ಸೋಮವಾರಪೇಟೆ,ಅ.5: ಸೋಮವಾರಪೇಟೆ ಪಟ್ಟಣ ಪಂಚಾಯಿತಿಯಲ್ಲಿ ಅಧಿಪತ್ಯ ಸ್ಥಾಪಿಸಲು ಈ ಬಾರಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಮೈತ್ರಿ ಮಾಡಿಕೊಂಡು ಚುನಾವಣಾ ಕಣಕ್ಕೆ ಇಳಿದಿದ್ದು, ಮೈತ್ರಿ ಕೂಟಕ್ಕೆ ಸೆಡ್ಡುಹೊಡೆದು ಅಧಿಕಾರವನ್ನು ಮತ್ತೆ ಸ್ಥಾಪಿಸಲು ಬಿಜೆಪಿ ತಂತ್ರ ಹೆಣೆಯುತ್ತಿದೆ.
11 ವಾರ್ಡ್‍ಗಳಿರುವ ಸೋಮವಾರಪೇಟೆ ಪಟ್ಟಣ ಪಂಚಾಯಿತಿಯಲ್ಲಿ ಕಾಂಗ್ರೆಸ್‍ನಿಂದ 6 ಮತ್ತು ಜೆಡಿಎಸ್‍ನಿಂದ 5 ಮಂದಿ ಅಭ್ಯರ್ಥಿಗಳು ಸ್ಪರ್ಧಿಸಲಿದ್ದು, ಅಭ್ಯರ್ಥಿಗಳ ಆಯ್ಕೆಯೂ ಅಂತಿಮಗೊಂಡಿದೆ. ಪ್ರವಾಹದಿಂದಾಗಿ ಮುಂದೂಡಲ್ಪಟ್ಟಿದ್ದ ಪ.ಪಂ. ಚುನಾವಣೆ ಇದೇ ತಾ. 28ಕ್ಕೆ ನಡೆಯಲಿದ್ದು, 31ಕ್ಕೆ ಮತ ಎಣಿಕೆ ಕಾರ್ಯ ನಡೆಯಲಿದೆ. ನಾಮಪತ್ರ ಸಲ್ಲಿಕೆಗೆ ತಾ. 16ರಂದು ಅವಕಾಶವಿದ್ದು, 17ಕ್ಕೆ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂಪಡೆಯಲು ತಾ. 20ರಂದು ದಿನ ನಿಗದಿಪಡಿಸಲಾಗಿದೆ.
ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕೆಂಬ ಉದ್ದೇಶದಿಂದ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಮೈತ್ರಿ ಮಾಡಿಕೊಳ್ಳುವ ಮೂಲಕ ಚುನಾವಣಾ ಅಖಾಡಕ್ಕೆ ಇಳಿದಿದ್ದು, ಅಧಿಕಾರ ಉಳಿಸಿಕೊಳ್ಳಲು ಬಿಜೆಪಿಯೂ ತಂತ್ರ ಹೆಣೆಯುತ್ತಿದೆ. ಅಳೆದೂ ತೂಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದ್ದು, ಒಂದೆರಡು ವಾರ್ಡ್‍ಗಳಲ್ಲಿ ಬಂಡಾಯದ ಬಿಸಿಯನ್ನೂ ಬಿಜೆಪಿ ಎದುರಿಸಬೇಕಿದೆ.
ಬಿಜೆಪಿಯಿಂದ 10 ವಾರ್ಡ್‍ಗಳಿಗೆ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಂಡಿದ್ದು, 1ನೇ ವಾರ್ಡ್‍ನಲ್ಲಿ ಅಭ್ಯರ್ಥಿಯ ಆಯ್ಕೆಯ ಗೊಂದಲ ಮುಂದುವರೆದಿದೆ.
ವಾರ್ಡ್ 1 ಬಸವೇಶ್ವರ ರಸ್ತೆಯಲ್ಲಿ ಕೆ.ಜಿ. ಸುರೇಶ್ ಅವರು ಈಗಾಗಲೇ ಓಡಾಟ ಆರಂಭಿಸಿದ್ದು, ಇದೇ ವಾರ್ಡ್‍ನಿಂದ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ ಪತ್ರಕರ್ತ ಎಸ್. ಮಹೇಶ್ ಅವರು ಟಿಕೇಟ್ ಬಯಸಿದ್ದಾರೆ. ಇವರೀರ್ವರ ನಡುವೆ ಅಶೋಕ್‍ಕುಮಾರ್ ಅವರೂ ಸಹ ಆಕಾಂಕ್ಷಿಯಾಗಿದ್ದಾರೆ ಎನ್ನಲಾಗಿದೆ. ಮೈತ್ರಿಕೂಟದಿಂದ ಕಾಂಗ್ರೆಸ್‍ನ ಉದಯ ಶಂಕರ್ ಇಲ್ಲಿ ಸ್ಪರ್ಧಿಸಲಿದ್ದಾರೆ.
