*ಸಿದ್ದಾಪುರ, ಅ. 10: ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನತೆ ಅತಿವೃಷ್ಟಿಯಿಂದ ಕಾಡಾನೆ ಹಾವಳಿಯಿಂದ ಬೆಳೆ ನಷ್ಟವಾಗಿ ಅತಂತ್ರ ಸ್ಥಿತಿಯಲ್ಲಿದ್ದರೂ ಸರಕಾರ ನೀಡಿದ ಆಹಾರ ಕಿಟ್ ಏಕೆ ವಿತರಿಸಲಿಲ್ಲ ಎಂದು ಗ್ರಾಮಸ್ಥರು ನಂಜರಾಯಪಟ್ಟಣ ಗ್ರಾಮ ಪಂಚಾಯಿತಿಯ ಗ್ರಾಮ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
2018-19ನೇ ಸಾಲಿನ ವಿಶೇಷ ಗ್ರಾಮ ಸಭೆಯು ಸಮುದಾಂiÀi ಭವನದಲ್ಲಿ ಗ್ರಾ.ಪಂ. ಅಧ್ಯಕ್ಷೆ ಜೈನಬಾ ಅಧ್ಯಕ್ಷತೆಯಲ್ಲಿ ನಡೆಯಿತು.
ಕಳೆದ ಸಾಲಿನ ಬೆಳೆಯೂ ಕೈಗೆ ಸಿಗಲಿಲ್ಲ ಈ ಬಾರಿ ಅತಿವೃಷ್ಟಿಯಿಂದ ಬೆಳೆ ಹಾನಿಯಾಗಿದೆ, ಗಿರಿಜನರೇ ಅಧಿಕವಿರುವ ಗ್ರಾಮ ಪಂಚಾಯಿತಿಯಲ್ಲಿ ಮಳೆಯಿಂದಾಗಿ ಕೂಲಿ ಕೆಲಸವೂ ಸಿಗಲಿಲ್ಲ. ಸರಕಾರ ಆಹಾರ ಕಿಟ್ ಎಲ್ಲಾ ಪಂಚಾಯಿತಿಯಲ್ಲಿ ವಿತರಿಸಿದ್ದಾರೆ. ಆದರೆ ನಮಗೆ ಯಾಕೆ ಸಿಗಲಿಲ್ಲ ಅಕ್ಕಿ ಕಾಳು ಸೀಮೆಎಣ್ಣೆ ನೀಡಬೇಕು ಕಾಡಾನೆ ಧಾಳಿಯಿಟ್ಟು ಬಾಳೆ ತೆಂಗು ನಾಟಿ ಮಾಡಿದ ಗದ್ದೆಯನ್ನು ತಿಂದು ತುಳಿದು ನಾಶಪಡಿಸಿದೆ, ಪಂಚಾಯಿತಿಯವರಿಗೆ ನಮ್ಮ ಸಮಸ್ಯೆ ಯಾಕೆ ಅರ್ಥವಾಗುತ್ತಿಲ್ಲ ಅಕ್ಕಿ ಸೀಮೆಎಣ್ಣೆ ನೀಡಲೇ ಬೇಕು ಎಂದೂ ಗ್ರಾಮಸ್ಥರು ಪಟ್ಟು ಹಿಡಿದರು.
ರಸ್ತೆ ಚರಂಡಿ ಕಾಮಗಾರಿ ನಡೆಯುತ್ತಿಲ್ಲ ಸೂರು ಇಲ್ಲದವರಿಗೆ ಸೂರು ಸಿಗುತ್ತಿಲ್ಲ ಎಂದು ಹರಿಹಾಯ್ದರು.
ಅಧ್ಯಕ್ಷರು ಗ್ರಾಮಸ್ಥರ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳುವದಾಗಿ ಭರವಸೆ ನೀಡಿದರು.
ತಾಲೂಕು ಪಂಚಾಯಿತಿ ಸದಸ್ಯೆ ವಿಜು ಚಂಗಪ್ಪ ನೋಡಲ್ ಅಧಿಕಾರಿ ಡಾ. ರಾಜಶೇಖರ, ಪಿಡಿಓ ಕಲ್ಪ, ಗ್ರಾಮ ಪಂಚಾಯಿತಿ ಸದಸ್ಯರುಗಳು ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.