ಕುಶಾಲನಗರ, ಅ. 11: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ವತಿಯಿಂದ ಜಿಲ್ಲೆಯ ನೆರೆ ಸಂತ್ರಸ್ತರಿಗೆ 1 ಲಕ್ಷ ರೂ.ಗಳ ಧನ ಸಹಾಯ ನೀಡಲಾಗುವದು ಎಂದು ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಮಹೇಶ್ ತಿಳಿಸಿದರು.

ಕುಶಾಲನಗರದ ಸುದ್ದಿಮನೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‍ನ ರಾಷ್ಟ್ರೀಯ ಅಧ್ಯಕ್ಷರಾದ ಡಾ.ಬಸವರಾಜ ಸಾದರ, ಗೌರವ ಸಲಹೆಗಾರರಾದ ಸಾಹಿತಿ ಡಾ.ಗೊ.ರು.ಚನ್ನಬಸಪ್ಪ ಮತ್ತು ತಂಡದವರು ಜಿಲ್ಲೆಗೆ ಆಗಮಿಸುತ್ತಿದ್ದು ಈ ತಿಂಗಳ 13 ರಂದು ಶನಿವಾರ ಪ್ರಕೃತಿ ವಿಕೋಪ ಉಂಟಾದ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ. ಸಂತ್ರಸ್ತರನ್ನು ಭೇಟಿ ಮಾಡಿ ಅವರ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಕಲೆ ಹಾಕಲಿದ್ದಾರೆ. ಜಿಲ್ಲೆಯ ಸಂತ್ರಸ್ತರಿಗೆ ನೆರವಾಗಲು ಜಿಲ್ಲಾಡಳಿತದೊಂದಿಗೆ ಕೈಜೋಡಿಸಿ 1 ಲಕ್ಷ ರೂ.ಗಳ ಧನ ಸಹಾಯ ಮಾಡಲಾಗುವದು ಎಂದು ಮಾಹಿತಿ ನೀಡಿದರು.

ತಾ. 14 ರಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಮತ್ತು ಅಖಿಲ ಭಾರತ ಕದಳಿ ಮಹಿಳಾ ವೇದಿಕೆ ಸಂಯುಕ್ತಾಶ್ರಯದಲ್ಲಿ ಮೈಸೂರಿನ ಸುತ್ತೂರು ಕ್ಷೇತ್ರದಲ್ಲಿ

ರಾಜ್ಯಮಟ್ಟದ ಕದಳಿ ಮಹಿಳಾ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಕ್ಷೇತ್ರದ ಪರಮಪೂಜ್ಯ ಶ್ರೀ ಶಿವರಾತ್ರೀ ದೇಶೀಕೇಂದ್ರ ಮಹಾಸ್ವಾಮೀಜಿಗಳ ಸಾನಿಧ್ಯದಲ್ಲಿ ನಡೆಯಲಿರುವ ಕಾರ್ಯಕ್ರಮದ ಸರ್ವಾಧ್ಯಕ್ಷರಾಗಿ ಮಾಜಿ ಸಚಿವರಾದ ಡಾ.ಲೀಲಾದೇವಿ ಆರ್.ಪ್ರಸಾದ್ ಪಾಲ್ಗೊಳ್ಳಲಿದ್ದಾರೆ. ಸಚಿವರಾದ ಜಿ.ಟಿ.ದೇವೇಗೌಡ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಡಿಜಿ ಮತ್ತು ಐಜಿಪಿ ನೀಲಮಣಿ ಎನ್.ರಾಜು ಉದ್ಘಾಟಿಸಲಿದ್ದಾರೆ.

ಸೋಮವಾರಪೇಟೆ ತಾಲೂಕು ಘಟಕದ ಅಧ್ಯಕ್ಷ ಪಿ. ಮಹದೇವಪ್ಪ ಮಾತನಾಡಿ, ಇಬ್ಬರು ಸಂತ್ರಸ್ತರಿಗೆ ಬಿಎಚ್‍ಆರ್ ಸಂಸ್ಥೆ ವತಿಯಿಂದ ಮನೆ ನಿರ್ಮಿಸಿಕೊಡಲು ಯೋಜನೆ ರೂಪಿಸಿದ್ದು ಸ್ವಂತ ನಿವೇಶನ ಹೊಂದಿರುವ ಎರಡು ಕುಟುಂಬಗಳಿಗೆ ಸರಳ ರೀತಿಯ ಮನೆ ನಿರ್ಮಿಸಿಕೊಡಲಾಗುವದು ಎಂದರು.

ಗೋಷ್ಠಿಯಲ್ಲಿ ಪರಿಷತ್ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಎಚ್.ಎಸ್. ಪ್ರೇಮನಾಥ್, ಖಜಾಂಚಿ ಡಿ.ಬಿ. ಸೋಮಪ್ಪ, ವೀರಾಜಪೇಟೆ ತಾಲೂಕು ಘಟಕದ ಅಧ್ಯಕ್ಷ ಎಸ್.ಎಸ್. ಸುರೇಶ್, ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಲೇಖನ ಧರ್ಮೇಂದ್ರ ಇದ್ದರು.