ಚೆಟ್ಟಳ್ಳಿ, ಅ. 10: ಪ್ರತಿಯೊಬ್ಬರು ರಕ್ತದಾನವನ್ನು ಮಾಡುವ ಮೂಲಕ ಆರೋಗ್ಯ ವ್ಯದ್ಧಿ ಸಾಧ್ಯ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನವನ್ನು ಮಾಡುವಂತಾಗಬೇಕೆಂದು ಮಡಿಕೇರಿ ಜಿಲ್ಲಾ ಆರೋಗ್ಯ ಕೇಂದ್ರದ ರಕ್ತನಿಧಿ ಘಟಕದ ವೈದ್ಯಾಧಿಕಾರಿ ಡಾ. ಕರುಂಬಯ್ಯ ಚೆಟ್ಟಳ್ಳಿಯ ಕೆಕೆ ಎಫ್‍ಸಿ ವತಿಯಿಂದ ಚೆಟ್ಟಳ್ಳಿ ಆರೋಗ್ಯ ಕೇಂದ್ರದಲ್ಲಿ ಗಾಂಧಿ ಜಯಂತಿಯ ಪ್ರಯುಕ್ತ ಆಯೋಜಿಸಿದ 4ನೇ ವರ್ಷದ ರಕ್ತದಾನ ಶಿಬಿರವನ್ನು ಉದ್ಗಾಟಿಸಿ ಮಾತನಾಡಿದರು.

ಗಾಂಧಿ ಜಯಂತಿಯ ಪ್ರಯುಕ್ತ ಹಲವು ಕಾರ್ಯಕ್ರಮವನ್ನು ಆಯೋಜಿಸಲಾಗುತಿದ್ದು ಇಂತಹ ರಕ್ತದಾನ ಶಿಬಿರಗಳು ಪ್ರಯೋಜನ ವಾಗಲಿದೆ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಸುನಿತ ಮಂಜುನಾಥ್ ಮಾತನಾಡಿ, ಚೆಟ್ಟಳ್ಳಿ ಕೆಕೆಎಫ್‍ಸಿ ಯವರು ಕಳೆದ 4ವರ್ಷಗಳಿಂದ ಕ್ರೀಡೆಯ ಜೊತೆಗೆ ರಕ್ತದಾನ ಶಿಬಿರವನ್ನು ಆಯೋಜಿಸುವ ಮೂಲಕ ಉತ್ತಮ ಕಾರ್ಯವನ್ನು ಮಾಡುತ್ತಿರುವದು ಶ್ಲಾಘನೀಯ ವೆಂದರು. ಇಂತಹ ಕಾರ್ಯದಲ್ಲಿ ಯುವಕರು ಮುಂದೆ ಬರಬೇಕೆಂದರು. ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವತ್ಸಲ ಮಾತನಾಡಿ, ಕೆಕೆಎಫ್‍ಸಿಯು 4ನೇ ವರ್ಷ ನಡೆಸುತ್ತಿರುವ ರಕ್ತದಾನ ಶಿಬಿರ ಉತ್ತಮ ಪ್ರಯೋಜನಕಾರಿಯಾಗಿದ್ದು, ರಕ್ತದಾನ ನೀಡಲು ನಮಗೆಲ್ಲ ಅವಕಾಶ ದೊರೆತಂತಾಗಿದೆ ಎಂದರು.

ಚೆಟ್ಟಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅಹಮದ್ ಶಾ ಮಾತನಾಡಿ, ಗರ್ಭಿಣಿ ಸ್ತ್ರೀಯರಿಗೆ, ಅಪಘಾತ ಸಂದರ್ಭಗಳಲ್ಲಿ ಕ್ಯಾನ್ಸರ್ ಪೀಡಿತರಿಗೆ ರಕ್ತ ದಾನದಿಂದ ಪ್ರಯೋಜನ ವಾಗಲಿದೆ. ಎಲ್ಲರೂ ರಕ್ತ ದಾನ ಮಾಡಲು ಮುಂದೆ ಬರಬೇಕೆಂದರು.

ಕಾರ್ಯಕ್ರಮದಲ್ಲಿ ಕೆಕೆಎಫ್‍ಸಿಯ ಅಧ್ಯಕ್ಷ ಮೊಹಮದ್ ರಫಿ, ಉಪಾಧ್ಯಕ್ಷ ಶಶಿಕುಮಾರ್, ಗೌರವ ಕಾರ್ಯದರ್ಶಿ ರೆಮಾಂಡ್ ಸೆರಾವೋ, ವೈದ್ಯಾಧಿಕಾರಿ ಡಾ. ಯಶೋಧ, ರಕ್ತನಿಧಿ ಘಟಕದ ವೈದ್ಯಾಧಿಕಾರಿ, ಸಿಬ್ಬಂದಿಗಳು, ಕೆಕೆಎಫ್‍ಸಿಯ ಸದಸ್ಯರು ಭಾಗವಹಿಸಿದರು. ಕಾರ್ಯದರ್ಶಿ ಜುಬೇರ್ ಸ್ವಾಗತಿಸಿ, ವಂದಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯೆ ಸುನಿತ ಮಂಜುನಾಥ್, ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವತ್ಸಲ, ಚೆಟ್ಟಳ್ಳಿ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅಹಮದ್ ಶಾ ಹಾಗೂ ಸಂಘದ ಸದಸ್ಯರು ಸೇರಿ 34 ಜನರು ರಕ್ತದಾನವನ್ನು ಮಾಡಿದರು.

ರಕ್ತ ನೀಡಿದವರಿಗೆ ಹಣ್ಣು-ಹಂಪಲು ಹಾಗೂ ಮಧ್ಯಾಹ್ನದ ಭೋಜನದ ವ್ಯವಸ್ಥೆಯನ್ನು ಏರ್ಪಡಿಸಲಾಗಿತ್ತು.