ಮಡಿಕೇರಿ, ಅ. 15: ಪರಿಸರ ವಾದ ವಿಕೋಪಕ್ಕೆ ಹೋಗುತ್ತಿದೆ. ಈ ಹಿಂದೆ ಅರಣ್ಯ ಅವಲಂಬಿಸಿಕೊಂಡೇ ಜೀವನ ಸಾಗುತ್ತಿತ್ತು. ಈಗ ಮನಷ್ಯರು ಅರಣ್ಯಕ್ಕೆ ಹೋಗದಂತಾಗಿದೆ. ಆದರೆ ವನ್ಯಜೀವಿಗಳು ನಮ್ಮ ಜಮೀನನ್ನು ಆಕ್ರಮಿಸಿಕೊಂಡಿವೆ. ನಮ್ಮ ರಕ್ಷಣೆಗೆ ಯಾರೂ ಇಲ್ಲದಂತಾಗಿದೆ. ಎಲ್ಲದಕ್ಕೂ ಮಾನವಹಕ್ಕು ಅಡ್ಡ ಬರುತ್ತಿದೆ. ಪರಿಸರ ರಕ್ಷಣೆ ಆಗಲೇಬೇಕು, ಪಶ್ಚಿಮಘಟ್ಟಗಳ ರಕ್ಷಣೆಯೂ ಆಗಬೇಕಿದೆ. ಆದರೆ ಎಲ್ಲದಕ್ಕೂ ಅಡ್ಡಿಪಡಿಸುವದು ಸರಿಯಲ್ಲವೆಂದು ಕಾಪ್ಸ್ ವಿದ್ಯಾಸಂಸ್ಥೆಯ ಟ್ರಸ್ಟಿ ಮಾಚಿಮಾಡ ರಾಜ್ ತಿಮ್ಮಯ್ಯ ಹೇಳಿದರು.
ಕೊಡಗು ಪತ್ರಿಕಾ ಭವನ ಟ್ರಸ್ಟ್ ವತಿಯಿಂದ ಪತ್ರಿಕಾಭವನದ 17ನೇ ವಾರ್ಷಿಕೋತ್ಸವ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ‘ಪ್ರಕೃತಿ’ ವಿಕೋಪ- ಸೂಕ್ಷ್ಮ ಪರಿಸರ ವಲಯ- ಮುಂದಿನ ಹೆಜ್ಜೆಗಳು’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಅವರು, ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಲ್ಲಿ ಹಾನಿಯಾಗಿದೆ. ಆದರೆ ಕೆಲವು ಪರಿಸರವಾದಿಗಳು ಪರಿಸರದ ಮೇಲೆ ಆಗಿರುವ ಧಾಳಿಯಿಂದ, ಪರಿಸರ ನಾಶದಿಂದ ಆಗಿದೆ ಎಂದು ಸಂಬಂಧ ಕಲ್ಪಿಸಿದ್ದಾರೆ. ಸೂಕ್ಷ್ಮ ಪರಿಸರ ತಾಣ ಆಗಿದಿದ್ದರೆ ದುರಂತ ಆಗುತ್ತಿರಲಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ ಇದು ನಿಜವಾದ ಕಾರಣ ಅಲ್ಲ. ಹೇಳಿಕೊಳ್ಳುವವರ ಮನಸ್ಸಿಗೆ ಒಂದು ತೃಪ್ತಿ ಸಿಗುತ್ತದಷ್ಟೇ ಎಂದು ಹೇಳಿದರು.
