ಸುಂಟಿಕೊಪ್ಪ, ಅ. 5: ಇತ್ತೀಚೆಗೆ ಕೊಡಗಿನಲ್ಲಿ ಅತಿವೃಷ್ಟಿಯಿಂದ ಭೂಕುಸಿತ ಜಲಪ್ರಳಯಕ್ಕೆ ಒಳಗಾಗಿ ಮನೆ ಕಳಕೊಂಡ ನಿರಾಶ್ರಿತರಾದವರು ಮನೆ ಕಟ್ಟಿಕೊಳ್ಳಲು 1 ಎಕ್ರೆ ಜಾಗವನ್ನು ದಾನ ನೀಡಿದ ಗುಡ್ಡೆಹೊಸುರು ಜಿ.ಪಂ. ಸದಸ್ಯ ಪಿ.ಎಂ. ಲತೀಫ್ ಅವರಿಗೆ ವಿವಿಧ ಸಂಘ-ಸಂಸ್ಥೆಗಳಿಂದ ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ಸುಂಟಿಕೊಪ್ಪ ಕ್ಷೇತ್ರದ ಜಿ.ಪಂ. ಸದಸ್ಯೆ ಕೆ.ಪಿ. ಚಂದ್ರಕಲಾ ಇದೊಂದು ವಿಶೇಷ ಕಾರ್ಯಕ್ರಮ. ಎಲ್ಲರಿಗೂ ದಾನ ಮಾಡುವ ಮನಸ್ಸು ಇರುವದಿಲ್ಲ; ಕೊಡಗಿನಲ್ಲಿ ಅತಿವೃಷ್ಟಿಯಿಂದ ನಿರಾಶ್ರಿತರಾದವರಿಗೆ ಹೊರಜಿಲ್ಲೆಯಿಂದಲ್ಲೂ ಬಹಳಷ್ಟು ನೆರವು ಹರಿದು ಬಂತು. ಕೊಡಗಿನ ನಿರಾಶ್ರಿತರಿಗೆ ಮನಪೂರ್ವಕವಾಗಿ 1 ಎಕರೆ ಜಾಗ ದಾನ ಮಾಡಿದ ಲತೀಫ್ ಅವರ ಉದಾರತೆಯನ್ನು ಸ್ಮರಿಸಿಕೊಂಡರು.
ಮಾಜಿ ಜಿ.ಪಂ. ಸದಸ್ಯ ವಿ.ಪಿ. ಶಶಿಧರ್ ಅವರು ಇತರಿಗಾಗಿ ಬದುಕುವವರು ಸತ್ತ ನಂತರವೂ ಜನ ಮಾನಸದಲ್ಲಿ ಉಳಿದು ಜೀವಂತ ವಾಗಿರುತ್ತಾರೆ. ಅಂತವರ ಸಾಲಿನಲ್ಲಿ ಲತೀಫ್ ನಿಲ್ಲುತ್ತಾರೆ. ಈ ಸಮಾಜದಲ್ಲಿ ಉಳ್ಳವರು ಇನ್ನಷ್ಟು ಸಂಪಾದಿಸಲು ಪ್ರಯತ್ನಿಸುತ್ತಾರೆ. ಲತೀಫ್ ಆಗರ್ಭ ಶ್ರೀಮಂತರಲ್ಲ ದಿದ್ದರೂ ಜಾಗವನ್ನು ನಿರಾಶ್ರಿತರಿಗೆ ದಾನ ಮಾಡಿದ್ದು ಸ್ತುತ್ತ್ಯಾರ್ಹವಾದುದು ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪಿ.ಎಂ. ಲತೀಫ್ 1 ಎಕರೆ ಜಾಗ ನಿರಾಶ್ರಿತರಿಗೆ ಮನೆ ಕಟ್ಟಿಕೊಳ್ಳಲು ದಾನ ಮಾಡಿದಾಗ ಕೈಲಾಗದವರು ಮೈ ಪರಚಿಕೊಂಡತೆ ಏನೇನೋ ಮಾತನಾಡಿದರು. ಆ ಜಾಗದಲ್ಲಿ ಮುಸಲ್ಮಾನರಿಗೆ ಮಾತ್ರ ಮನೆ ಕಟ್ಟಿಕೊಡುತ್ತಾರೆ ಎಂದರು. ಆದರೆ ನಿರಾಶ್ರಿತರಲ್ಲಿ ಅತ್ಯಂತ ಕಷ್ಟದಲ್ಲಿರು ವರನ್ನು ಗುರುತಿಸಿ ಜಾತಿ ಮತ ಬೇಧವಿಲ್ಲದೆ ಸಮಿತಿಯಿಂದ ಮನೆ ನಿರ್ಮಿಸಲಾಗುವದು ಎಂದು ವಿವರಿಸಿದರು.
