ಮತಯಾಚನೆಯಲ್ಲಿ ತೊಡಗಿರುವ ಅಭ್ಯರ್ಥಿಗಳು

ಕೂಡಿಗೆ, ಅ. 17: ಕುಶಾಲನಗರ ಹೋಬಳಿ ವ್ಯಾಪ್ತಿಯಲ್ಲಿ ಮೂರು ಕೃಷಿ ಪತ್ತಿನ ಸಹಕಾರ ಸಂಘಗಳ ನಿರ್ದೇಶಕರ ಆಯ್ಕೆಗೆ ಚುನಾವಣೆಯ ಪ್ರಕ್ರಿಯೆ ಬರದಿಂದ ಸಾಗುತ್ತಿವೆ. ಹೋಬಳಿಯ ಕೂಡಿಗೆ, ತೊರೆನೂರು, ನಂಜರಾಯಪಟ್ಟಣ ಕೃಷಿ ಪತ್ತಿನ ಸಹಕಾರ ಸಂಘಗಳ ಚುನಾವಣೆಯು ಅಕ್ಟೋಬರ್ ತಿಂಗಳ ಕೊನೆಯ ವಾರದಲ್ಲಿ ನಡೆಯಲಿದ್ದು, ಈಗಾಗಲೇ ಸಂಘದ ಸದಸ್ಯರು ನಾಮಪತ್ರ ಸಲ್ಲಿಕೆಯಲ್ಲಿ ಮುಂದಾಗಿದ್ದಾರೆ. ನಾಮಪತ್ರ ಸಲ್ಲಿಕೆಯಲ್ಲಿ ಒಂದೊಂದು ಸಂಘಕ್ಕೆ ಆಯ್ಕೆ ಬಯಸಿರುವ ನಿರ್ದೇಶಕರು ಒಂದೊಂದು ಗುಂಪುಗಳನ್ನು ರಚಿಸಿಕೊಂಡು ಸಂಘದ ಸದಸ್ಯರಲ್ಲಿ ಮತಯಾಚನೆ ಮಾಡುತ್ತಿದ್ದಾರೆ.

ಕೂಡಿಗೆ ರಾಮೇಶ್ವರ ಸಹಕಾರ ಸಂಘವು 14 ಗ್ರಾಮಗಳನ್ನು ಒಳಗೊಂಡಿದೆ. ಈ ಸಂಘವು ಮುಂದಿನ ಐದು ವರ್ಷ ಅವಧಿಯ ಆಡಳಿತ ಮಂಡಳಿಗಾಗಿ ಒಟ್ಟು 13 ನಿರ್ದೇಶಕರ ಆಯ್ಕೆಗೆ ಸಿದ್ಧಗೊಂಡಿದೆ. ಇವುಗಳಲ್ಲಿ ಸಾಲಗಾರರ ಕ್ಷೇತ್ರದಿಂದ ಹನ್ನೆರಡು ಸ್ಥಾನಗಳು ಇದ್ದು, ಪರಿಶಿಷ್ಟ ಜಾತಿಗೆ 1, ಪರಿಶಿಷ್ಟ ಪಂಗಡ 1, ಮಹಿಳೆಯರಿಗೆ 2, ಹಿಂದುಳಿದ ವರ್ಗ (ಪ್ರವರ್ಗ-ಎ) 2, ಸಾಮಾನ್ಯ ಸ್ಥಾನ ಒಟ್ಟು 6ಗಳಿದ್ದು, 1 ಸ್ಥಾನವು ಸಾಲಗಾರರಲ್ಲದ ಕ್ಷೇತ್ರವಾಗಿದೆ. ಈಗಾಗಲೇ 42 ನಾಮಪತ್ರಗಳು ಸಲ್ಲಿಕೆಯಾಗಿವೆ.

ನಂಜರಾಯಪಟ್ಟಣ ಸಂಘದ ವ್ಯಾಪ್ತಿಯಲ್ಲಿ 9 ಗ್ರಾಮಗಳಿದ್ದು, ಗ್ರಾಮಗಳ ರೈತ ಸದಸ್ಯರು ಇದ್ದು,ಈ ಸಂಘದಲ್ಲಿ 13 ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಈಗಾಗಲೇ 10 ಸದಸ್ಯರು ನಾಮಪತ್ರ ಸಲ್ಲಿಸಿದ್ದಾರೆ.

ಸಮೀಪದ ತೊರೆನೂರು ಸಂಘವು 7 ಗ್ರಾಮಗಳನ್ನು ಒಳಗೊಂಡಿದ್ದು, 13 ನಿರ್ದೇಶಕ ಆಯ್ಕೆಗೆ ಚುನಾವಣೆಯು ನಡೆಯಲಿದ್ದು, ಈಗಾಗಲೇ 8 ಸದಸ್ಯರು ನಾಮಪತ್ರಗಳನ್ನು ಸಲ್ಲಿಸಿದ್ದಾರೆ.