2011ರಲ್ಲಿ ಪಶ್ಚಿಮ ಘಟ್ಟ ಅಧ್ಯಯನ ಮಾಡುವ ಸಂಬಂಧ ಗಾಡ್ಗೀಳ್ ವರದಿ ಸಮಿತಿ ರಚನೆ ಮಾಡುವಾಗ ವಿಜ್ಞಾನಿಗಳನ್ನು ಸೇರಿಸಿಕೊಂಡಿದ್ದು, ವಿಜ್ಞಾನಿಗಳು ಭೌಗೋಳಿಕ ರಚನೆ, ಸಸ್ಯ, ಜೀವ ಪ್ರಬೇಧಗಳ ಬಗ್ಗೆ ವಿವರವಾದ ವರದಿ ನೀಡಿದ್ದಾರೆ. ಆದರೆ 1.30 ಲಕ್ಷ ಚದರ ಕಿ.ಮೀ. ವ್ಯಾಪ್ತಿಯಲ್ಲಿ ವಾಸ ಮಾಡುತ್ತಿರುವ 5 ಕೋಟಿ ಮಂದಿ ಬಗ್ಗೆ ಯಾವದೇ ಉಲ್ಲೇಖ ಮಾಡಿಲ್ಲ; ಅವರುಗಳ ರಕ್ಷಣೆ ಬಗ್ಗೆ ಯಾವದೇ ವಿಚಾರ ಪ್ರಸ್ತಾಪ ಮಾಡಲಿಲ್ಲ. ಹಾಗಾಗಿ ನಂತರದಲ್ಲಿ ಕಸ್ತೂರಿ ರಂಗನ್ ಸಮಿತಿ ರಚನೆಗೊಂಡು ಮತ್ತೊಂದು ವರದಿ ತಯಾರಿಸ ಲಾಯಿತು. ಇದರಲ್ಲಿ ಕೈಗಾರಿಕೆ, ಗಣಿಗಾರಿಕೆ, ವಿದ್ಯುತ್ ಯೋಜನೆ, ನಗರೀಕರಣ ಮಾಡಲು ನಿರ್ಬಂಧ ವಿಧಿಸಲಾಗಿದೆ. ಈ ಚಟುವಟಿಕೆಗಳಲ್ಲಿ ಯಾರದ್ದೂ ವಿರೋಧವಿಲ್ಲ. ಆದರೆ ಕೃಷಿ ಚಟುವಟಿಕೆಗೆ ರಸಗೊಬ್ಬರ ಬಳಸಬಾರದು, ರಾತ್ರಿ ವೇಳೆ ಓಡಾಡಬಾರದೆಂಬ ನಿರ್ಬಂಧಕ್ಕೆ ವಿರೋಧವಿದೆ. ಇಲ್ಲಿನ ಜನರೂ ಜೀವಿಸಬೇಕಲ್ಲವೇ ಎಂದು ರಾಜ್ ತಿಮ್ಮಯ್ಯ ಪ್ರಶ್ನಿಸಿದರು.
ಬಡತನದಲ್ಲಿರಬೇಕಾಗುತ್ತದೆ
ಜಾಗತೀಕರಣದಿಂದಾಗಿ ತಾಪಮಾನ ಹೆಚ್ಚಾಗಿದೆ. ಇದನ್ನು ತಡೆಯಬೇಕಿದೆ. ಆದರೆ ಇದರಿಂದ ಸಸ್ಯ ಪ್ರಬೇಧಗಳಿಗೆ ಅನುಕೂಲ ವಾಗುತ್ತಿದೆ. ಅವುಗಳಿಗೆ ಕಾರ್ಬನ್ ಡಯಾಕ್ಸೈಡ್‍ನ ಅವಶ್ಯಕತೆಯಿದೆ. ಇದರ ಬಗ್ಗೆ ಯಾರೂ ಹೇಳುವದಿಲ್ಲ. ಹಾಗಂತ ಇದು ಹೇಳಬಾರದು, ವೈಜ್ಞಾನಿಕವಾಗಿ ವಸ್ತುಸ್ಥಿತಿಯ ಬಗ್ಗೆ ವಿವರಣೆ ನೀಡಿ ನೀಡಬೇಕೆಂದರು. 100-200 ವರ್ಷಗಳ ಹಿಂದಿನ ಇತಿಹಾಸ ನೋಡಿದರೆ ಆಗ ಶೇ. 90ರಷ್ಟು ಕೃಷಿಕರಿದ್ದರು. ಈಗ ಶೇ.50ರಷ್ಟಿದ್ದಾರೆ. ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಶೇ.5ರಷ್ಟು ಮಾತ್ರ ಕೃಷಿಕರಿದ್ದು, ಉಳಿದವರು ಬೇರೆ ಬೇರೆ ಕ್ಷೇತ್ರದಲ್ಲಿದ್ದಾರೆ. ವ್ಯವಸಾಯದಲ್ಲಿನ ಆದಾಯಕ್ಕೆ ಮಿತಿಯಿದೆ. ಹಾಗಾಗಿ ಇದೇ ಪರಿಸ್ಥಿತಿ ಮುಂದುವರಿದರೆ ನಾವು ಬಡತನದಲ್ಲೇ ಇರಬೇಕಾಗುತ್ತದೆ. ಗ್ರಾಮೀಣ ಪ್ರದೇಶದ ವ್ಯವಸಾಯ ದಲ್ಲಿರೋರಿಗೆ ಬೇರೆ ಕ್ಷೇತ್ರದಲ್ಲಿ ಅವಕಾಶ ಕಲ್ಪಿಸಬೇಕೆಂದು ಹೇಳಿದರು. ಎಲ್ಲಾ ರಾಷ್ಟ್ರಗಳು ವಿಶ್ವ ಮಾರುಕಟ್ಟೆಯ ಅವಿಭಾಜ್ಯ ಅಂಗವಾಗಿದ್ದು, ಆಮದು- ರಫ್ತು ವಹಿವಾಟಿನ ಮೂಲಕ ಅಭಿವೃದ್ಧಿ ಹೊಂದಬೇಕಿದೆ. ಚೈನಾದವರು ಜಾಗತೀಕರಣದ ಲಾಭ ಪಡೆದು ಕೊಳ್ಳುತ್ತಿದ್ದಾರೆ. ಭಾರತ ಕೂಡ ಚೈನಾ ಮಾದರಿಯಲ್ಲಿ ಮುಂದು ವರಿಯಬೇಕು. ಭಾರತದೊಳಗೂ ರೈಲ್ವೇ, ಇಂಧನ ಪೈಪ್‍ಲೈನ್ ಅಳವಡಿಕೆಯಾಗಬೇಕು. ಆದರೆ ಇದೆಲ್ಲವೂ ಪಶ್ಚಿಮ ಘಟ್ಟ ಪ್ರದೇಶಗಳಲ್ಲೇ ಹಾದುಹೋಗಬೇಕಿದೆ. ಸ್ವಲ್ಪಮಟ್ಟಿಗೆ ಪರಿಸರಕ್ಕೆ ತೊಂದರೆ ಆಗಲಿದೆ. ಮುಟ್ಟಲೇಬಾರದು ಎಂದರೆ, ಅಭಿವೃದ್ಧಿ ಆಗುವದಾದರೂ ಹೇಗೆ, ಉದ್ಯೋಗ ಸೃಷ್ಟಿಯಾಗುವ ದಾದರೂ ಎಲ್ಲಿಂದ? ಆರ್ಥಿಕ ಪರಿಸ್ಥಿತಿ ಸುಧಾರಿಸೋದು ಹೇಗೆ ಎಂದು ಪ್ರಶ್ನಿಸಿದರಲ್ಲದೆ, ಭಾರತದಲ್ಲಿ ಪ್ರತಿ ತಿಂಗಳು 1.50 ಮಿಲಿಯ ಯುವಕರು ಉದ್ಯೋಗ ಕ್ಕಾಗಿ ಕಾಯುತ್ತಿರುತ್ತಾರೆ ಎಂದು ಹೇಳಿದರು.
ಸಂಪರ್ಕವಿರಬೇಕು
ಕಾರ್ಯಕ್ರಮ ಉದ್ಘಾಟಿಸಿದ ಪಬ್ಲಿಕ್ ರಿಲೇಶನ್ ಕೌನ್ಸಿಲ್ ಆಫ್ ಇಂಡಿಯಾದ ಚೇರ್‍ಮೆನ್ ಎಂ.ಜಿ. ಜಯರಾಂ ಮಾತನಾಡಿ, ಪತ್ರಿಕೋ ದ್ಯಮ ಹಾಗೂ ಸಾರ್ವಜನಿಕ ಸಂಪರ್ಕ ವಲಯದಲ್ಲಿ ಉತ್ತಮವಾದ ಸಂಪರ್ಕವಿರಬೇಕು. ಪತ್ರಿಕೋದ್ಯಮಿ ಗಳು ವಾಸ್ತವತೆ ಅರಿತು, ಬರೆಯುವ ಮುನ್ನ ಯೋಚಿಸಿ ಸಮಾಜಕ್ಕೆ ನ್ಯಾಯ ಒದಗಿಸಿಕೊಡಬೇಕೆಂದು ಹೇಳಿದರು. ಪ್ರಸ್ತುತ ಸಮಾಜದಲ್ಲಿ ಯುವ ಪೀಳಿಗೆಗೆ ದೃಶ್ಯಮಾಧ್ಯಮಗಳ ಮೇಲೆ ಆಸಕ್ತಿ ಹೆಚ್ಚಾಗಿದೆ. ಅದಕ್ಕೆ ಈ ಕ್ಷೇತ್ರದಲ್ಲಿ ಅನುಭವ, ಅಧ್ಯಯನ ಮುಖ್ಯ ಎಂದರು.
ಪತ್ರಿಕೆಗಳು ಪ್ರಜೆಗಳ ಜವಾಬ್ದಾರಿ ಬಗ್ಗೆ ತಿಳಿ ಹೇಳುವ, ಎಚ್ಚರಿಸುವ ಅಂಕಣ ಪ್ರಾರಂಭಿಸಬೇಕೆಂದು ಸಲಹೆ ಮಾಡಿದರು. ಪತ್ರಿಕಾಭವನ ಮ್ಯಾನೇಜಿಂಗ್ ಟ್ರಸ್ಟಿ ಬಿ.ಎನ್. ಮನುಶೆಣೈ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕೋಶಾಧಿಕಾರಿ ಕೇಶವಕಾಮತ್ ನಿರೂಪಿಸಿದರೆ, ಪ್ರಧಾನ ಕಾರ್ಯದರ್ಶಿ ಎಸ್.ಜಿ. ಉಮೇಶ್ ಸ್ವಾಗತಿಸಿ, ವಂದಿಸಿದರು.