ಕೂಡಿಗೆ, ಅ. 8: ಸಮೀಪದ ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶ್ರೀ ರಾಮಸ್ವಾಮಿ ಕಣಿವೆಯ ಗ್ರಾಮದಲ್ಲಿರುವ ಹಳೆಯದಾದ ಬ್ರಿಟೀಷರ ಕಾಲದ ಜೈಲಿನ ಕಟ್ಟಡವನ್ನು ಸಂರಕ್ಷಿಸುವಂತೆ ಈ ವ್ಯಾಪ್ತಿಯ ಗ್ರಾಮಸ್ಥರು ಮತ್ತು ಸಾರ್ವಜನಿಕರ ಒತ್ತಾಯಿಸಿದ್ದಾರೆ.

ಬ್ರಿಟಿಷ್ ಸಾಮ್ರಾಜ್ಯದ ಸರಕಾರದ ಅಳ್ವಿಕೆಯ ಸಂದರ್ಭ, ಕೊಡಗಿನ ಆಳ್ವಿಕೆಯ ಕಾಲದಲ್ಲಿ ಆಗಿನ ಬ್ರಿಟಿಷ್ ಸೇನಾಧಿಕಾರಿ ಕುಶಾಲನಗರದಲ್ಲಿ (ಆಗಿನ ಪ್ರೆಜರ್‍ಪೇಟೆ) ದರ್ಬಾರ್ ನಡೆಸುತ್ತಿದ್ದರು. ಕೊಲೆ, ಸುಲಿಗೆ, ತಪ್ಪುಗಳನ್ನು ಮಾಡಿದವರಿಗೆ, ರಾಜ್ಯದ ನಿಯಮಗಳನ್ನು ಪಾಲಿಸದವರಿಗೆ ಶಿಕ್ಷೆ ವಿಧಿಸಲು, ಕಣಿವೆಯಲ್ಲಿ ಕಾವೇರಿ ನದಿ ದಂಡೆಯಲ್ಲಿ ಒಂದು ಸೆರೆಮನೆಯನ್ನು ನಿರ್ಮಿಸಲಾಗಿತ್ತು. ಬೃಹತ್ ಗಾತ್ರದ ಕಬ್ಬಿಣದ ಸಲಾಕೆಗಳು, ಬಾಗಿಲುಗಳು, ಕೋಣೆಗಳನ್ನು ನಿರ್ಮಿಸಿ ಅಲ್ಲಿ ತಪ್ಪಿತಸ್ಥರನ್ನು ಸೆರೆವಾಸದಲ್ಲಿರಿಸಿ ಶಿಕ್ಷೆ ನೀಡುತ್ತಿದ್ದರು. ಬ್ರಿಟಿಷ್ ಸರ್ಕಾರದ ಆಳ್ವಿಕೆಯ ನಂತರ ಕೊಡಗು ರಾಜ್ಯದ ಸರಕಾರ ಆಳ್ವಿಕೆ ನಡೆಸಿತು. ನಂಜರಾಯಪಟ್ಟಣವನ್ನು ತಾಲೂಕಾಗಿ ಮಾಡಲಾಗಿತ್ತು. ಈಗಿನ ಕಣಿವೆ ಗ್ರಾಮದ ಸಮೀಪದಲ್ಲಿರುವ ರಾಂಪುರ ಗ್ರಾಮವು ಹೋಬಳಿ ಕೇಂದ್ರವಾಗಿತ್ತು. ಹೋಬಳಿ ಕೇಂದ್ರದಲ್ಲಿ ಕೊಡಗು ರಾಜ್ಯ ಸರ್ಕಾರದ ಸಮಯದಲ್ಲಿ ಈ ಸೆರೆಮನೆ ಕಟ್ಟಡವನ್ನು ಹೋಬಳಿ ಕಚೇರಿಯಾಗಿ ಬಳಕೆ ಮಾಡಿಕೊಂಡು ಕಾರ್ಯನಿರ್ವಹಿಸಲಾಗಿತ್ತು ಎಂದು ಗ್ರಾಮದ ಹಿರಿಯರು ತಿಳಿಸಿದ್ದಾರೆ. ಅಲ್ಲದೆ ಕೆಲವು ವರ್ಷಗಳಲ್ಲಿ ಕಣಿವೆ ಗ್ರಾಮದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೆಲವು ತರಗತಿಗಳನ್ನು 1980ರಲ್ಲಿ ಈ ಕಟ್ಟಡದಲ್ಲಿ ಕೆಲವು ವರ್ಷಗಳವರೆಗೆ ಶಾಲೆಯ ತರಗತಿಗಳು, ಅಂಗನವಾಡಿಗಳನ್ನು ನಡೆಸಲಾಗಿದೆ.