ಸಹಕಾರ ಸಂಘದ ಚುನಾವಣೆಯು ಕಳೆದ ಚುನಾವಣೆಗಳಿಗಿಂತಲೂ ವಿಭಿನ್ನ ರೀತಿಯಲ್ಲಿ ಹಾಗೂ ಗ್ರಾಮ ಪಂಚಾಯಿತಿ ಮತ್ತು ವಿಧಾನಸಭೆ ಮತ್ತು ತಾಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆಯ ರೀತಿಯಲ್ಲಿ ಸ್ಪರ್ಧಾಳುಗಳು ಎಲ್ಲಾ ಗ್ರಾಮಗಳಿಗೂ ತೆರಳಿ ತಮ್ಮ ಗೆಲವಿಗಾಗಿ ಸದಸ್ಯರಲ್ಲಿ ಮತಯಾಚನೆ ಮಾಡುತ್ತಿದ್ದಾರೆ.

ಕೂಡಿಗೆ ಸಹಕಾರ ಸಂಘಕ್ಕೆ ರಾಜ್ಯ ಸರ್ಕಾರ ಜೆಡಿಎಸ್-ಕಾಂಗ್ರೆಸ್ ಮೈತ್ರಿಯಾಗಿರುವ ಹಿನ್ನೆಲೆ ಕೂಡಿಗೆಯ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಮುಖಂಡರು ಮೈತ್ರಿ ಮಾಡಿಕೊಂಡು ಮತಯಾಚನೆಯಲ್ಲಿ ತೊಡಗಿರುವದು ಕಂಡುಬರುತ್ತಿದೆ.

ಇದೇ ಮಾದರಿಯಲ್ಲಿ ಬಿಜೆಪಿಯ ಅಭ್ಯರ್ಥಿಗಳು ಅವರವರ ಮುಖಂಡರ ನಾಯಕತ್ವದಲ್ಲಿ ಚುನಾವಣೆ ಎದುರಿಸಲು ಮುಂದಾಗಿದ್ದಾರೆ. ಪಕ್ಷೇತರರ ಮಾದರಿಯಲ್ಲಿ ಮಹಿಳೆಯರು ಮತ್ತು ಪುರುಷರು 14 ಗ್ರಾಮಗಳಿಗೂ ತೆರಳಿ ಸಂಘದ ಸದಸ್ಯರಾಗಿರುವವರನ್ನು ಭೇಟಿಯಾಗಿ ಮತಯಾಚನೆಯಲ್ಲಿ ತೊಡಗಿದ್ದಾರೆ.

ಸಹಕಾರ ಸಂಘವು ಇದೀಗ ರಾಜಕೀಯ ಅಖಾಡವೇ ಆಗಿದ್ದು, ರಾಜಕೀಯ ಪಕ್ಷಗಳ ಮೂಲಕವೇ ಮತಯಾಚನೆ ಮಾಡುತ್ತಿದ್ದಾರೆ. ಸಹಕಾರ ಸಂಘದ ಸ್ಪರ್ಧಾ ಕಣದಲ್ಲಿರುವ ಅಭ್ಯರ್ಥಿಗಳು ಪ್ರಕೃತಿ ವಿಕೋಪದ ಹಿನ್ನೆಲೆ ಮುಂದೂಡಲಾಗಿದ್ದ ಚುನಾವಣೆಯು ಇದೀಗ ರಂಗೇರಿದ್ದು, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಎನ್. ರಾಜಾರಾವ್ ಅವರ ನೇತೃತ್ವದ ತಂಡ ಮನೆ ಮನೆಗಳಿಗೆ ತೆರಳಿ ಮತಯಾಚನೆಯಲ್ಲಿ ತೊಡಗಿದ್ದಾರೆ.

ಈ ಸಂದರ್ಭ ಸಹಕಾರ ಸಂಘದ ಮಾಜಿ ಅಧ್ಯಕ್ಷ ಕೆ.ಕೆ. ಹೇಮಂತ್‍ಕುಮಾರ್, ಹಾಸನ ಹಾಲು ಒಕ್ಕೂಟದ ಕೊಡಗು ಜಿಲ್ಲಾ ನಿರ್ದೇಶಕ ಕೆ.ಟಿ. ಅರುಣ್‍ಕುಮಾರ್, ತಮ್ಮಣ್ಣೇಗೌಡ, ಲಕ್ಷ್ಮಣ್‍ರಾಜ್ ಅರಸ್, ಕುಮಾರ್, ರಮೇಶ್, ಕೃಷ್ಣೇಗೌಡ, ಸುರೇಶ್, ಪಾರ್ವತಮ್ಮ ರಾಮೇಗೌಡ ಮತಯಾಚನೆಯಲ್ಲಿ ತೊಡಗಿದ್ದರು.