ವಾರ್ಡ್ 2 ಬಾಣಾವರ ರಸ್ತೆಯಿಂದ ಬಿಜೆಪಿಯ ಪಿ.ಕೆ. ಚಂದ್ರು ಸ್ಪರ್ಧಿಸಲಿದ್ದು, ಮೈತ್ರಿಕೂಟದಿಂದ ಕಾಂಗ್ರೆಸ್‍ನ ಮಂಜುನಾಥ್, ವಾರ್ಡ್ 3 ವೆಂಕಟೇಶ್ವರ ಬ್ಲಾಕ್‍ನಿಂದ ಬಿಜೆಪಿಯ ನಳಿನಿ ಗಣೇಶ್ ಇದ್ದರೆ, ಮೈತ್ರಿಕೂಟದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಪುಷ್ಪ ಸತೀಶ್ ಸ್ಪರ್ಧಿಸಲಿದ್ದಾರೆ. ವಾರ್ಡ್ 4 ರೇಂಜರ್ ಬ್ಲಾಕ್ 1ನೇ ಹಂತದಿಂದ ಬಿಜೆಪಿಯ ಎನ್.ಎಸ್. ಮೂರ್ತಿ ಅವರಿಗೆ ಟಿಕೇಟ್ ನೀಡಿದ್ದರೆ, ಮೈತ್ರಿಕೂಟದಿಂದ ಕಾಂಗ್ರೆಸ್‍ನ ಸಂಜೀವ, ವಾರ್ಡ್ 5 ದೇವಸ್ಥಾನ ರಸ್ತೆಯಿಂದ ಬಿಜೆಪಿಯ ಬಿ.ಎಂ. ಸುರೇಶ್ ಅವರಿಗೆ ಟಿಕೇಟ್ ಲಭಿಸಿದ್ದು, ಕಾಂಗ್ರೆಸ್‍ನಿಂದ ಬಿ.ಸಿ. ವೆಂಕಟೇಶ್ ಸ್ಪರ್ಧೆಯಲ್ಲಿದ್ದಾರೆ.
ವಾರ್ಡ್ 6 ವಿಶ್ವೇಶ್ವರಯ್ಯ ಬ್ಲಾಕ್‍ನಿಂದ ಬಿಜೆಪಿಯ ವಿಜಯಲಕ್ಷ್ಮೀ ಸುರೇಶ್ ಅವರಿಗೆ ಟಿಕೇಟ್ ನೀಡಲಾಗಿದ್ದು, ಮೈತ್ರಿಕೂಟದಿಂದ ಕಾಂಗ್ರೆಸ್ ಅಭ್ಯರ್ಥಿ ಶೀಲಾ ಡಿಸೋಜ ಎದುರಾಳಿಯಾಗಿದ್ದಾರೆ. ವಾರ್ಡ್ 7 ರೇಂಜರ್‍ಬ್ಲಾಕ್ 2ನೇ ಹಂತದಿಂದ ಮಾಜೀ ಸದಸ್ಯೆ ದಾಕ್ಷಾಯಿಣಿ ಅವರು ಬಿಜೆಪಿಯ ಅಭ್ಯರ್ಥಿಯಾಗಿದ್ದರೆ, ಮೈತ್ರಿಕೂಟದ ಅಭ್ಯರ್ಥಿಯಾಗಿ ಜೆಡಿಎಸ್‍ನ ಜೀವನ್ ಇದ್ದಾರೆ.
