ಮಡಿಕೇರಿ, ಅ. 8: ತುಲಾ ಸಂಕ್ರಮಣ ಜಾತ್ರೆಯ ಪೂರ್ವ ಸಿದ್ಧತೆಗಾಗಿ ಇಂದು ಭಾಗಮಂಡಲ ದಲ್ಲಿ ಕರೆಯಲಾಗಿದ್ದ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯ ಸಭೆಯಲ್ಲಿ ಹಲವು ವಿಷಯಗಳು ಸಾರ್ವಜನಿಕರಿಂದ ಪ್ರಸ್ತಾಪಗೊಂಡು, ಸಾಕಷ್ಟು ಗೊಂದಲಕ್ಕೆ ಕಾರಣ ವಾಯಿತು. ಈ ವೇಳೆ ಮಧ್ಯಪ್ರವೇಶಿಸಿದ ಸಚಿವ ಸಾ.ರಾ. ಮಹೇಶ್ ಅವರು, ಭವಿಷ್ಯದಲ್ಲಿ ಸಂಬಂಧಿಸಿದ ವಿಷಯಗಳ ಬಗ್ಗೆ ತಮ್ಮ ಉಪಸ್ಥಿತಿಯಲ್ಲಿ ಸಭೆ ಕರೆದು ಇತ್ಯರ್ಥ ಗೊಳಿಸುವ ಇಂಗಿತ ವ್ಯಕ್ತಪಡಿಸಿದ ಮೇರೆಗೆ ಪರಿಸ್ಥಿತಿ ತಿಳಿಯಾಯಿತು.ಮುಖ್ಯವಾಗಿ ತಲಕಾವೇರಿಯಲ್ಲಿ ಕಾವೇರಿ ಮಾತೆಗೆ ತೀರ್ಥ ಕುಂಡಿಕೆ ಬಳಿ ಕುಂಕುಮಾರ್ಚನೆಗೆ ಅವಕಾಶ ನೀಡಬೇಕೆಂದು ಕೆಲವರು ಪಟ್ಟು ಹಿಡಿದರೆ,

(ಮೊದಲ ಪುಟದಿಂದ) ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡುಬಂದಂತೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಎಸ್. ತಮ್ಮಯ್ಯ ಸಮರ್ಥಿಸಿಕೊಂಡರು.

ಈ ಬಗ್ಗೆ ಸ್ಥಳೀಯರಾದ ಅಮೆ ಬಾಲಕೃಷ್ಣ, ಕುದುಕುಳಿ ಭರತ್‍ಕುಮಾರ್, ಮಾಜಿ ಅಧ್ಯಕ್ಷ ಮನು ಮುತ್ತಪ್ಪ ತೀವ್ರವಾಗಿ ಆಕ್ಷೇಪಿಸುತ್ತಾ ಹಿಂದಿನ ಪದ್ಧತಿ ಮುಂದುವರಿಸುವಂತೆ ಆಗ್ರಹಿಸಿದರು. ಹೊಸೂರು ಸತೀಶ್‍ಕುಮಾರ್ ಮಧ್ಯಪ್ರವೇಶಿಸಿ ಅಷ್ಟಮಂಗಲದಂತೆ ಮಾರ್ಪಾಡು ಬಗ್ಗೆ ಸಮರ್ಥಿಸಿದರಾದರೂ, ಜಾತ್ರೆ ಸಂದರ್ಭ ಭಂಡಾರ ಕೊಂಡೊಯ್ಯುವ ಸಂಪ್ರದಾಯ ಮತ್ತು ತೀರ್ಥೋದ್ಭವ ವೇಳೆ ‘ದುಡಿಪಾಟ್’ ಬಗ್ಗೆ ಜನಾಂಗೀಯ ತಾರತಮ್ಯ ಸಲ್ಲವೆಂದು ಪ್ರತಿಪಾದಿಸಿದರು.

ಇನ್ನೊಂದೆಡೆ ಭಾಗಮಂಡಲದಲ್ಲಿ ಸ್ವಚ್ಛತೆ, ವಾಹನ ಶುಲ್ಕ ವಸೂಲಿ ಸಂಬಂಧ ದೇವಾಲಯ ಸಮಿತಿ ಹಾಗೂ ಗ್ರಾ.ಪಂ. ಪ್ರತಿನಿಧಿಗಳ ನಡುವೆ ವಾಕ್ಸಮರ ನಡೆಯಿತು. ದೇವಾಲಯ ಸಮಿತಿ ಪ್ರಮುಖರು ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಗ್ರಾ.ಪಂ.ಗೆ ಯಾವ ಮಾಹಿತಿ ಲಭಿಸುತ್ತಿಲ್ಲವೆಂಬ ಟೀಕೆ ಕೇಳಿ ಬಂತು. ರೂ. 26 ಲಕ್ಷ ನಿಲುಗಡೆ ಶುಲ್ಕ ಏನಾಗುತ್ತಿದೆ ಎಂಬ ಮರು ಪ್ರಶ್ನೆ ದೇವಾಲಯ ಸಮಿತಿಯದ್ದಾಗಿತ್ತು.

