ಮಡಿಕೇರಿ, ಅ. 11: ಈಚೆಗೆ ಸಂಭವಿಸಿರುವ ಪ್ರಾಕೃತಿಕ ಹಾನಿಯಿಂದ ತೀವ್ರ ತೊಂದರೆಗೆ ಸಿಲುಕಿರುವ ಏಳುನಾಡಿನ ಕೊಡವ ಜನಾಂಗಕ್ಕೆ ನ್ಯಾಯ ಕೊಡಿಸುವ ದಿಸೆಯಲ್ಲಿ ಬರುವ ಡಿಸೆಂಬರ್ 2 ರಂದು ಕೊಡವರ ರಾಷ್ಟ್ರೀಯ ದಿನಾಚರಣೆಯೊಂದಿಗೆ ಹಕ್ಕೋತ್ತಾಯ ಮಂಡಿಸುವದರೊಂದಿಗೆ ಜನಾಂಗದ ಬದುಕಿಗಾಗಿ ಹೋರಾಟ ಹಮ್ಮಿಕೊಂಡಿರುವದಾಗಿ ಸಿಎನ್‍ಸಿ ಅಧ್ಯಕ್ಷ ನಂದಿನೆರವಂಡ ಯು. ನಾಚಪ್ಪ ಘೋಷಿಸಿದ್ದಾರೆ. ಏಳುನಾಡಿನ ಸಂತ್ರಸ್ತರಿಗೆ ನ್ಯಾಯಕ್ಕಾಗಿ ಅಹೋರಾತ್ರಿ ಧರಣಿಯ ಮುಕ್ತಾಯ ಸಂದರ್ಭ ಅವರು ಮಾತನಾಡುತ್ತಿದ್ದರು.

ಕೆಲವರು ಏಳುನಾಡಿನ ಗ್ರಾಮೀಣ ಜನತೆಗೆ ಆಸೆ - ಆಮಿಷ ತೋರಿಸಿ ಜಾಗ ಕಬಳಿಸಲು ಯತ್ನಿಸುವದ ರೊಂದಿಗೆ, ಗ್ರಾಮಗಳಿಂದ ವಸತಿ ತೊರೆಯಲು ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಆರೋಪಿಸಿದರಲ್ಲದೆ, ಎಂತಹ ಪರಿಸ್ಥಿತಿಯಲ್ಲಿಯೂ ತಮ್ಮ ಪೂರ್ವಜರು ಬಾಳಿ ಬದುಕಿದ ನೆಲೆ ತೊರೆಯದಂತೆ ಕಳಕಳಿ ವ್ಯಕ್ತಪಡಿಸಿದರು.

ಪ್ರಾಕೃತಿಕ ವಿಕೋಪದಿಂದ ತೊಂದರೆಗೆ ಸಿಲುಕಿರುವ ಗ್ರಾಮಸ್ಥರಿಗೆ ನೆರವು ಕಲ್ಪಿಸದೆ, ಎಲ್ಲಿಂದಲೋ ಬಂದಿರುವ ಅಕ್ರಮ ನುಸುಳುಕೋರರು ಹಾಗೂ ನೈಜ ಫಲಾನುಭವಿಗಳೇ ಅಲ್ಲದವರು ಈ ಸೌಲಭ್ಯ ಪಡೆಯುವಂತಾಗಿದೆ ಎಂದು ಗಂಭೀರ ಆರೋಪ ಮಾಡಿದರು. ಆ ದಿಸೆಯಲ್ಲಿ ನ್ಯಾಯಕ್ಕಾಗಿ ಧರಣಿ ರೂಪಿಸಿದ್ದು, ನೈಜ ಫಲಾನುಭವಿಗಳಿಗೆ ಸೌಲಭ್ಯ ದೊರಕುವ ತನಕ ಹೋರಾಟ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದರು.

