ಕೂಡಿಗೆ, ಅ. 5: ಸಮೀಪದ ಮುಳ್ಳುಸೋಗೆ ಗ್ರಾಮ ಪಂಚಾಯತಿ ವಿಶೇಷ ಗ್ರಾಮ ಸಭೆಯು ಗ್ರಾಮ ಪಂಚಾಯತಿ ಅಧ್ಯಕ್ಷೆ ಭವ್ಯ ಅವರ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯಿತಿ ಕಾರ್ಯಾಲಯದ ಹಿಂಭಾಗದ ಮೈದಾನದಲ್ಲಿ ನಡೆಯಿತು.
ಸಭೆಯಲ್ಲಿ ಗೊಂದಿಬಸವನ ಹಳ್ಳಿಯಲ್ಲಿ ರೊಂಡೆಕೆರೆ ಒತ್ತುವರಿ ಯಾಗಿರುವ ಜಾಗವನ್ನು ತೆರವು ಗೊಳಿಸಬೇಕು. ಗೊಂದಿಬಸ ವನಹಳ್ಳಿ ಗ್ರಾಮಕ್ಕೆ ಕುಡಿಯುವ ನೀರು ಮತ್ತು ಶುಚಿತ್ವ ಕಾಪಾಡಬೇಕು ಎಂದು ಗ್ರಾಮಸ್ಥ ಪ್ರಕಾಶ್ ಒತ್ತಾಯಿಸಿದರು.
ಕಳೆದ ಮೂರು ವರ್ಷಗಳಿಂದ ಕಾಮಗಾರಿಯ ಕ್ರಿಯಾಯೋಜನೆಯ ಪಟ್ಟಿಯನ್ನು ತಯಾರಿಸಲಾಗುತ್ತಿದೆ ವಿನಃ ಯಾವದೇ ಕಾಮಗಾರಿಗಳನ್ನು ಇನ್ನೂ ಕೈಗೆತ್ತಿಕೊಳ್ಳಲಾಗಿಲ್ಲ ಎಂದು ಮಾಜಿ ಸದಸ್ಯ ರಾಜೇಶ್ ಆರೋಪಿಸಿ ದರು. ಮುಳ್ಳುಸೋಗೆ ಮತ್ತು ಗುಮ್ಮನ ಕೊಲ್ಲಿ ವ್ಯಾಪ್ತಿಯಲ್ಲಿ ಒಳಚರಂಡಿ ವ್ಯವಸ್ಥೆಯೂ ಅವ್ಯವಸ್ಥೆಯಿಂದ ಕೂಡಿದ್ದು, ಇದನ್ನು ಸರಿಪಡಿಸುವಂತೆ ಗ್ರಾಮಸ್ಥರು ಆಗ್ರಹಿಸಿದರು.
ಸಭೆಯಲ್ಲಿದ್ದ ಗ್ರಾಮಸ್ಥರು ಗ್ರಾಮದ ಹಾಗೂ ವಾರ್ಡ್ಗಳನ್ನು ಅಭಿವೃದ್ಧಿ ಪಡಿಸುವ ಹಾಗೂ ಸಮಸ್ಯೆಗಳ ಬಗ್ಗೆ ಸಭೆಯ ಗಮನಕ್ಕೆ ತಂದರು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ
ರಾಜಶೇಖರ್ ಅವರು ಕಾಮಗಾರಿಗಳ ಕ್ರಿಯಾ ಯೋಜನೆಗಳ ಬಗ್ಗೆ ಮುಂದಿನ ದಿನಗಳಲ್ಲಿ ಆಯಾವಾರ್ಡಿನ ಸದಸ್ಯರ ಸಲಹೆಯ ಮೇರೆಗೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳ ಲಾಗುವದು ಎಂದರು.
ಮುಖ್ಯ ಅತಿಥಿ ಜಿ.ಪಂ.ಸದಸ್ಯೆ ಮಂಜುಳಾ ಮಾತನಾಡಿ, ಈಗಾಗಲೇ ವಿವಿಧ ಯೋಜನೆಗಳ ಬಗ್ಗೆ ಕಾಮಗಾರಿಯ ಕ್ರಿಯಾಯೋಜನೆಗಳು ತಯಾರಾಗಿದ್ದು, ಹಂತ ಹಂತವಾಗಿ ಕಾಮಗಾರಿಗಳನ್ನು ಪೂರ್ಣ ಗೊಳಿಸಲಾಗುವದು ಎಂದರು. ಗ್ರಾಮ ಪಂಚಾಯತಿ ಉಪಾಧ್ಯಕ್ಷ ತಾರಾನಾಥ ಹಾಗೂ ಸದಸ್ಯರು ಇದ್ದರು.