ಕೂಡಿಗೆ,ಅ. 5: ಕೂಡಮಂಗಳೂರು ಗ್ರಾ.ಪಂ ವ್ಯಾಪ್ತಿಯ ಕೂಡ್ಲೂರು ಗ್ರಾಮದಲ್ಲಿ ಕಳೆದ 40 ವರ್ಷಗಳಿಂದ ಮುನ್ನೂರು ಏಕರೆ ಪ್ರದೇಶದ ಕೃಷಿ ಭೂಮಿಗೆ ನೀರನ್ನು ಒದಗಿಸುತ್ತಿದ್ದ ಏತ ನೀರಾವರಿ ಘಟಕವನ್ನು ದುರಸ್ತಿ ಮಾಡಲು ಈಗಾಗಲೇ ಸಣ್ಣ ನೀರಾವರಿ ಇಲಾಖೆಯ ಮುಖೇನ 50 ಲಕ್ಷ ರೂಗಳ ಯೋಜನೆಗೆ ಚಾಲನೆ ದೊರೆಕಿತ್ತು ಕಾಮಗಾರಿಯು ಶೇ.75 ಭಾಗದಷ್ಟು ಪೂರ್ಣಗೊಂಡಿತ್ತು, ಇನ್ನುಳಿದ ಭಾಗದ ಕಾಮಗಾರಿಯನ್ನು ಗುತ್ತಿಗೆದಾರ ನಿರ್ವಹಿಸದೇ ತಟಸ್ಥ ನಿಲುವು ತಾಳಿರುವದರಿಂದ ಈ ಸಾಲಿನ ಬೇಸಾಯಕ್ಕೆ ನೀರನ್ನು ನೀಡದಿರುವದರ ವಿರುದ್ಧ ಈ ಭಾಗದ ರೈತರು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಿದ್ದರು. ಇದರನ್ವಯ ಕಾಮಗಾರಿ ಸ್ಥಗಿತಗೊಂಡಿತ್ತು. ಸಣ್ಣ ನೀರಾವರಿ ಇಲಾಖೆಯ ಮೈಸೂರು ವೃತ್ತದ ಕಾರ್ಯಪಾಲಕ ಅಭಿಯಂತ ಮಂಜುನಾಥ್ ಹಾಗೂ ತಂಡದವರು ಕಾಮಗಾರಿ ನಡೆದಿರುವ ಸ್ಥಳ ಪರಿಶೀಲನೆ ನಡೆಸುವದರ ಜೊತೆಗೆ ರೈತರಿಗೆ ಆಗಿರುವ ತೊಂದರೆ ಮತ್ತು ರೈತರಿಗೆ ನೀರೊದಗಿಸಲು ಕೈಗೊಳ್ಳ ಬೇಕಾದ ಯೋಜನೆಗಳ ಬಗ್ಗೆ ರೈತ ರೊಂದಿಗೆ ಚರ್ಚೆ ನಡೆಸಿದ ನಂತರ ಸ್ಥಗಿತಗೊಂಡಿದ್ದ ಐವತ್ತು ಲಕ್ಷ ರೂ ವೆಚ್ಚದ ಕಾಮಗಾರಿ ಪುನರಾರಂಭ ಗೊಂಡಿದೆ.
ರೈತರ ಪ್ರಮುಖ ಬೇಡಿಕೆಯಾದ ಏತ ನೀರಾವರಿಯ ಕೇಂದ್ರದಲ್ಲಿ ನದಿಗೆ ನೂತನ ಮಾದರಿಯ ವ್ಯವಸ್ಥೆಯನ್ನು ಮಾಡುವದರ ಮೂಲಕ ರೈತರಿಗೆ ಸಮರ್ಪಕವಾಗಿ ನೀರೊದಗಿಸಲು ಅಧಿಕಾರಿಗಳು ಕ್ರಮಕೈಗೊಳ್ಳಬೇಕೆಂದು ಕೂಡ್ಲೂರು ನೀರು ಬಳಕೆದಾರರ ಸಂಘ ಒತ್ತಾಯಿಸಿದೆ.
ಸಣ್ಣ ನೀರಾವರಿ ಇಲಾಖೆಯ ಮುಖೇನ ಹೆಚ್ಚು ಕಾಮಗಾರಿ ನಿರ್ವಹಿಸಲು ಪತ್ರ ವ್ಯವಹಾರಗಳನ್ನು ನೀರು ಬಳಕೆದಾರ ಸಂಘದ ಮೂಲಕ ನಡೆಸಲಾಗುತ್ತಿದೆ. ಗುತ್ತಿಗೆದಾರ ಮಂಡ್ಯದ ಅರುಣ್ ಕುಮಾರ್ ಟೆಂಡರ್ ಪಡೆದಿದ್ದು, ಇದೀಗ ಸ್ಥಗಿತಗೊಂಡಿದ್ದ ಕಾಮಗಾರಿ ಯನ್ನು ಮುಂದಿನ ಹದಿನೈದು ದಿನಗಳೊಳಗೆ ಪೂರ್ಣಗೊಳಿಸಿ ನೀರೊದಗಿಸುವ ಉದ್ದೇಶದಿಂದ ಕಾಮಗಾರಿ ಪುನರಾರಂಭಗೊಂಡು ಚುರುಕಿನಿಂದ ಸಾಗುತ್ತಿದೆ.
 
						