ಗ್ರಾಮ ತೊರೆಯದಿರಲು ಕರೆ : ಎಂತಹ ಪರಿಸ್ಥಿತಿಯಲ್ಲಿಯೂ ತಮ್ಮ ತಮ್ಮ ಗ್ರಾಮಗಳನ್ನು ತೊರೆಯದೆ ಸ್ವಾಭಿಮಾನದ ಬದುಕು ಮುಂದುವರೆಸುವಂತೆ ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಕೆ.ಎಸ್. ದೇವಯ್ಯ ಕರೆ ನೀಡಿದರು. ಕಳೆದ ಮೂರು ದಶಕದಿಂದ ಕೊಡವ ಜನಾಂಗದ ಏಳಿಗೆಗಾಗಿ ಹೋರಾಡುತ್ತಿರುವ ಸಿಎನ್‍ಸಿಗೆ ತಮ್ಮ ಬೆಂಬಲ ಘೋಷಿಸುತ್ತಾ, ಇಂತಹ ಸಂಘಟನೆ ಜನಾಂಗದ ಸುರಕ್ಷತೆಗಾಗಿ ಅಗತ್ಯವೆಂದು ಪ್ರತಿಪಾದಿಸಿದರು.

ಹಿರಿಯ ಕಾಂಗ್ರೆಸ್ ಮುಖಂಡ ಬೊಟ್ಟೋಳಂಡ ಮಿಟ್ಟು ಚಂಗಪ್ಪ, ಪೊರಿಮಂಡ ದಿನಮಣಿ, ಮುದ್ದಂಡ ತಿಮ್ಮಯ್ಯ, ಚಂಬಂಡ ಜನತ್, ಪುಗ್ಗೇರ ಕಾಳಪ್ಪ, ಅರೆಯಡ ಗಿರೀಶ್, ಕಿರಿಯಮಾಡ ಶರಿನ್, ಜಮ್ಮಡ ಮೋಹನ್, ಕಾಟುಮಣಿಯಂಡ ಉಮೇಶ್, ಮಾಚಿಮಾಡ ಲವ, ಅಪ್ಪಚ್ಚಿರ ರಮ್ಮಿ ಮೊದಲಾದವರು ಪಾಲ್ಗೊಂಡಿದ್ದರು.

ಜಿಲ್ಲಾಡಳಿತಕ್ಕೆ ಮನವಿ : ಸಂಘಟನೆಯ ಬೇಕು - ಬೇಡಿಕೆಗಳೊಂದಿಗೆ ಸಂತ್ರಸ್ತರಿಗೆ ನ್ಯಾಯ ಕಲ್ಪಿಸುವಂತೆ ವಿಶೇಷ ಜಿಲ್ಲಾಧಿಕಾರಿ ಜಗದೀಶ್ ಮುಖಾಂತರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು. ಮನವಿ ಪರಿಶೀಲಿಸಿ ಸರಕಾರಕ್ಕೆ ರವಾನಿಸುವದೊಂದಿಗೆ ನೈಜ ಸಂತ್ರಸ್ತರಿಗೆ ನೆರವು ಕೊಡಿಸಲಾಗುವದು ಎಂದು ಭರವಸೆ ನೀಡಿದರು.

ಶಾಸಕರ ಬೆಂಬಲ : ಧರಣಿ ನಿರತರನ್ನು ಭೇಟಿ ಮಾಡಿದ ಶಾಸಕ ಕೆ.ಜಿ. ಬೋಪಯ್ಯ ಅವರು, ಏಳುನಾಡಿನ ಸಂತ್ರಸ್ತರಿಗೆ ನ್ಯಾಯಕ್ಕಾಗಿ ಹೋರಾಟಕ್ಕೆ ತಮ್ಮ ಬೆಂಬಲ ಘೋಷಿಸಿದರು. ಸಂಘಟನೆಯಿಂದ ಕಲಿಯಂಡ ಪ್ರಕಾಶ್ ಸ್ವಾಗತಿಸಿ, ಚಿಪ್ಪಣ್ಣ ನಿರೂಪಿಸಿದರು. ಅಜ್ಜಿಕುಟ್ಟಿರ ಲೋಕೇಶ್ ವಂದಿಸಿದರು. ರಾಷ್ಟ್ರಗೀತೆಯೊಂದಿಗೆ ಸತ್ಯಾಗ್ರಹ ಮುಕ್ತಾಯಗೊಂಡಿತು.