ವರದಿ: ರಜಿತಾ ಕಾರ್ಯಪ್ಪ

ವೀರಾಜಪೇಟೆ, ಅ. 15: ಪಟ್ಟಣ ಪಂಚಾಯ್ತಿ ಚುನಾವಣೆ ಸಮೀಪಿಸುತ್ತಿದ್ದಂತೆ ಸ್ಪರ್ಧಾಕಾಂಕ್ಷಿಗಳು ಮತದಾರರ ಮನವೊಲಿಸುವ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ. ನಾಮಪತ್ರ ಸಲ್ಲಿಸಲು ತಾ. 16 ರಂದು (ಇಂದು) ಅಂತಿಮ ದಿನವಾಗಿದ್ದರಿಂದ ಬಹುತೇಕ ಅಭ್ಯರ್ಥಿಗಳು ಅಗತ್ಯವಾದ ದಾಖಲೆಗಳನ್ನು ಸಿದ್ದಪಡಿಸಿಕೊಂಡು ಬಿರುಸಿನಿಂದ ತಮ್ಮ ಉಮೇದುವಾರಿಕೆ ಸಲ್ಲಿಸಲು ತಯಾರಾಗಿದ್ದಾರೆ.

ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಅಭ್ಯರ್ಥಿಗಳ ಜೊತೆಗೆ ಪಕ್ಷೇತರ ಅಭ್ಯರ್ಥಿಗಳು ಸೇರಿ ಒಟ್ಟು 40 ರಿಂದ 41 ನಾಮಪತ್ರಗಳು ಸಲ್ಲಿಕೆಯಾಗುವ ಸಾದ್ಯತೆಗಳು ಕಂಡುಬರುತ್ತಿದೆ. ನಾಮಪತ್ರ ಪರಿಶೀಲನೆ ಮತ್ತು ಉಮೇದುವಾರಿಕೆ ಹಿಂಪಡೆದ ನಂತರ ಚುನಾವಣಾ ಕಣದಲ್ಲಿ ಎಷ್ಟು ಅಭ್ಯರ್ಥಿಗಳು ಉಳಿಯುತ್ತಾರೆ ಎಂಬದು ಸ್ಪಷ್ಟವಾಗುತ್ತದೆ.

ಇತ್ತೀಚಿನ ದಿನಗಳಲ್ಲಿ ಚುನಾವಣೆಗಳು ಪ್ರತಿಷ್ಠೆಯ ಕಣವಾಗುತ್ತಿದ್ದು ಬಹುತೇಕ ಆಕಾಂಕ್ಷಿಗಳಿಗೆ ಪ್ರಸಕ್ತ ಚುನಾವಣೆಗೆ ಸರ್ಕಾರ ನಿಗದಿಪಡಿಸಿರುವ ಮೀಸಲಾತಿಯಿಂದ ಸ್ಥಳಾವಕಾಶ ಸಿಗದೆ ಬೇರೆ ಬೇರೆ ವಾರ್ಡ್‍ಗಳಿಂದ ಸ್ಪರ್ಧೆಗಿಳಿದಿದ್ದರೆ ಇನ್ನು ಕೆಲವರು ತಮ್ಮ ಸಂಬಂಧಿಕರನ್ನು ಚುನಾವಣಾ ಕಣಕ್ಕಿಳಿಸಿ ವ್ಯಾಪಕ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರೆ ಇನ್ನೂ ಕೆಲವರು ತಮ್ಮ ಅಭಿಮಾನಿಗಳನ್ನು ಕಣಕ್ಕಿಳಿಸುವ ಮೂಲಕ ತಾವೇ ಅಭ್ಯರ್ಥಿ ಎಂದು ಭಾವಿಸಿ ಮತ ನೀಡುವಂತೆ ಮತದಾರರ ಮನವೊಲಿಸುವ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ.

