ಮಡಿಕೇರಿ, ಅ.11: ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿರುವ ಜಿಲ್ಲಾ ಕ್ರೀಡಾಂಗಣ ಇದೀಗ ಸ್ವಚ್ಛತೆ ಕಾಣುತ್ತಿದೆ. ಮ್ಯಾನ್ಸ್ ಕಾಂಪೌಂಡ್‍ನ ಮುಖ್ಯ ಮೈದಾನ ಸೇರಿದಂತೆ ಕೆಳಭಾಗದಲ್ಲಿ ರೋಲರ್ ಸ್ಕೇಟಿಂಗ್, ಬಾಸ್ಕೆಟ್ ಬಾಲ್ ಕೋರ್ಟ್, ಒಳಾಂಗಣ ಕ್ರೀಡಾಂಗಣದ ಸುತ್ತಮುತ್ತಲ ಪ್ರದೇಶದಲ್ಲಿ ಹುಲ್ಲು - ಕಾಡುಗಳು ಆವರಿಸಿ ಮೈದಾನ ತೀರಾ ಶೋಚನೀಯವಾಗಿದ್ದ ಬಗ್ಗೆ ಇತ್ತೀಚೆಗೆ ‘ಶಕ್ತಿ’ಯಲ್ಲಿ ವರದಿ ಪ್ರಕಟಗೊಂಡ ಹಿನ್ನೆಲೆಯಲ್ಲಿ ಇದೀಗ ಕ್ರೀಡಾಂಗಣ ಸ್ವಚ್ಛತೆ ಕಾಣುತ್ತಿದೆ. ವರದಿ ಬಳಿಕ ಜಿ.ಪಂ. ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ನೆಲ್ಲಚಂಡ ಕಿರಣ್ ಕಾರ್ಯಪ್ಪ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಇದನ್ನು ಸಮರ್ಪಕಗೊಳಿಸಲು ಕ್ರಮ ಕೈಗೊಳ್ಳುವದಾಗಿ ಭರವಸೆ ನೀಡಿದ್ದರು. ಇದೀಗ ಕಾಡನ್ನು ಯಂತ್ರ ಬಳಸಿ ಕಡಿಯುವ ಕೆಲಸ ಸಾಗಿದ್ದು, ಮೈದಾನ ಒಂದಷ್ಟು ಶುಚಿತ್ವ ಕಾಣುತ್ತಿದೆ.