ಮಡಿಕೇರಿ, ಅ. 17: ಜಿಲ್ಲೆಯಲ್ಲಿ ಉಂಟಾದ ಪ್ರಾಕೃತಿಕ ವಿಕೋಪದ ಹಿನ್ನೆಲೆ ಹ್ಯೂಮಾನಿಟೇರಿಯನ್ ರಿಲೀಫ್ ಸೊಸೈಟಿ (ಹೆಚ್.ಆರ್.ಎಸ್) ಹಾಗೂ ಕೊಡಗು ರಿಲೀಫ್ ಸೆಲ್ ವತಿಯಿಂದ ಕಳೆದ ತಿಂಗಳು ಮಡಿಕೇರಿಯಲ್ಲಿ ನಡೆಸಲಾದ ಉಚಿತ ವೈದ್ಯಕೀಯ ಶಿಬಿರದಲ್ಲಿ ಗುರುತಿಸಲಾದ ದೃಷ್ಟಿದೋಷವುಳ್ಳ 51 ಮಂದಿಗೆ ಉಚಿತವಾಗಿ ಕನ್ನಡಕಗಳನ್ನು ವಿತರಿಸಲಾಯಿತು.
ಕಾಲೇಜು ರಸ್ತೆಯ ಕಾರುಣ್ಯ ಸದನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಡಿಕೇರಿಯ ಹಿರಿಯ ಮೂಳೆ ತಜ್ಞ ಡಾ. ರವಿ ಅಪ್ಪಾಜಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಈ ಸಂದರ್ಭ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ, ಪ್ರಕೃತಿ ವಿಕೋಪದಿಂದ ತತ್ತರಿಸಿದ ಕೊಡಗನ್ನು ಪುನರ್ ನಿರ್ಮಿಸಲು ಎಲ್ಲರೂ ಕೈಜೋಡಿಸಬೇಕು. ಕೊಡಗು ಪುನರ್ ನಿರ್ಮಾಣ ಕಷ್ಟದ ಕೆಲಸವೇನಲ್ಲ. ಆದರೆ ಹೃದಯ ವೈಶಾಲ್ಯ ಮತ್ತು ಸೇವೆಯ ನಿಸ್ವಾರ್ಥತೆ ಬಹು ಮುಖ್ಯ. ಕೊಡಗಿನ ಜನತೆ ಸ್ವಾವಲಂಭಿಗಳು ಮತ್ತು ಘನತೆಯ ಜೀವನ ನಡೆಸುವವರು. ಈ ಸ್ವಾವಲಂಭನೆಗೆ ಮತ್ತು ಘನತೆಗೆ ಚ್ಯುತಿ ಬಾರದಂತೆ ಸೇವಾ ಸಂಸ್ಥೆಗಳು ಕೆಲಸ ನಿರ್ವಹಿಸಲಿ ಎಂದು ಕಿವಿಮಾತು ಹೇಳಿದರು.
ಮಡಿಕೇರಿಯ ಉದ್ಯಮಿ ಹಾಗೂ ಸಮಾಜ ಸೇವಕ ಚೇಂದ್ರಿಮಾಡ ಮೋಹನ್ ಮುತ್ತಣ್ಣ, ವಕ್ಫ್ ಮಂಡಳಿ ನಿವೃತ್ತ ಅಧಿಕಾರಿ ಎಂ.ಹೆಚ್. ಮುಹಮ್ಮದ್, ಜಮಾಅತೆ ಇಸ್ಲಾಮೀ ಹಿಂದ್ ವಲಯ ಸಂಚಾಲಕ ಯು. ಅಬ್ದು ಸ್ಸಲಾಂ ಮಾತನಾಡಿದರು. ಜಿಲ್ಲಾ ಸಂಚಾಲಕ ಸಿ.ಹೆಚ್. ಅಫ್ಸ್‍ರ್ ಅಧ್ಯಕ್ಷತೆ ವಹಿಸಿದ್ದರು. ಕೊಡಗು ರಿಲೀಫ್ ಸೆಲ್‍ನ ಮೇಲ್ವಿಚಾರಕ ಎಂ.ಹೆಚ್. ಮುಹಮ್ಮದ್ ಮುಸ್ತಫಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಿ.ಕೆ. ಅಬ್ದುಲ್ ರೆಹೆಮಾನ್ ಕಾರ್ಯಕ್ರಮಗಳನ್ನು ನಿರೂಪಿಸಿದರು. ಹ್ಯಾರಿಸ್ ವಂದಿಸಿದರು.