ಅಧ್ಯಕ್ಷತೆಯನ್ನು ಹಾಸನ ಗ್ರಾಹಕರ ವ್ಯಾಜ್ಯ ಪರಿಹಾರ ವೇದಿಕೆ ಅಧ್ಯಕ್ಷ ಎ.ಲೋಕೇಶ್ ಕುಮಾರ್ ವಹಿಸಿ ಮಾತನಾಡಿದರು. ಕುಮಾರ್, ಜಿ.ಪಂ. ಸದಸ್ಯರುಗಳಾದ ಕೆ.ಪಿ. ಚಂದ್ರಕಲಾ, ಸುನೀತಾ, ಮೂಡಾ ಮಾಜಿ ಅಧ್ಯಕ್ಷೆ ಸುರಯ್ಯ ಅಬ್ರಾರ್, ವಿ.ಪಿ. ಶಶಿಧರ್, ಪೆಮ್ಮಯ್ಯ ಇನ್ನಿತರರು ಶಾಲು ಮೈಸೂರು ಪೇಟಾ ತೊಡಿಸಿ ಫಲ ತಾಂಬೂಲ ನೀಡಿ ಗೌರವಿಸಿದರು. ವೇದಿಕೆಯಲ್ಲಿ ಸೋಮವಾರಪೇಟೆ ತಾಲೂಕು ಡಿವೈಎಸ್‍ಪಿ ಪಿ.ಕೆ. ಮುರುಳೀಧರ್, ಮೂಡಾ ಮಾಜಿ ಅಧ್ಯಕ್ಷೆ ಸುರಯ್ಯ ಅಬ್ರಾರ್, ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಮಾಳೆಯಂಡ ಕೆ. ಪೆಮ್ಮಯ್ಯ, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ರಜಾಕ್, ಎಂ. ಶಾಹೀದ್, ಶೋಭಾ ರವಿ, ರಹೆನಾ ಸುಲ್ತಾನ್, ಶಿವಮ್ಮ ಮಹೇಶ್, ಕೆ.ಬಿ. ಗಂಗಮ್ಮ ಭೀಮಯ್ಯ, ಕೆ.ಎನ್. ರತ್ನ, ತಲೆಹೊರೆ ಕನ್ನಡಾಭಿಮಾನಿ ಸಂಘದ ಅಧ್ಯಕ್ಷ ಹಾಗೂ ಸನ್ಮಾನ ಸಮಿತಿಯ ಸಂಚಾಲಕ ಎಂ.ಎಸ್. ರವಿ, ಸುಂಟಿಕೊಪ್ಪ ಜೆಸಿಐ ಸಂಸ್ಥೆಯ ಅಧ್ಯಕ್ಷ ಅರುಣಾ, ಟೈಲರ್ ಸಂಘದ ಅಧ್ಯಕ್ಷ ಕೆ.ಎಚ್. ಶಿವಣ್ಣ, ಬಿ.ಎಸ್. ಸದಾಶಿವ ರೈ, ಸುನಿತಾ ಮತ್ತಿತರರು ಇದ್ದರು.
ಅಂಗನವಾಡಿ ಕಾರ್ಯಕರ್ತೆ ಸೆಲಿನಾ ಜೆಫ್ರಿ ಪ್ರಾರ್ಥಿಸಿ, ರಜಾಕ್ ಸ್ವಾಗತಿಸಿ, ಸದಾಶಿವರೈ ನಿರ್ವಹಿಸಿ, ಪೆಮ್ಮಯ್ಯ ವಂದಿಸಿದರು.
