ಸುಂಟಿಕೊಪ್ಪ, ಅ. 5: ಕಳೆದ 36 ವರ್ಷಗಳಿಂದ ಶಿಥಿಲಾವಸ್ಥೆಗೆ ತಲುಪಿ ಅನುಪಯುಕ್ತಗೊಂಡು ಸಾರ್ವಜನಿಕರ ಪಾಲಿಗೆ ತಲೆನೋವು (ಹೆಡೇಕ್) ಆಗಿದ್ದ ನಾಡ ಕಚೇರಿ ಹಿಂಭಾಗದ ಓವರ್ ಹೆಡ್ ಟ್ಯಾಂಕನ್ನು ಇಂದು ಬೆಳಿಗ್ಗೆ ಪಂಚಾಯಿತಿ ವತಿಯಿಂದ ನೆಲಸಮಗೊಳಿಸಲಾಯಿತು. ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ಮಿಸಿದ್ದ ಈ ಟ್ಯಾಂಕ್ ಅನ್ನು ಮಾಜಿ ಮುಖ್ಯಮಂತ್ರಿ ದಿ. ಆರ್. ಗುಂಡೂರಾವ್ ಅವರು ತಾ. 10.10.1982 ರಂದು ಉದ್ಘಾಟಿಸಿದ್ದರು.
ಆದರೆ ವರ್ಷ ಕಳೆದಂತೆ ಟ್ಯಾಂಕ್ ಸೋರಲಾರಂಭಿಸಿತ್ತು. ಹಲವು ಸಲ ದುರಸ್ತಿಪಡಿಸಿದ್ದರೂ ಸೋರುವಿಕೆ ನಿಂತಿರಲಿಲ್ಲ. ಹೀಗಾಗಿ ಟ್ಯಾಂಕಿಗೆ ನೀರು ಹರಿಸುವದನ್ನು ನಿಲ್ಲಿಸಲಾಗಿತ್ತು. ಕೊನೆಯದಾಗಿ ದಶಕಗಳಿಂದ ನಿರುಪಯುಕ್ತಗೊಂಡು ಶಿಥಿಲಾವಸ್ಥೆಯಲ್ಲಿ ಬೀಳುವ ಹಂತ ತಲಪಿ ಜನರ ಜೀವಕ್ಕೆ ಮತ್ತು ಸುತ್ತಮುತ್ತಲಿನ ಆಸ್ತಿಪಾಸ್ತಿಗಳಿಗೆ ಕಂಟಕಪ್ರಾಯವಾಗಿ ಅನಾಹುತಕ್ಕೆ ಆಹ್ವಾನ ನೀಡುತ್ತಿದ್ದುದರಿಂದ ಟ್ಯಾಂಕನ್ನು ನೆಲಸಮಗೊಳಿಸಲು ಪಂಚಾಯತಿ ಆಡಳಿತ ಮಂಡಳಿ ನಿರ್ಧರಿಸಿತ್ತು. ಅದರಂತೆ ಕಾಮಗಾರಿಯ ಗುತ್ತಿಗೆ ಪಡೆದಿದ್ದ ಕೆ.ಎಂ. ಇಬ್ರಾಹಿಂ ಇಂದು ಬೆಳಿಗ್ಗೆ ಜೇಸಿಬಿ ಮತ್ತು ಕ್ರೇನ್ ಸಹಾಯದಿಂದ ಸ್ಥಳದಲ್ಲಿಯೇ ಟ್ಯಾಂಕ್ ಕುಸಿದು ಬೀಳುವಂತೆ ಮಾಡಿದರು. ನಿನ್ನೆ ಕೈಗೊಳ್ಳಲಾಗಿದ್ದ ಕಾರ್ಯಾಚರಣೆಯನ್ನು ಕತ್ತಲು ಆವರಿಸಿದ್ದರಿಂದ ಇಂದಿಗೆ ಮುಂದೂಡಲ್ಪಟ್ಟಿತ್ತು. ವಿಚಿತ್ರವೆಂದರೆ ಹಲವು ವರ್ಷಗಳ ಕಾಲ ನೀರನ್ನೇ ಕಾಣದಿದ್ದ ಈ ಟ್ಯಾಂಕ್‍ನ ಪೈಪ್‍ವೊಂದರಲ್ಲಿ ನಿನ್ನೆ ಧಾರಾಕಾರವಾಗಿ ನೀರು ಚಿಮ್ಮುತ್ತಿತ್ತು. !!!
-ಕ್ಯೂಟ್ ಕೂರ್ಗ್ ನ್ಯೂಸ್