ವಾರ್ಡ್ 8ರ ಜನತಾ ಕಾಲೋನಿಯಿಂದ ಬಿಜೆಪಿ ಅಭ್ಯರ್ಥಿಯಾಗಿ ಪ್ರಮೋದ್ ಅವರಿಗೆ ಟಿಕೇಟ್ ಲಭಿಸಿದ್ದು, ಮೈತ್ರಿಕೂಟದ ಜೆಡಿಎಸ್ ಅಭ್ಯರ್ಥಿಗಳಾಗಿ ವೆಂಕಟೇಶ್, ಸುಧಾ ಅವರುಗಳೊಂದಿಗೆ ಮತ್ತೋರ್ವ ಆಕಾಂಕ್ಷಿ ಇರುವ ಬಗ್ಗೆ ಜೆಡಿಎಸ್ ನಗರಾಧ್ಯಕ್ಷ ಜಯಾನಂದ ಮಾಹಿತಿಯಿತ್ತಿದ್ದಾರೆ. ಈ ವಾರ್ಡ್‍ನಲ್ಲಿ ಬಿಜೆಪಿಗೆ ಬಂಡಾಯ ಎದುರಾಗಲಿದ್ದು, ಶುಭಾಕರ್ ಅವರೂ ಸಹ ಸ್ಪರ್ಧೆಯಲ್ಲಿದ್ದಾರೆ. ವಾರ್ಡ್ 9ರ ಸಿದ್ದಲಿಂಗೇಶ್ವರ ಬ್ಲಾಕ್‍ನಿಂದ ಅನಿತಾ ಮಂಜುನಾಥ್ ಅವರು ಬಿಜೆಪಿಯಿಂದ, ಮೈತ್ರಿಕೂಟದ ಅಭ್ಯರ್ಥಿಯಾಗಿ ಜೆಡಿಎಸ್‍ನ ರಾಣಿ ಪ್ರಕಾಶ್, ವಾರ್ಡ್ 10 ಮಹದೇಶ್ವರ ಬಡಾವಣೆಯಿಂದ ಬಿಜೆಪಿಯ ದಿವ್ಯ ಮೋಹನ್ ಅವರು ಅಭ್ಯರ್ಥಿಯಾಗಿದ್ದು, ಜೆಡಿಎಸ್‍ನಿಂದ ಜಯಂತಿ ಶಿವಕುಮಾರ್ ಸ್ಪರ್ಧೆಯಲ್ಲಿದ್ದಾರೆ.
ವಾರ್ಡ್ 11 ಸಿ.ಕೆ. ಸುಬ್ಬಯ್ಯ ರಸ್ತೆಯಿಂದ ಬಿ.ಆರ್. ಮಹೇಶ್ ಅವರು ಬಿಜೆಪಿ ಅಭ್ಯರ್ಥಿಯಾಗಲಿದ್ದು, ಮೈತ್ರಿಕೂಟದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆ.ಎ. ಆದಂ ಸ್ಪರ್ಧೆಯಲ್ಲಿದ್ದಾರೆ.
ಟಿಕೇಟ್ ತಪ್ಪಿದ ಹಾಲಿ ಸದಸ್ಯರು: ಕಳೆದ ಸಾಲಿನ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಐವರು ಸದಸ್ಯರಿಗೆ ಈ ಸಾಲಿನ ಚುನಾವಣೆಯಲ್ಲಿ ಟಿಕೇಟ್ ತಪ್ಪಿದೆ. ಹಿರಿಯ ಸದಸ್ಯೆ, ಮಾಜೀ ಅಧ್ಯಕ್ಷೆ ಲೀಲಾ ನಿರ್ವಾಣಿ, ಪ್ರಥಮ ಬಾರಿಗೆ ಆಯ್ಕೆಯಾಗಿದ್ದ ಸುಶೀಲ, ಸುಷ್ಮಾ ಮತ್ತು ಈಶ್ವರ್ ಅವರುಗಳಿಗೆ ಈ ಬಾರಿ ಬಿಜೆಪಿಯಿಂದ ಟಿಕೇಟ್ ಲಭಿಸಿಲ್ಲ. ಇದರೊಂದಿಗೆ ಕಾಂಗ್ರೆಸ್‍ನ ಮೀನಾಕುಮಾರಿ ಅವರೂ ಸಹ ಟಿಕೇಟ್‍ನಿಂದ ವಂಚಿತರಾಗಿದ್ದಾರೆ. ಉಳಿದಂತೆ ಕಳೆದ ಸಾಲಿನಲ್ಲಿ ಅಧ್ಯಕ್ಷೆಯಾಗಿದ್ದ ವಿಜಯಲಕ್ಷ್ಮೀ ಸುರೇಶ್, ಸದಸ್ಯರಾದ ಶೀಲಾ ಡಿಸೋಜ, ವೆಂಕಟೇಶ್, ಬಿ.ಎಂ. ಸುರೇಶ್, ಕೆ.ಎ. ಆದಂ ಅವರುಗಳು ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಉಪಾಧ್ಯಕ್ಷರಾಗಿದ್ದ ರಮೇಶ್ ಶೆಟ್ಟಿ ಅವರು ಅಕಾಲಿಕ ಮರಣ ಹೊಂದಿದ್ದಾರೆ. -ವಿಜಯ್ ಹಾನಗಲ್