ಕುಶಾಲನಗರ, ಅ. 18: ಪ್ರಕೃತಿ ವಿಕೋಪದಿಂದ ನಲುಗಿರುವ ಜಿಲ್ಲೆ ಗತವೈಭವಕ್ಕೆ ಮರಳುವಂತೆ ಕ್ರಮಕೈಗೊಳ್ಳಲು ರಾಜ್ಯ ಸರಕಾರ ಕೊಡಗು ಅಭಿವೃದ್ಧಿ ಪ್ರಾಧಿಕಾರ ರಚಿಸಬೇಕಿದೆ ಎಂದು ಚಿತ್ರನಟ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಆಗ್ರಹಿಸಿದ್ದಾರೆ.
ಬಾರವಿ ಕನ್ನಡ ಅಭಿಮಾನಿ ಸಂಘದ ಆಶ್ರಯದಲ್ಲಿ ಕಾವೇರಿ ಸಂಕ್ರಮಣದ ಅಂಗವಾಗಿ ಕುಶಾಲನಗರದ ಕೊಪ್ಪ ಕಾವೇರಿ ಪ್ರತಿಮೆ ಬಳಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕಾವೇರಿ ಕಲಾರತ್ನ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಉಂಟಾಗಿರುವ ದುರಂತ ಪ್ರಕೃತಿಯ ಸಹಜ ಕ್ರಿಯೆಯಾಗಿದೆ. ಸಂತ್ರಸ್ತರ ನೆರವಿಗೆ ಉಳ್ಳವರು ತಮ್ಮ ಕೈಲಾದಷ್ಟು ಸಹಕಾರ ನೀಡುವಂತೆ ಕರೆ ನೀಡಿದರು. ತಮ್ಮ ನೇತೃತ್ವದಲ್ಲಿ ನಾಟಕ ಪ್ರದರ್ಶನ ಹಮ್ಮಿಕೊಂಡು ಆ ಮೂಲಕ ಸಂಗ್ರಹವಾಗುವ ಹಣವನ್ನು ಜಿಲ್ಲೆಯ ಸಂತ್ರಸ್ತರ ಕಲ್ಯಾಣಕ್ಕಾಗಿ ವಿನಿಯೋಗಿಸ ಲಾಗುವದು ಎಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಮಾಜಿ ಸಚಿವ ಸಿ.ಎಚ್.ವಿಜಯಶಂಕರ್ ಮಾತನಾಡಿ, ವಿಜಯದಶಮಿಯ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಬಾರವಿ ಸಹೋದರರಾದ ಬಬೀಂದ್ರ ಪ್ರಸಾದ್, ರವೀಂದ್ರ ಪ್ರಸಾದ್, ವಿಜಯೇಂದ್ರ ಪ್ರಸಾದ್, ಉದ್ಯಮಿಗಳಾದ ಸಾತಪ್ಪನ್, ಕಸಾಪ ಜಿಲ್ಲಾಧ್ಯಕ್ಷ ಬಿ.ಎಸ್.ಲೋಕೇಶ್ ಸಾಗರ್, ಟಿ.ಆರ್. ಪ್ರಭುದೇವ್, ಕಮಲಾ ಗಣಪತಿ, ಕರವೇ ಜಿಲ್ಲಾಧ್ಯಕ್ಷ ವೆಂಕಟೇಶ್ ಪೂಜಾರಿ ಮತ್ತಿತರರು ಇದ್ದರು.
ಪವಿತ್ರ ಕಾವೇರಿ ತೀರ್ಥವನ್ನು ಇದೇ ಸಂದರ್ಭ ಭಕ್ತಾದಿಗಳಿಗೆ ವಿತರಿಸಲಾಯಿತು. ನಂತರ ಅನ್ನಸಂತರ್ಪಣೆ ಕಾರ್ಯ ನಡೆಯಿತು.