ಭಾಗಮಂಡಲ, ಅ. 5: ಇಲ್ಲಿನ ಭಗಂಡೇಶ್ವರ ರೈತ ಉತ್ಪಾದಕರ ಕಂಪೆನಿಯಲ್ಲಿರುವ ಅಡಿಕೆ ಸುಲಿಯುವ ಯಂತ್ರ, ತೆಂಗು ಕೀಳುವ ಯಂತ್ರಗಳು ಬಳಕೆಗೆ ಬಾರದೆ ಅನುಪಯುಕ್ತ ವಾಗಿರುವ ಬಗ್ಗೆ ಇಲ್ಲಿನ ಗೌಡ ಸಮಾಜದಲ್ಲಿ ನಡೆದ ಮಹಾಸಭೆಯಲ್ಲಿ ರೈತರು ಅಸಮಾಧಾನ ವ್ಯಕ್ತಪಡಿಸಿದರು.

ಕಂಪೆನಿ ಅಧ್ಯಕ್ಷ ಕೋಡಿ ಪೊನ್ನಪ್ಪ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಈ ಸಂದರ್ಭ ನಂಜುಂಡಪ್ಪ ಹಾಗೂ ಪ್ರಕಾಶ್ ಮಾತನಾಡಿ ಕಂಪೆನಿಯು ರೈತರು ಬೆಳೆದ ಬೆಳೆಯನ್ನು ನ್ಯಾಯಯುತ ಬೆಲೆಗೆ ಖರೀದಿಸಬೇಕು. ಮೃತಪಟ್ಟ ಸದಸ್ಯರ ಸದಸ್ಯತ್ವವನ್ನು ಅವರ ಕುಟುಂಬಕ್ಕೆ ವರ್ಗಾಯಿಸಬೇಕು. ಭತ್ತದ ಫಸಲನ್ನು ತಾತ್ಕಾಲಿಕವಾಗಿ ಕಂಪೆನಿ ಖರೀದಿಸಲು ಮುಂದಾಗ ಬೇಕು. ಇದರಿಂದ ದಲ್ಲಾಳಿಗಳ ಹಾವಳಿ ತಪ್ಪಲಿದೆ ಎಂದರು. ಕುಯ್ಯಮುಡಿ ಮನೋಜ್ ಮಾತನಾಡಿ ಕಂಪೆನಿಯು ಯಂತ್ರೋಪಕರಣಗಳನ್ನು ರೈತರಿಗೆ ಅಗತ್ಯ ಸಮಯದಲ್ಲಿ ನೀಡುತ್ತಿಲ್ಲ. ಯಂತ್ರೋಪಕರಣಗಳು ಹೆಚ್ಚಿನ ಪ್ರಮಾಣದಲ್ಲಿರಿಸಿಕೊಳ್ಳುವಂತೆ ಸಲಹೆ ಮಾಡಿದರು. ಜಿಲ್ಲಾ ಪಂಚಾಯಿತಿ ಸದಸ್ಯೆ ಕವಿತಾ ಪ್ರಭಾಕರ್ ಮಾತನಾಡಿ ಕಳೆದ ನಾಲ್ಕು ವರ್ಷಗಳಿಂದ ನಿರುಪಯುಕ್ತವಾಗಿ ಬಿದ್ದಿರುವ ಉಪಕರಣಗಳನ್ನು ಸರಿಪಡಿಸಲು ಏಕೆ ಕ್ರಮಕೈಗೊಂಡಿಲ್ಲ. ಕಂಪೆನಿಯಲ್ಲಿರು ವವರಿಗೆ ಇದರ ಬಗ್ಗೆ ಜವಾಬ್ದಾರಿ ಇಲ್ಲವೇ ಎಂದÀು ಪ್ರಶ್ನಿಸಿದರು.

ನಾರಾಯಣಾಚಾರ್ ಮಾತನಾಡಿ ನಿರುಪಯುಕ್ತ ಯಂತ್ರಗಳ ಬಳಕೆ ಮಾಡದೆ ಬಿಟ್ಟಿರುವ ಬಗ್ಗೆ ಕಂಪೆನಿ ಗ್ರಾಹಕರ ವೇದಿಕೆಗೆ ಹೋಗಬೇಕಿದ್ದು ಯಂತ್ರೋಪಕರಣಗಳ ವ್ಯಾಲಿಡಿಟಿ ಹಾಗೂ ಗ್ಯಾರಂಟಿ ಮುಗಿದ ನಂತರ ಆ ವಸ್ತುಗಳನ್ನು ಹೇಗೆ ಬಳಕೆ ಮಾಡುತ್ತೀರಿ ಎಂದು ಪ್ರಶ್ನಿಸಿದರು. ಭಾಗಮಂಡಲದಲ್ಲಿ ಹಾಲಿನ ಡೈರಿ ಸ್ಥಾಪಿಸಬೇಕು. ತೋಟಗಾರಿಕಾ ಇಲಾಖೆಯಿಂದ ನೀಡುತ್ತಿರುವ ಟಾರ್ಪಲ್ ಉತ್ತಮವಾಗಿಲ್ಲ. ಉತ್ತಮ ಗುಣಮಟ್ಟದ ಟಾರ್ಪಲ್ ಅನ್ನು ರೈತ ಕಂಪೆನಿ ನೀಡುವಂತೆ ಸದಸ್ಯರು ಮಹಾಸಭೆಯಲ್ಲಿ ಮನವಿ ಮಾಡಿದರು.

ಹೊಸೂರು ಸತೀಶ್‍ಕುಮಾರ್ ಮಾತನಾಡಿ ಕಂಪೆನಿಯು ರೈತರ ಬೆಳೆದ ಬೆಳೆಯನ್ನು ಖರೀದಿಸಿ ದಾಸ್ತಾನು ಮಾಡಲು ಗೋದಾಮು ಕೊರತೆ ಇದೆ. ಅಲ್ಲದೆ ಕೊಳ್ಳುವವರಿಗೆ ಟನ್‍ಗಟ್ಟಲೆ ಉತ್ಪನ್ನಗಳನ್ನು ಕಂಪೆನಿಯು ನೀಡಬೇಕು. ಆದ್ದರಿಂದ ಇಲ್ಲಿನ ರೈತರಿಂದ ಉತ್ಪನ್ನ ಲಭಿಸುತ್ತಿಲ್ಲ. ಉತ್ಪಾದನೆ ಕಡಿಮೆ ಇದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವದು ಎಂದರು.

ಸಭೆಯಲ್ಲಿ ಸಂಘದ ಎಲ್ಲಾ ನಿರ್ದೇಶಕರು, ತೋಟಗಾರಿಕಾ ಇಲಾಖೆಯ ಚಂದ್ರಶೇಖರ್, ಕಂಪೆನಿಯ ಐಎಸ್‍ಎಟಿ ಶಿವ ಕುಮಾರ್, ಕಂಪೆನಿಯ ಕಾರ್ಯ ನಿರ್ವಹಣಾಧಿಕಾರಿ ಬಿನ್ನಿ ಉಪಸ್ಥಿತರಿದ್ದರು. ದೇವಂಗುಡಿ ಹರ್ಷ ವಂದಿಸಿದರು.