ವೀರಾಜಪೇಟೆ ಕ್ಷೇತ್ರದಲ್ಲಿ ರಾಜಕೀಯ ಲೆಕ್ಕಚಾರಗಳಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿದ್ದು ಪ್ರಸ್ತುತ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷ ಮತ್ತು ಪಕ್ಷೇತರ ಅಭ್ಯರ್ಥಿಗಳು ತಮ್ಮದೆ ಆದ ವರ್ಚಸ್ಸಿನಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಕಳೆದ ಬಾರಿ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಗದ್ದುಗೆ ಹಿಡಿದಿದ್ದ ಬಿಜೆಪಿ ಈ ಬಾರಿಯು ಅಧಿಕಾರ ಹಿಡಿಯಬೇಕು, ಹೆಚ್ಚಿನ ಸ್ಥಾನಗೆಲ್ಲಬೇಕು ಎನ್ನುವ ತಂತ್ರದ ಮೇಲೆ ಪ್ರಚಾರ ಆರಂಭಿಸಿದೆ.

ಆದರೆ ಈ ಬಾರಿ ಜೆಡಿಎಸ್ ಪಕ್ಷ ಕೂಡ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಗೆಲವು ಸಾಧಿಸಬಹುದೆಂಬ ನಿರೀಕ್ಷೆಯನ್ನು ಪಕ್ಷದ ಮುಖಂಡರು ಇಟ್ಟುಕೊಂಡಿದ್ದಾರೆ. ಆದರೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಪ್ರಸಕ್ತ ಚುನಾವಣೆಯಲ್ಲಿ ತಂತ್ರ ಪ್ರತಿ-ತಂತ್ರಗಳನ್ನು ರೂಪಿಸುತ್ತಿವೆ. ಈ ಚುನಾವಣೆಯಲ್ಲಿ ಪಕ್ಷಕ್ಕಿಂತ ವ್ಯಕ್ತಿ ಮುಖ್ಯವಾಗುವ ಲಕ್ಷಣಗಳು ಕಂಡು ಬರುತ್ತಿದ್ದು ಮತದಾರ ಯಾರ ಕೈಹಿಡಿಯುತ್ತಾನೆ ಎಂಬದನ್ನು ಕಾದುನೋಡಬೇಕಾಗಿದೆ.

ಕಳೆದ ಬಾರಿ ಕೂದಲೆಳೆಯ ಅಂತರದಲ್ಲಿ ಸೋತಿದ್ದ ಪಕ್ಷಗಳು ಈ ಬಾರಿ ಒಗ್ಗಟ್ಟಿನಿಂದ ಗೆಲವು ಸಾಧಿಸಬೇಕು ಎಂದು ಸಿದ್ಧತೆಯಲ್ಲಿದ್ದಾರೆ. ಆದರೆ ಈ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷ ತನ್ನದೇ ಆದ ನಿಟ್ಟಿನಲ್ಲಿ 18 ವಾರ್ಡ್‍ಗಳಿಗೂ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ಚುನಾವಣಾ ಸಿದ್ಧತೆಯಲ್ಲಿವೆ.

ಇತ್ತೀಚೆಗೆ ರಾಷ್ಟ್ರೀಯ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಸಭೆ ನಡೆಸಿ ಈ ಬಾರಿ ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲವು ಸಾಧಿಸುವಂತೆ ಹುರಿದುಂಬಿಸಿದ್ದಾರೆ. ಒಟ್ಟಾರೆ ಮೂರು ಪಕ್ಷಗಳು ತಮ್ಮದೆ ಆದ ವರ್ಚಸ್ಸಿನಲ್ಲಿ ಮತದಾರರ ಮನವೊಲಿಸುವ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ.

ಪ್ರಸಕ್ತ ಚುನಾವಣೆಯಲ್ಲಿ ಹಳಬರಿಗಿಂತ ಹೊಸ ಮುಖಗಳು ಹೆಚ್ಚಿನ ಸಂಖ್ಯೆಯಲ್ಲಿ ಚುನಾವಣಾ ಕಣಕ್ಕಿಳಿದಿವೆ. ವಿದ್ಯಾವಂತ ಯುವಕರು ಪಟ್ಟಣವನ್ನು ಅಭಿವೃದ್ಧಿಪಡಿಸಬೇಕೆಂಬ ಮಹಾದಾಸೆಯಿಂದ ಪ್ರಸಕ್ತ ಚುನಾವಣೆಯಲ್ಲಿ ಕಣಕ್ಕಿಳಿ ಯುತ್ತಿದ್ದಾರೆ.