ನಂಜರಾಯಪಟ್ಟಣದಲ್ಲಿ ಸನ್ಮಾನ
ಜಿಲ್ಲೆಯಲ್ಲಿ ಪ್ರಕೃತಿ ವಿಕೋಪ ಉಂಟಾದ ಸಂದರ್ಭ ಸಂಕಷ್ಟದಲ್ಲಿ ಸಿಲುಕಿದ್ದ ಜನರ ಪ್ರಾಣ ರಕ್ಷಣೆ ಮಾಡುವದರ ಜೊತೆಗೆ ಸಂತ್ರಸ್ತರಿಗೆ ಮನೆ ನಿರ್ಮಿಸಿಕೊಡಲು ಒಂದು ಎಕರೆ ಜಾಗವನ್ನು ದಾನವಾಗಿ ನೀಡಿದ ಜಿ.ಪಂ. ಸದಸ್ಯ ಪಿ.ಎಂ. ಲತೀಫ್ ಅವರನ್ನು ನಂಜರಾಯಪಟ್ಟಣ ಗ್ರಾ.ಪಂ. ಆಡಳಿತ ಮಂಡಳಿ ಹಾಗೂ ಗ್ರಾಮಸ್ಥರು ಸನ್ಮಾನಿಸಿ ಗೌರವಿಸಿದರು. ಹೊಸಪಟ್ಟಣ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮ ವೊಂದರಲ್ಲಿ ಲತೀಫ್ ಅವರಿಗೆ ಗ್ರಾ.ಪಂ.ಅಧ್ಯಕ್ಷೆ ಜೈನಾಭ, ತಾ.ಪಂ. ಸದಸ್ಯ ವಿಜು ಚಂಗಪ್ಪ ಹಾಗೂ ಸದಸ್ಯರು ಆತ್ಮೀಯವಾಗಿ ಸನ್ಮಾನಿಸಿದರು. ಈ ಸಂದರ್ಭ ಮಾತನಾಡಿದ ಗ್ರಾಮದ ಹಿರಿಯ ಮುಖಂಡ ಅಸು ಬೋಪಣ್ಣ, ಜಿಲ್ಲೆಯಲ್ಲಿ ಮಹಾಮಳೆ ಜಲಪ್ರಳಯಕ್ಕೆ ಅಪಾರ ಪ್ರಮಾಣದಲ್ಲಿ ಹಾನಿ ಉಂಟಾಯಿತು. ಈ ಸಂದರ್ಭ ಸುಂಟಿಕೊಪ್ಪ ಹಾಗೂ ಮಡಿಕೇರಿ ತಾಲೂಕು ವ್ಯಾಪ್ತಿ ವಿವಿಧಡೆ ಅನೇಕ ಜನರು ಸಂಕಷ್ಟಕ್ಕೆ ಸಿಲುಕಿದ್ದರು. ಇಂತಹ ಸಂದರ್ಭದಲ್ಲಿ ತಮ್ಮ ಪ್ರಾಣವನ್ನು ಲೆಕ್ಕಿಸದೆ ಯುವಕರ ತಂಡವೊಂದನ್ನು ಕಟ್ಟಿಕೊಂಡು ಜನರನ್ನು ರಕ್ಷಣೆ ಮಾಡಿದರು. ಅಲ್ಲದೆ ಮಹಾ ಮಳೆ ಯಿಂದ ಬೀದಿಪಾಲಾದ ಸಂತ್ರಸ್ತರಿಗೆ ಮನೆ ನಿರ್ಮಿಸಿಕೊಡಲು ಕೋಟ್ಯಾಂತರ ಬೆಲೆಬಾಳುವ ಒಂದು ಎಕರೆ ಜಾಗವನ್ನು ಸರ್ಕಾರಕ್ಕೆ ಉದಾರವಾಗಿ ನೀಡಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ ಎಂದು ಶುಭಹಾರೈಸಿದರು.
ಗ್ರಾ.ಪಂ. ಸದಸ್ಯ ಐಯ್ಯಂಡ್ರ ಲೋಕನಾಥ್ ಮಾತನಾಡಿ, ಲತೀಫ್ ಅವರ ಸೇವೆಯನ್ನು ಮೆಚ್ಚಿ ವಿವಿಧ ಸಂಘಸಂಸ್ಥೆಗಳು ಅವರಿಗೆ ಕೊಡಗಿನ ರತ್ನ ಎಂಬ ಬಿರುದು ನೀಡಿರುವದು ಹೆಮ್ಮ ತಂದಿದೆ ಎಂದರು. ಗ್ರಾ.ಪಂ. ಉಪಾಧ್ಯಕ್ಷೆ ಸಿ. ಕುಮಾರಿ, ಸದಸ್ಯರಾದ ಸುಮೇಶ್, ನವೀನ್, ಮಲ್ಲಿಗೆ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಹೆಚ್.ಎಸ್. ರಾಜಶೇಖರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ಎಂ. ಕಲ್ಪಾ, ಕಾರ್ಯದರ್ಶಿ ಮಂಜೂರ್ ಖಾನ್, ಗ್ರಾಮದ ಮುಖಂಡರಾದ ಮುರುಳೀ ಮಾದಯ್ಯ, ಸಿ.ಎಲ್. ವಿಶ್ವ, ಕೆ.ಎಸ್. ರತೀಶ್, ಪ್ರೇಮಾನಂದ, ಮೋಹನ್ ಮತ್ತಿತರರು ಇದ್ದರು.
 
						