗೆ ಮೀನು-ಮಾಂಸದಂಗಡಿಗಳ ಎದುರು ಜನದಟ್ಟಣೆ ಕಂಡುಬಂತು.
ರವೀಂದ್ರ ಅಭಿಮಾನಿಗಳಿಂದ ತೀರ್ಥ ವಿತರಣೆ: ಇಲ್ಲಿನ ಹರಪಳ್ಳಿ ರವೀಂದ್ರ ಅಭಿಮಾನಿಗಳ ಸಂಘದಿಂದ ತಲಕಾವೇರಿಯಿಂದ ತಂದ ತೀರ್ಥವನ್ನು ಪಟ್ಟಣದಲ್ಲಿ ಸಾರ್ವಜನಿಕರಿಗೆ ವಿತರಿಸಲಾಯಿತು. ಇಲ್ಲಿನ ಕಾವೇರಿ ಪ್ರತಿಮೆ ಬಳಿ ತೀರ್ಥಕ್ಕೆ ವಿಶೇಷ ಪೂಜೆ ಸಲ್ಲಿಸಿದ ಸಂಘದ ಅಧ್ಯಕ್ಷ ಹೆಚ್.ಎ. ನಾಗರಾಜ್ ಮತ್ತು ಪದಾಧಿಕಾರಿಗಳು, ಸಾರ್ವಜನಿಕರಿಗೆ ತೀರ್ಥ ವಿತರಿಸಿದರು.
ಲೋಕಕಲ್ಯಾಣಕ್ಕೆ ಹೋಮ: ಇದರೊಂದಿಗೆ ಪ್ರಸಕ್ತ ಸಾಲಿನಲ್ಲಿ ಉಂಟಾದ ಪ್ರಾಕೃತಿಕ ವಿಕೋಪ ಮುಂದಿನ ದಿನಗಳಲ್ಲಿ ಎದುರಾಗದಿರಲಿ ಎಂಬ ಪ್ರಾರ್ಥನೆಯೊಂದಿಗೆ ಕಾವೇರಿ ಪ್ರತಿಮೆ ಬಳಿ ಹರಪಳ್ಳಿ ರವೀಂದ್ರ ಅಭಿಮಾನಿಗಳ ಸಂಘದಿಂದ ವಿಶೇಷ ಪೂಜೆ ಹಾಗೂ ಹೋಮ ನಡೆಯಿತು.
ಉದ್ಯಮಿ ಹಾಗೂ ದಾನಿಗಳಾದ ಹರಪಳ್ಳಿ ರವೀಂದ್ರ ಅವರು ಹೋಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಕೊಡಗಿನ ಕಾವೇರಿ ದಕ್ಷಿಣದ ಗಂಗೆಯಾಗಿ ಕೋಟ್ಯಾಂತರ ಮಂದಿಗೆ ಜೀವದಾತೆಯಾಗಿದ್ದಾಳೆ. ನೆಲ ಜಲದ ರಕ್ಷಣೆ ಪ್ರತಿಯೋರ್ವರ ಸಂಕಲ್ಪವಾಗಬೇಕು. ಕೊಡಗಿನಲ್ಲಿ ಮುಂದಿನ ದಿನಗಳಲ್ಲಿ ಯಾವದೇ ವಿಕೋಪಗಳು ಎದುರಾಗದಂತೆ ಮಾತೆ ಕಾವೇರಿ ಕಾಪಾಡಲಿ ಎಂದು ಪ್ರಾರ್ಥಿಸಿದರು.