ವಾರ್ಡ್‍ವಾರು ಮೀಸಲಾತಿ ನಿಗದಿಯಾಗಿದ್ದು ವಾರ್ಡ್ 1 ಹಿಂದುಳಿದ ವರ್ಗ (ಎ) ಮಹಿಳೆ, ವಾರ್ಡ್ 2 ಸಾಮಾನ್ಯ, ವಾರ್ಡ್ 3 ಸಾಮಾನ್ಯ, ವಾರ್ಡ್ 4 ಪರಿಶಿಷ್ಟ ಜಾತಿ (ಎ) ಮಹಿಳೆ, ವಾರ್ಡ್ 5 ಹಿಂದುಳಿದ ವರ್ಗ(ಎ), ವಾರ್ಡ್ 6 ಪರಿಶಿಷ್ಟ ಜಾತಿ, 7 ಸಾಮಾನ್ಯ ಮಹಿಳೆ, ವಾರ್ಡ್ 8 ಹಿಂದುಳಿದ ವರ್ಗ(ಬಿ), ವಾರ್ಡ್ 9ಸಾಮನ್ಯ, ವಾರ್ಡ್ 10ಬಿಸಿಎ ಮಹಿಳೆ, ವಾರ್ಡ್ 11 ಎಸ್ ಟಿ, ವಾರ್ಡ್ 12 ಬಿಸಿಎ, ವಾರ್ಡ್ 13 ಸಾಮಾನ್ಯ, ವಾರ್ಡ್ 14, ಬಿಸಿಎ ವಾರ್ಡ್ 15 ಸಾಮಾನ್ಯ ವಾರ್ಡ್ 16 ಸಾಮಾನ್ಯ ಮಹಿಳೆ, ವಾರ್ಡ್ 17 ಸಾಮಾನ್ಯ ಮಹಿಳೆ, ವಾರ್ಡ್ 18 ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಪಟ್ಟಣ ಪಂಚಾಯ್ತಿಯ 18 ವಾರ್ಡ್‍ಗÀಳಲ್ಲಿ 18246 ಜನಸಂಖ್ಯೆಯಲ್ಲಿ ಒಟ್ಟು 13926 ಮತದಾರರಿದ್ದು 18 ಮತಗಟ್ಟೆಗಳೆಂದು ಗುರುತಿಸಲಾಗಿದೆ.

ಪಟ್ಟಣ ಪಂಚಾಯಿತಿ ಚುನಾವಣೆ ; ಜನರಿಗಿಲ್ಲ ಆಸಕ್ತಿ

ಪಟ್ಟಣದಲ್ಲಿ ಕೊಡವರು, ಗೌಡರು, ಮಲಯಾಳಿಗಳು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಶೆಟ್ಟರು, ಸೇರಿದಂತೆ ಇತರ ಎಲ್ಲಾ ಮತದಾರರಿದ್ದಾರೆ. ಆದರೆ, ಹೆಚ್ಚಿನ ಜನರಿಗೆ ಹಾಲಿ ಚುನಾವಣೆಯ ಬಗ್ಗೆ ಆಸಕ್ತಿ ಇಲ್ಲ. ಚುನಾವಣೆಯು ಆಯಾ ಪಕ್ಷಗಳಿಗೆ ಮಾತ್ರ ಸೀಮಿತ ಎಂಬಂತಾಗಿದೆ. ಪಕ್ಷಗಳು ಚುನಾವಣೆಗೆ ತೋರುವ ಆಸಕ್ತಿ ಜನರಲ್ಲಿ ಕಾಣುತ್ತಿಲ್ಲ.