ಕೂಡಿಗೆ, ಅ. 5: ಕೂಡಿಗೆ ಗ್ರಾಮ ಪಂಚಾಯ್ತಿಯನ್ನು ಕೊಡಗು-ಮೈಸೂರು ಸಂಸದ ಪ್ರತಾಪ್‍ಸಿಂಹ ಅವರು ದತ್ತು ಗ್ರಾಮ ಎಂದು ಘೋಷಿಸಿರುವ ಹಿನ್ನೆಲೆ ಈ ಗ್ರಾಮದ ಕಾರ್ಯಯೋಜನೆಗಳನ್ನು ಕಾರ್ಯಗತಗೊಳಿಸುವಂತೆ ಈ ಭಾಗದ ಗ್ರಾಮಸ್ಥರು ವಾರ್ಡ್‍ಸಭೆಯಲ್ಲಿ ಆಗ್ರಹಿಸಿದರು.
ಕಳೆದ ಒಂದು ವರ್ಷದ ಹಿಂದೆ ಕೂಡಿಗೆ ಗ್ರಾಮ ಪಂಚಾಯ್ತಿಯನ್ನು ದತ್ತು ತೆಗೆದುಕೊಂಡಿದ್ದೇವೆ ಎಂದು ಘೋಷಿಸಿರುವ ಸಂಸದರು ಜಿಲ್ಲಾ ಮಟ್ಟದ ಸಭೆ ಕರೆದು ಅಧಿಕಾರಿಗಳಿಗೆ ದತ್ತು ಪಡೆಯುವ ಕ್ರಿಯಾಯೋಜನೆ ಗಳನ್ನು ಸಿದ್ಧಗೊಳಿಸಲು ಗ್ರಾಮ ಪಂಚಾಯ್ತಿಯ ಆಡಳಿತ ಮಂಡಳಿ ಒತ್ತಾಯ ಹೇರಬೇಕೆಂದು ಆಗ್ರಹಿಸಿದರು.
ಕೂಡಿಗೆಯ ಮೊದಲ ಮತ್ತು ಎರಡನೇ ವಾರ್ಡಿನ ಗ್ರಾಮಸ್ಥರಿಗೆ ರುದ್ರಭೂಮಿಗೆ ಜಾಗ ಗುರುತಿಸಿ, ಕಂದಾಯ ಇಲಾಖೆಯಿಂದ ಸರ್ವೆ ನಡೆಸಿ ಗ್ರಾಮಸ್ಥರಿಗೆ ಅನುಕೂಲ ವಾಗುವಂತೆ ರುದ್ರಭೂಮಿಯನ್ನು ಗುರುತಿಸಬೇಕು ಎಂದು ಗ್ರಾಮಸ್ಥರು ವಾರ್ಡ್ ಸಭೆಯಲ್ಲಿ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು. ಬಸವೇಶ್ವರ ಮತ್ತು ದಂಡಿನಮ್ಮ ದೇವಾಲಯ ಸಮಿತಿ ಮಾಜಿ ಅಧ್ಯಕ್ಷ ಕೆ.ಟಿ. ಶ್ರೀನಿವಾಸ್, ಭೀಮಣ್ಣ, ಯುವಕ ಸಂಘದ ಅಧ್ಯಕ್ಷ ಪ್ರವೀಣ್, ಚಂದ್ರಶೇಖರ್ ಸೇರಿದಂತೆ ಸಮಿತಿಯ ಸದಸ್ಯರು ಗ್ರಾಮದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚೆ ನಡೆಸಿದರು.
ಕೂಡಿಗೆ ಸರ್ಕಲ್‍ನ ಹೈ ಮಾಸ್ಕ್ ದೀಪ ಅಳವಡಿಕೆಯ ಬಗ್ಗೆ, ಸುಚಿತ್ವಕ್ಕೆ ಹೆಚ್ಚು ಆದ್ಯತೆ ನೀಡಬೇಕು ಎಂದು ಆರೋಪಿಸಿದರು.
ಸಭೆಯು ಗ್ರಾಮ ಪಂಚಾಯ್ತಿ ಸದಸ್ಯೆ ಮೋಹಿನಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಗಿರೀಶ್‍ಕುಮಾರ್, ಸದಸ್ಯರಾದ ರಾಮಚಂದ್ರ, ಕೆ.ಟಿ.ಈರಯ್ಯ, ರತ್ನಮ್ಮ ಕಾರ್ಯದರ್ಶಿ ಶಿಲ್ಪ, ಕಂದಾಯ ವಸೂಲಿಗಾರ ರವಿ ಇದ್ದರು.
 
						