ಆ ವೇಳೆಗೆ ಜಾತ್ರೆಯ ಕಟ್ಟುಪಾಡು ಉಲ್ಲಂಘಿಸಿ ಅಲ್ಲಿನ ಕೆಲವು ಹೊಟೇಲ್‍ಗಳಲ್ಲಿ ಮಾಂಸಾಹಾರ ಬಳಕೆಯಾಗುವ ಆರೋಪ ಕೇಳಿಬಂತಲ್ಲದೆ, ಮದ್ಯ ಮಾರಾಟ ನಿರ್ಬಂಧ, ಗೃಹೋಪಯೋಗಿ ‘ವೈನ್’ ಬಳಕೆ ಕುರಿತು ಬಿಸಿ ಚರ್ಚೆ ನಡೆದು, ಈ ಬಗ್ಗೆ ಒಮ್ಮೆ ತಿಳಿಹೇಳಿ, ತಪ್ಪಿದರೆ, ನಿಯಮಾನುಸಾರ ಕ್ರಮಕ್ಕೆ ಸಚಿವರು ಸಲಹೆಯಿತ್ತರು. ‘ವೈನ್’ ಮಾದಕಪಾನೀಯ ಅಲ್ಲವೆಂಬ ಪ್ರತಿಪಾದನೆಯೂ ವ್ಯಕ್ತವಾಯಿತು.

ಇಂತಹ ಎಲ್ಲಾ ಗೊಂದಲಗಳ ಬಗ್ಗೆ ಮುಂದೊಮ್ಮೆ ಸಭೆ ಕರೆದು, ಸಮಸ್ಯೆಗಳ ಇತ್ಯರ್ಥಕ್ಕೆ ಜಿಲ್ಲೆಯ ಶಾಸಕರುಗಳ ಉಪಸ್ಥಿತಿಯಲ್ಲಿ ಸ್ಥಳೀಯರೊಡಗೂಡಿ ಚರ್ಚಿಸಿ ಸೂಕ್ತ ಪರಿಹಾರ ಕಂಡುಹಿಡಿಯುವ ಭರವಸೆಯನ್ನು ಸಚಿವ ಸಾ.ರಾ. ಮಹೇಶ್ ನೀಡುವದರೊಂದಿಗೆ ವಾತಾವರಣ ತಿಳಿಗೊಳಿಸಿದರು. ಒಂದು ಹಂತದಲ್ಲಿ ಕಾವೇರಿದ ಚರ್ಚೆಯೊಂದಿಗೆ ಗ್ರಾ.ಪಂ. ಪ್ರತಿನಿಧಿಗಳು, ದೇವಾಲಯ ಸಮಿತಿ ನಡುವೆ ಪೊಲೀಸರು ಮಧ್ಯ ಪ್ರವೇಶಿಸುವಂತಾಯಿತು.

ತುಲಾ ಸಂಕ್ರಮಣ ಜಾತ್ರೆಯ ಒಂದು ತಿಂಗಳು ಅನ್ನದಾನದ ಬಗ್ಗೆಯೂ ಸದಭಿಪ್ರಾಯ ಕೇಳಿ ಬಂತು. ಮಂಡ್ಯ ಬಳಗಕ್ಕೂ ಈ ಅವಕಾಶಕ್ಕೆ ಜಿಲ್ಲಾಡಳಿತಕ್ಕೆ ಸಂಬಂಧಿಸಿದವರು ವ್ಯವಹರಿಸಲು ಸೂಚಿಸಲಾಯಿತು. ಅಧಿಕಾರಿ ಜಗದೀಶ್‍ಕುಮಾರ್ ಸ್ವಾಗತಿಸಿದರು. ಅಧ್ಯಕ್ಷ ತಮ್ಮಯ್ಯ ಪ್ರಾಸ್ತಾವಿಕ ನುಡಿಯೊಂದಿಗೆ ಸದಸ್ಯ ಕೋಡಿ ಮೋಟಯ್ಯ ವಂದಿಸಿದರು.