ಸೋಮವಾರಪೇಟೆ,ಅ.7: ಜೂನ್, ಜುಲೈನಲ್ಲಿ ಬಿದ್ದ ಭಾರೀ ಮಳೆ, ಆಗಸ್ಟ್‍ನಲ್ಲಿ ಸಂಭವಿಸಿದ ಮೇಘಸ್ಫೋಟ, ಜಲಪ್ರಳಯ, ಭೂಕುಸಿತಗಳು ಕಾಫಿ ಬೆಳೆಗಾರರನ್ನು ಇನ್ನಿಲ್ಲದಂತೆ ಸಂಕಷ್ಟಕ್ಕೆ ತಳ್ಳಿದ್ದು, ಕಾರ್ಮಿಕರೊಂದಿಗೆ ಬೆಳೆಗಾರರ ಬದುಕೂ ದುಸ್ತರಗೊಂಡಿದೆ.ಹೂ ಮಳೆಯೊಂದಿಗೆ ಮುಂಗಾರು ಮಳೆ ಉತ್ತಮವಾಗಿದ್ದ ಹಿನ್ನೆಲೆ ಕಾಫಿ ತೋಟಗಳಲ್ಲಿ ಪ್ರಸಕ್ತ ವರ್ಷ ಬಂಪರ್ ಬೆಳೆ ನಿರೀಕ್ಷಿಸಿದ್ದ ಬೆಳೆಗಾರರು ನಂತರದ ದಿನಗಳಲ್ಲಿ ಉಂಟಾದ ಹವಾಮಾನ ವೈಪರೀತ್ಯದಿಂದ ಅಕ್ಷರಶಃ ನಲುಗಿ ಹೋಗಿದ್ದಾರೆ. ವಾರ್ಷಿಕ 40 ರಿಂದ 50 ಇಂಚು ಮಳೆಯಾಗುತ್ತಿದ್ದ ಪ್ರದೇಶಗಳಲ್ಲಿ ಈ ವರ್ಷ 90 ಇಂಚು ಮಳೆಯಾಗಿದ್ದರೆ, ವಾರ್ಷಿಕ 100ರಿಂದ 150 ಇಂಚು ಮಳೆಯಾಗುತ್ತಿದ್ದ ಪುಷ್ಪಗಿರಿ ಬೆಟ್ಟಶ್ರೇಣಿ ಪ್ರದೇಶಗಳಲ್ಲಿ ಈ ವರ್ಷ 300 ರಿಂದ 350 ಇಂಚು ಮಳೆ ಸುರಿದಿದೆ.

ಪರಿಣಾಮ ಹಲವೆಡೆ ಕೊಳೆರೋಗ ಕಂಡುಬಂದು ಬಂಪರ್ ಬೆಳೆ ನೆಲಕ್ಕಚ್ಚಿದ್ದರೆ, ಶಾಂತಳ್ಳಿ ಹೋಬಳಿ ವ್ಯಾಪ್ತಿಯಲ್ಲಂತೂ ಶೇ.70ರಷ್ಟು ಫಸಲು ಮಣ್ಣುಪಾಲಾಗಿದೆ. ಇದರೊಂದಿಗೆ ಅಲ್ಲಲ್ಲಿ ಭೂಕುಸಿತಗಳು ಉಂಟಾಗಿದ್ದು, ಕಾಫಿ ತೋಟಗಳೇ ಕಣ್ಮರೆಯಾಗಿದೆ. ಈ ಹಿನ್ನೆಲೆ ಅನಿವಾರ್ಯವಾಗಿ ಬೆಳೆಗಾರರು ಪರಿಹಾರ ಕೋರಿ ಅರ್ಜಿ ಸಲ್ಲಿಸಿದ್ದು, ಸೋಮವಾರಪೇಟೆ ಕಾಫಿ ಮಂಡಳಿ ಕಚೇರಿಗೆ ಈಗಾಗಲೇ 10 ಸಾವಿರಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿವೆ.

