ಮಡಿಕೇರಿ, ಅ. 7: ಕೊಡಗು ಜಿಲ್ಲೆಯ ಕೇಂದ್ರ ಸ್ಥಳ ಮಡಿಕೇರಿ ನಗರದಲ್ಲಿ ಪ್ರಸ್ತುತ ಸಾಲಿನಲ್ಲಿ ಸಂಭವಿಸಿದ ಮುಂಗಾರು ಮಳೆಯ ಪರಿಣಾಮ ಇದುವರೆಗೆ ನಗರಸಭೆಗೆ ಲಭ್ಯವಿರುವ ಮಾಹಿತಿ ಪ್ರಕಾರ 164 ಮನೆಗಳಿಗೆ ಹಾನಿ ಉಂಟಾಗಿದೆ ಎಂದು ಮಾಹಿತಿ ಲಭ್ಯವಾಗಿದೆ. ಅಲ್ಲದೆ ಈ ಮನೆಗಳ ಅಂದಾಜು ನಷ್ಟ ರೂಪಾಯಿ 386.15 ಲಕ್ಷವೆಂದು ನಗರಸಭೆ ಮಾಹಿತಿ ಕಲೆಹಾಕಿದೆ. ಹಾನಿಗೊಳಗಾದ ಮನೆಗಳಲ್ಲಿ 26 ಪಕ್ಕಾಮನೆಗಳಿದ್ದು, ಇನ್ನುಳಿದಂತೆ 138 ಮನೆಗಳು ಕಚ್ಚಾ ಮನೆಗಳು ಎಂದು ಗುರುತಿಸಲ್ಪಡುವಂತಾಗಿವೆ. ಪಕ್ಕಾಮನೆಗಳ ನಷ್ಟ ರೂ. 137.20 ಲಕ್ಷವಾದರೆ, ಕಚ್ಚಾ ಮನೆಗಳ ನಷ್ಟದ ಮೊತ್ತವನ್ನು ರೂ. 248.95 ಲಕ್ಷವೆಂದು ನಗರಸಭೆ ಅಂದಾಜಿಸಿದೆ. ಈ ಎಲ್ಲದರ ಒಟ್ಟು ಮೊತ್ತ ರೂ. 386.15 ಲಕ್ಷವೆಂದು ಮೂಲಗಳಿಂದ ಮಾಹಿತಿ ಲಭಿಸಿದೆ.