ಇದೀಗ ಕಳೆದ ಹತ್ತು ವರ್ಷಗಳಿಂದ ಗ್ರಾಮಸ್ಥರು ವಿವಿಧ ವಸ್ತುಗಳನ್ನು ಕಟ್ಟಡದಲ್ಲಿ ಸಂಗ್ರಹಿಸಿಕೊಂಡಿದ್ದಾರೆ. ಆದರೆ, ಮಳೆಯ ನೀರು ಬೀಳುವ ಪರಿಣಾಮ ಕಟ್ಟಡದ ಒಂದು ಭಾಗದ ಗೋಡೆಯು ನೆನೆಯುತ್ತ್ತಿದೆ. ಗಾಳಿಗೆ ಹೆಂಚುಗಳು ಒಡೆದು ಹೋಗಿದ್ದು, ಮಳೆ ನೀರು ಕಟ್ಟಡದ ಒಳಗೆ ಸೋರುತ್ತಿದೆ. ಉತ್ತಮವಾಗಿರುವ ಗಟ್ಟಿಮುಟ್ಟಾದ ಈ ಕಟ್ಟಡವನ್ನು ಉಳಿಸಿಕೊಳ್ಳಲು ದುರಸ್ಥಿ ಮಾಡಿ ಯಾವದಾದರೊಂದು ಸರ್ಕಾರಿ ಕಚೇರಿಗೋ ಅಥವಾ ಕಣಿವೆ ಗ್ರಾಮದ ಗ್ರಾಮಸ್ಥರಿಗೆ ಅನುಕೂಲ ವಾಗುವಂತೆ ಮಾಡಲು ಗ್ರಾಮ ಪಂಚಾಯಿತಿ ಮುಂದಾಗಬೇಕು. ಈ ಕಟ್ಟಡವು ಶ್ರೀ ರಾಮಲಿಂಗೇಶ್ವರ ದೇವಾಲಯದ ಸಮೀಪದಲ್ಲಿಯೇ ಇರುವದರಿಂದ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿ ಕರಿಗೆ ಸದುಪ ಯೋಗವಾಗುವಂತೆ ಗ್ರಂಥಾಲಯವನ್ನು ತೆರೆದಲ್ಲಿ ಅಥವಾ ಸರ್ಕಾರಿ ಕೆಲಸಕ್ಕೆ ಉಪಯೋಗಿಸಿ ಕೊಳ್ಳಬೇಕು ಎಂದು ಈ ವ್ಯಾಪ್ತಿಯ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಹೆಬ್ಬಾಲೆ ಗ್ರಾಮ ಪಂಚಾಯಿತಿ ವತಿಯಿಂದ ಇದರ ಪಕ್ಕದ ಜಾಗವನ್ನು ಸಮತಟ್ಟು ಮಾಡಿ ಉದ್ಯಾನವನ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ. ಅದೇ ಮಾದರಿಯಲ್ಲಿ ಈ ಕಟ್ಟಡವನ್ನು ದುರಸ್ತಿಪಡಿಸಿ ಆಡಳಿತ ಕಚೇರಿ ಆರಂಭಿಸಿದಲ್ಲಿ ಇನ್ನೂ ನೂರಾರು ವರ್ಷಗಳವರೆಗೆ ಉಪಯೋಗಕ್ಕೆ ಯೋಗ್ಯವಾಗಲಿದೆ. ಇದರಂತೆ ಈಗಿನ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ, ಅಭಿವೃದ್ಧಿ ಅಧಿಕಾರಿ ಸ್ಥಳ ಪರಿಶೀಲಿಸಿ, ಉತ್ತಮವಾಗಿರುವ ಕಟ್ಟಡವನ್ನು ಉಳಿಸಲು ಪ್ರಯತ್ನ

ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ಹೆಬ್ಬಾಲೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಕೇಶ್ ಅವರು ಪ್ರತಿಕ್ರಿಯೆ ನೀಡಿದ್ದು, ಈ ಕಟ್ಟಡ ದುರಸ್ತಿ ಮಾಡಿ ಬಳಸಲು ಗ್ರಾಮಸ್ಥರಿಂದ ಮನವಿ ಪತ್ರಗಳು ಬಂದಿವೆ. ಈ ವಿಷಯವಾಗಿ ಮುಂದಿನ ಮಾಸಿಕ ಸಭೆಯಲ್ಲಿ ಚರ್ಚಿಸಿ ಹಣವನ್ನು ಕಾದಿರಿಸಲು, ಕಟ್ಟಡವನ್ನು ಯಾವದೇ ರೀತಿಯಲ್ಲಿಯೂ ಹಾಳುಮಾಡದೆ ಸರ್ಕಾರಿ ಕಚೇರಿಯನ್ನಾಗಿ ಬಳಕೆ ಮಾಡಲು ಬೇಕಾಗುವ ವ್ಯವಸ್ಥೆ ಯನ್ನು ಮಾಡಲು ಮುಂದಾಗುತ್ತೇವೆ ಎಂದಿದ್ದಾರೆ.

ಕಣಿವೆ ಭಾಗದ ಸದಸ್ಯರಾದ ವೆಂಕಟೇಶ್ ಮತ್ತು ಶಿವರುದ್ರಪ್ಪ, ಮಂಜುಳಾ ಇವರುಗಳು ಸುದ್ಧಿಗಾರರೊಂದಿಗೆ ಮಾತನಾಡಿ, ಈ ಸಾಲಿನಲ್ಲಿ 14ನೇ ಹಣಕಾಸಿನ ಕ್ರಿಯಾಯೋಜನೆಯಲ್ಲಿ ಈ ಮುಖ್ಯ ಕಾಮಗಾರಿಯನ್ನು ಕೈಗೆತ್ತಿಗೊಂಡು ದುರಸ್ತಿ ಮಾಡಲು ಮುಂದಾಗುತ್ತೇವೆ. ಅಲ್ಲದೆ, ನಮ್ಮ ವ್ಯಾಪ್ತಿಗೆ ಬರುವ ಕಾಮಗಾರಿಯ ಅನುದಾನವನ್ನು ಸಹ ಇದಕ್ಕೆ ವಿನಿಯೋಗಿಸಿ ಕಾಮಗಾರಿ ಮಾಡುವದರ ಮೂಲಕ ಈ ಹಳೆ ಕಟ್ಟಡವನ್ನು ಗ್ರಾಮ ಪಂಚಾಯಿತಿಗೆ ಸದುಪಯೋಗವಾಗುವಂತೆ ಉಪಯುಕ್ತ ಮಾಡಿಕೊಳ್ಳುತ್ತೇವೆ ಎಂದಿದ್ದಾರೆ.