ಸೋಮವಾರಪೇಟೆ ತಾಲೂಕಿನಲ್ಲಿ ಬೆಳೆ ನಷ್ಟ ಪರಿಹಾರ ಕೋರಿ ಸುಮಾರು 10ಸಾವಿರಕ್ಕೂ ಅಧಿಕ ಅರ್ಜಿಗಳು ಕಾಫಿ ಮಂಡಳಿಗೆ ಸಲ್ಲಿಸಲ್ಪಟ್ಟಿವೆ ಎಂದು ಮಂಡಳಿಯ ಹಿರಿಯ ಸಂಪರ್ಕಾಧಿಕಾರಿ ಹೆಚ್.ಆರ್. ಮುರಳೀಧರ್ ತಿಳಿಸಿದ್ದಾರೆ. ಕಾಫಿ ಮಂಡಳಿಯು ಈಗಾಗಲೇ ನಷ್ಟದ ಅಂದಾಜನ್ನು ಮಾಡಿದ್ದು ತಾಲೂಕಿನ ಶಾಂತಳ್ಳಿ ಹೋಬಳಿಯಲ್ಲಿ ಅತ್ಯಧಿಕ ಪ್ರಮಾಣದ ಬೆಳೆ ನಷ್ಟ ಸಂಬವಿಸಿದೆ. ಶನಿವಾರಸಂತೆ ಹಾಗೂ ಕೊಡ್ಲಿಪೇಟೆ ಹೋಬಳಿಗಳಲ್ಲಿ ಬೆಳೆ ನಷ್ಟ ಅಲ್ಪ ಪ್ರಮಾಣದ್ದಾಗಿದೆ. ಸುಂಟಿಕೊಪ್ಪ ಮತ್ತು ಮಾದಾಪುರ ಹೋಬಳಿಯಲ್ಲಿ ಪ್ರಮಾಣದ ಬೆಳೆ ನಷ್ಟ ಸಂಬವಿಸಿದೆ. ಶನಿವಾರಸಂತೆ ಹಾಗೂ ಕೊಡ್ಲಿಪೇಟೆ ಹೋಬಳಿಗಳಲ್ಲಿ ಬೆಳೆ ನಷ್ಟ ಅಲ್ಪ ಪ್ರಮಾಣದ್ದಾಗಿದೆ. ಸುಂಟಿಕೊಪ್ಪ ಮತ್ತು ಮಾದಾಪುರ ಹೋಬಳಿಯಲ್ಲಿ (ಮೊದಲ ಪುಟದಿಂದ) ಪರಿಹಾರ ಕೋರಿ 5-6 ಅರ್ಜಿಗಳನ್ನು ಸಲ್ಲಿಸಿದ್ದು ಇದರಲ್ಲಿ ಕಾಫಿ, ಏಲಕ್ಕಿ, ಕರಿಮೆಣಸು ಹಾಗೂ ಕಿತ್ತಲೆ ಬೆಳೆ ನಷ್ಟದ ಅರ್ಜಿಗಳಿವೆ ಎಂದರಲ್ಲದೆ ಇವುಗಳನ್ನು ಕಂದಾಯ ಇಲಾಖೆಯ ಅಧಿಕಾರಿಗಳಿಗೆ ರವಾನಿಸಲಾಗಿದ್ದು ವರದಿ ನಿರೀಕ್ಷಿಸಲಾಗುತ್ತಿದೆ ಎಂದರು.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ನಿಯಮಾವಳಿಗಳ ಪ್ರಕಾರ ಕಾಫಿ ಬೆಳೆಗಾರರಿಗೆ ಬೆಳೆ ನಷ್ಟ ಅಥವಾ ಭೂ ಕುಸಿತದಿಂದ ತೋಟ ಸಂಪೂರ್ಣ ನಾಶವಾಗಿದ್ದರೆ ಪರಿಹಾರ ನೀಡಲು ಅವಕಾಶವಿದ್ದು ಸಣ್ಣ ಕಾಫಿ ಬೆಳೆಗಾರರು ಒಬ್ಬರಿಗೆ 5 ಎಕರೆವರೆಗೆ ಯಾವದಾದರೂ ಒಂದು ನಷ್ಟ ಪರಿಹಾರ ಪಡೆಯಬಹುದಾಗಿದೆ ಎಂದರು.

ಬೆಳೆ ನಷ್ಟ ಆಗಿದ್ದರೆ ಪ್ರತೀ ಹೆಕ್ಟೇರ್ ಬೆಳೆ ನಷ್ಟಕ್ಕೆ 17,500 ಹಾಗೂ ತೋಟ ಸಂಪೂರ್ಣ ನಷ್ಟವಾಗಿದ್ದರೆ ಹೆಕ್ಟೇರ್‍ಗೆ 37,500 ರೂಪಾಯಿಗಳವರೆಗೆ ನಷ್ಟ ಪರಿಹಾರ ಪಡೆಯಬಹುದಾಗಿದೆ. ದೊಡ್ಡ ಕಾಫಿ ಬೆಳೆಗಾರರು ಭೂ ಕುಸಿತದಿಂದ ಆದ ನಷ್ಟಕ್ಕೆ ಪರಿಹಾರ ಪಡೆಯಲು ಅವಕಾಶವಿಲ್ಲ ಎಂದರಲ್ಲದೆ, ಇಂತಹ ಬೆಳೆಗಾರರು ತಮ್ಮ 5 ಏಕರೆವರೆಗೆ ಮಾತ್ರ ಬೆಳೆ ನಷ್ಟ ಪರಿಹಾರ ಪಡೆಯಬಹುದಾಗಿದೆ ಎಂದರು. ತಾಲೂಕಿನಲ್ಲಿ ಭೂ ಕುಸಿತದಿಂದಾಗಿ ಒಟ್ಟು 135 ಹೆಕ್ಟೇರ್ ಕಾಫಿ ಬೆಳೆ ನಷ್ಟವಾಗಿದ್ದು ಮಂಡಳಿಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಸಲ್ಲಿಸಿರುವ ವರದಿಯಂತೆ ಸುಮಾರು 15 ಕೋಟಿ ರೂಪಾಯಿಗಳ ಪರಿಹಾರ ಕೋರಿ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಮುರಳೀಧರ್ ಮಾಹಿತಿ ನೀಡಿದರು.

ತಾಲೂಕಿನಾದ್ಯಂತ ಸಣ್ಣಕಾಫಿ ಬೆಳೆಗಾರರೇ ಅಧಿಕವಿದ್ದು, ಇರುವ ತೋಟದಲ್ಲಿಯೇ ಕಾಫಿಯೊಂದಿಗೆ ಕಾಳುಮೆಣಸು, ಶುಂಠಿ, ಬಾಳೆ, ಏಲಕ್ಕಿ, ಕಿತ್ತಳೆಗಳನ್ನು ಉಪ ಬೆಳೆಗಳನ್ನಾಗಿ ಬೆಳೆಯಲಾಗುತ್ತಿದೆ. ಸರ್ಕಾರದಿಂದ ಎಲ್ಲಾ ಬೆಳೆಗಳಿಗೂ ಪರಿಹಾರ ಒದಗಿಸಿಕೊಡಲು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಮುಂದಾಗಬೇಕು ಎಂದು ತೋಳೂರುಶೆಟ್ಟಳ್ಳಿಯ ಕೃಷಿಕರಾದ ಸುಧಾಕರ್, ಮಾಚಯ್ಯ ಅವರುಗಳು ಅಭಿಪ್ರಾಯಿಸಿದ್ದಾರೆ.