ಮನೆ ನಿರ್ಮಾಣ ಯೋಜನೆಗೆ ಶಿಲಾನ್ಯಾಸ
ಜಿಲ್ಲೆಯಲ್ಲಿ ಉಂಟಾದ ಪ್ರಾಕೃತಿಕ ವಿಕೋಪದ ಹಿನ್ನೆಲೆ ಹ್ಯೂಮಾನಿ ಟೇರಿಯನ್ ರಿಲೀಫ್ ಸೊಸೈಟಿ (ಹೆಚ್.ಆರ್.ಎಸ್) ಹಾಗೂ ಕೊಡಗು ರಿಲೀಫ್ ಸೆಲ್ ವತಿಯಿಂದ ನಿರ್ಮಿಸಿ ನೀಡಲಾಗುತ್ತಿರುವ ಮನೆಗಳ ಶಿಲಾನ್ಯಾಸ ಕಾರ್ಯಕ್ರಮ ಮಡಿಕೇರಿಯ ತ್ಯಾಗರಾಜ ನಗರದಲ್ಲಿ ನಡೆಯಿತು. ದಕ್ಷಿಣ ಕನ್ನಡ ಜಿಲ್ಲೆ ಬೋಳಂಗಡಿಯ ಹವ್ವಾ ಮಸೀದಿಯ ಖತೀಬರೂ ವಿದ್ವಾಂಸರೂ ಆದ ಮೌ. ಯಹ್ಯಾ ತಂಞಳ್ ಮದನಿಯವರು ಶಿಲಾನ್ಯಾಸವನ್ನು ನೆರವೇರಿಸಿದರು.
ಮಡಿಕೇರಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಐ. ಮುನೀರ್‍ಅಹಮದ್, ಉದ್ಯಮಿಗಳಾದ ನಾಸಿರ್, ಅಲ್ ಅಮೀನ್ ಟ್ರಸ್ಟ್‍ನ ಅಧ್ಯಕ್ಷ ಹಾಗೂ ಸಮಾಜ ಸೇವಕ ಅಬ್ದುಲ್ ಲತೀಫ್ ಹಾಜಿ, ಜಮಾಅತೆ ಇಸ್ಲಾಮೀ ಹಿಂದ್ ವಲಯ ಸಂಚಾಲಕ ಯು. ಅಬ್ದು ಸ್ಸಲಾಂ, ಜಿಲ್ಲಾ ಸಂಚಾಲಕ ಸಿ.ಹೆಚ್. ಅಫ್ಸ್‍ರ್, ಮಕ್ಕಾ ಮಸೀದಿ ಖತೀಬ್ ಮೌ. ಅಬ್ದುಲ್ ಹಕೀಂ, ಕಾರುಣ್ಯ ಟ್ರಸ್ಟ್‍ನ ಅಧ್ಯಕ್ಷ ಜಿ.ಹೆಚ್. ಮುಹಮ್ಮದ್ ಹನೀಫ್ ಹಾಜರಿದ್ದರು. ಹೆಚ್.ಆರ್.ಎಸ್. ರಾಜ್ಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮರ್ಕಡ ಅಧ್ಯಕ್ಷತೆ ವಹಿಸಿದ್ದರು. ಕೆ.ಟಿ. ಬಷೀರ್ ಸ್ವಾಗತಿಸಿದರು.