ಮಡಿಕೇರಿ, ಅ. 11: ಐತಿಹಾಸಿಕ ನಾಡಹಬ್ಬ ಮಡಿಕೇರಿ ದಸರಾ ಉತ್ಸವದಲ್ಲಿ ದೇಚೂರು ಶ್ರೀ ರಾಮಮಂದಿರ ದೇವಾಲಯಕ್ಕೆ ಈ ಬಾರಿ ಶತಮಾನೋತ್ಸವ ಸಂಭ್ರಮ ಈ ಹಿನ್ನೆಲೆಯಲ್ಲಿ ಅದ್ಧೂರಿ ಮಂಟಪವನ್ನು ಹೊರ ತರುವ ಚಿಂತನೆಯಿತ್ತು. ಅದಕ್ಕಾಗಿ ಎಲ್ಲಾ ರೀತಿಯ ತಯಾರಿಗಳು ಕೂಡ ನಡೆದಿತ್ತು. ಆದರೆ ದಿಢೀರನೆ ಉಂಟಾದ ಪ್ರಾಕೃತಿಕ ವಿಕೋಪದ ಹಿನ್ನೆಲೆಯಲ್ಲಿ ಆಡಂಭರವನ್ನು ಕೈಬಿಟ್ಟು ಸರಳ ಹಾಗೂ ಸಾಂಪ್ರದಾಯಿಕವಾಗಿ ಮಂಟಪವನ್ನು ಹೊರ ತರಲು ತೀರ್ಮಾನಿಸಿದ್ದೇವೆ ಎಂದು ದೇಚೂರು ಶ್ರೀ ರಾಮ ಮಂದಿರ ದೇವಾಲಯ ದಸರಾ ಮಂಟಪ ಸಮಿತಿ ಅಧ್ಯಕ್ಷ ಹೆಚ್.ಪಿ. ತೀರ್ಥಾನಂದ ತಿಳಿಸಿದ್ದಾರೆ.
ಒಂದು ಟ್ರ್ಯಾಕ್ಟರನ್ನು ಮಾತ್ರ ಬಳಸಲಾಗುತ್ತಿದ್ದು, ಪಂಚಮುಖಿ ಆಂಜನೇಯ ಒಂದು ಕಲಾಕೃತಿಯನ್ನು ಮಾತ್ರ ಅಳವಡಿಸಲಾಗುತ್ತಿದೆ. ಕಲಾಕೃತಿಯನ್ನು ಮಂಗಳೂರು ದೇರಳಕಟ್ಟೆಯ ಕಲಾವಿದ ಜೆಪಿ ತಯಾರಿಸಿದ್ದಾರೆ. ಲೈಟಿಂಗ್ ಬೋರ್ಡ್ನ್ನು ಮಡಿಕೇರಿ ಪುಟಾಣಿ ನಗರದ ಯಶವಂತ್ ಅಳವಡಿಸಲಿದ್ದು, ಟ್ರ್ಯಾಕ್ಟರ್ ಸೆಟ್ಟಿಂಗ್ಸ್ ಅನ್ನು ಸಮಿತಿ ಸದಸ್ಯರೆ ಮಾಡಲಿದ್ದಾರೆ. ಪ್ಲಾಟ್ ಫಾರಂನ್ನು ಆನಂದ ಮತ್ತು ಚಾರ್ಲಿ ತಂಡ ನಿರ್ಮಿಸಲಿದೆ. ಮಂಟಪವನ್ನು ಪೂಕೋಡ್ ವಾದ್ಯಗೋಷ್ಠಿ ಮುನ್ನಡೆಸಲಿದೆ.
ಶತಮಾನೋತ್ಸವ ಹಿನ್ನೆಲೆಯಲ್ಲಿ ಹಲವು ವೈಶಿಷ್ಟ್ಯಗಳೊಂದಿಗೆ ಮಂಟಪವನ್ನು ಹೊರತರಲು 5 ಲಕ್ಷಕ್ಕೂ ಅಧಿಕ ಹಣವನ್ನು ಮುಂಗಡವಾಗಿ ವ್ಯಯಿಸ ಲಾಗಿತ್ತು. ಆದರೆ ಪ್ರಾಕೃತಿಕ ವಿಕೋಪದ ಹಿನ್ನೆಲೆಯಲ್ಲಿ ದಶಮಂಟಪ ಸಮಿತಿಯ ತೀರ್ಮಾನದಂತೆ ಆಡಂಬರವನ್ನು ಬದಿಗಿಟ್ಟು ರೂ. 3 ಲಕ್ಷ ವೆಚ್ಚದಲ್ಲಿ ಮಂಟಪವನ್ನು ಸರಳವಾಗಿ ತಯಾರು ಮಾಡಲಾಗುತ್ತದೆ ಎಂದು ತೀರ್ಥಾನಂದ ಮಾಹಿತಿಯಿತ್ತರು.
- ಉಜ್ವಲ್ ರಂಜಿತ್