ಸಿದ್ದಾಪುರ, ಅ. 10: ಮಾಲ್ದಾರೆಯ ಸಮೀಪದ ತಟ್ಟಳ್ಳಿ ಹಾಡಿಯ ಹಾಗೂ ಚೆನ್ನಯ್ಯನಕೋಟೆ ಭಾಗದ ದಿಡ್ಡಳ್ಳಿ ಅರಣ್ಯ ಪ್ರದೇಶದ ನಿವಾಸಿಗಳಿಗೆ ಹಕ್ಕು ಪತ್ರ ಲಭಿಸಿದ್ದು, 36 ಆದಿವಾಸಿಗಳಿಗೆ ಚೆನ್ನಂಗಿ ಆಶ್ರಮ ಶಾಲೆಯ ಆವರಣದಲ್ಲಿ ಶಾಸಕ ಕೆ.ಜಿ ಬೋಪಯ್ಯ ಹಕ್ಕು ಪತ್ರಗಳನ್ನು ವಿತರಿಸಿದರು. ಈ ಸಂದರ್ಭ ಮಾತನಾಡಿದ ಅವರು ಅರಣ್ಯ ಪ್ರದೇಶದೊಳಗೆ ತಲತಲಾಂತರಗಳಿಂದ ವಾಸ ಮಾಡಿಕೊಂಡಿರುವ ಆದಿವಾಸಿಗಳಿಗೆ ಹಕ್ಕು ಪತ್ರ ನೀಡಲಾಗಿದ್ದು, ಹಕ್ಕು ಪತ್ರ ಲಭಿಸಿರುವ ಕುಟುಂಬಗಳು ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ಕರೆ ನೀಡಿದರು. ಅಲ್ಲದೇ ಅರಣ್ಯ ಹಕ್ಕು ಕಾಯ್ದೆಯಡಿಯಲ್ಲಿ ಲಭಿಸಿರುವ ಜಾಗದಲ್ಲಿ ಕಾಡುಗಳನ್ನು ಬೆಳೆಸದೆ ಕೃಷಿ ಹಾಗೂ ವ್ಯವಸಾಯಕ್ಕೆ ಬಳಸಿಕೊಳ್ಳುವಂತೆ ತಿಳಿಸಿದರು.

ಹಕ್ಕು ಪತ್ರವನ್ನು ಯಾರಿಗೂ ಪರಭಾರೆ ಮಾಡಬಾರದು ಹಾಗೂ ಅಡವಿಟ್ಟು ಸಾಲ ಪಡೆದುಕೊಳ್ಳದೆ ಆಯಾ ಜಾಗದ ಹಕ್ಕು ಪತ್ರವನ್ನು ಹೊಂದಿದವರು ಬ್ಯಾಂಕಿನಿಂದ ಸಾಲವನ್ನು ಪಡೆದುಕೊಳ್ಳುವಂತೆ ಶಾಸಕರು ಕಿವಿಮಾತು ಹೇಳಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಲೀಲಾವತಿ, ತಾ.ಪಂ. ಸದಸ್ಯೆ ಚಿನ್ನಮ್ಮ, ಕಾವೇರಮ್ಮ, ಗ್ರಾ.ಪಂ. ಅಧ್ಯಕ್ಷೆ ರಾಣಿ, ಆದಿವಾಸಿ ಮುಖಂಡ ಜೆ.ಕೆ. ಅಪ್ಪಾಜಿ, ಮುತ್ತಮ್ಮ, ಐ.ಟಿ.ಡಿ.ಪಿ. ಅಧಿಕಾರಿ ಚಂದ್ರಶೇಖರ್, ಪಿ.ಡಿ.ಓ. ರಾಜೇಶ್ ಹಾಗೂ ಗ್ರಾ.ಪಂ. ಸದಸ್ಯರುಗಳು ಆದಿವಾಸಿ ಮುಖಂಡರುಗಳು ಹಾಜರಿದ್ದರು.