ಮಡಿಕೇರಿ,ಅ.4 : ವಿದೇಶಿ ಹಣದ ವ್ಯಾಮೋಹಕ್ಕೆ ಬಿದ್ದಿರುವ ಕೊಡಗಿನ ಕೆಲವರು ಪರಿಸರವಾದಿಗಳ ಸೋಗಿನಲ್ಲಿ ಸುಳ್ಳು ಮಾಹಿತಿಗಳನ್ನು ನೀಡುವ ಮೂಲಕ ಕೃಷಿಕರನ್ನು ಒಕ್ಕಲೆಬ್ಬಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿರುವ ಭಾಗಮಂಡಲ ಹಾಗೂ ಅಯ್ಯಂಗೇರಿ ಗ್ರಾಮಸ್ಥರು, ಪರಿಸರವಾದಿಗಳನ್ನು ಜಿಲ್ಲೆಯಿಂದ ಗಡಿಪಾರು ಮಾಡುವಂತೆ ಒತ್ತಾಯಿಸಿ ಜನಾಂದೋಲನ ರೂಪಿಸುವದಾಗಿ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗ್ರಾಮದ ಪ್ರಮುಖ ಕುದುಕುಳಿ ಜೆ. ಭರತ್ ಅವರು, ತಮ್ಮನ್ನು ತಾವೇ ಪರಿಸರವಾದಿಗಳೆಂದು ಪ್ರತಿಬಿಂಬಿಸಿ ಕೊಳ್ಳುವ ಮೂಲಕ ಕೆಲವರು ಕೊಡಗಿನ ಬೆಳೆಗಾರರ ಆಸ್ತಿಗಳೆಲ್ಲಾ ಅರಣ್ಯ ಎಂದು ಪ್ರತಿಪಾದಿಸುತ್ತಿದ್ದು, ಇದನ್ನು ತೀವ್ರವಾಗಿ ವಿರೋಧಿಸು ವದಾಗಿ ತಿಳಿಸಿದರು. ಕೊಡಗಿನ ಕಂದಾಯ ಇಲಾಖೆ ಅಧಿಕಾರಿಗಳನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡು ಬಾಣೆ ಜಮೀನುಗಳ ಕಡತಗಳನ್ನು ವಿಲೇವಾರಿ ಮಾಡದಂತೆ ತಡೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಕೊಡಗಿನಲ್ಲಿ ರಾಜರ ಕಾಲದಲ್ಲಿ ಬೆಳೆಗಾರರಿಗೆ ವಂಶಪಾರಂಪರ್ಯ ವಾಗಿ ನೀಡಿರುವ ಜಮ್ಮಾಬಾಣೆ ಜಾಗಗಳ ನಿಬಂಧನೆಗಳನ್ನು ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಮತ್ತು ಕೊಡಗನ್ನು ಕರ್ನಾಟಕದೊಂದಿಗೆ ವಿಲೀನ ಮಾಡಿದ ಬಳಿಕವೂ ಕರ್ನಾಟಕ ಭೂ ಕಂದಾಯ ಕಾಯ್ದೆಗೆ ಒಳಪಡಿಸದಿರು ವದರಿಂದ ಹಲವಾರು ಸಮಸ್ಯೆಗಳು ಸೃಷ್ಟಿಯಾಗಿವೆ. ಈ ಸಂಬಂಧ ವಕೀಲ ಎ.ಕೆ.ಸುಬ್ಬಯ್ಯ ಅವರು ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ದಾವೆ ಹೂಡಿ ಜಮ್ಮಾ ಜಾಗ ಬೆಳೆಗಾರರ ಆಸ್ತಿ ಎಂಬ ತೀರ್ಪನ್ನು ಪಡೆದಿದ್ದರೂ, ಪರಿಸರವಾದಿಗಳೆಂದು ಹೇಳಿ ಕೊಳ್ಳುತ್ತಿರುವ ಕೆಲವರು ಇಂದಿಗೂ ಜಮ್ಮಾ ಜಾಗ ಸರಕಾರದ ಆಸ್ತಿ ಎಂದು ಹೇಳಿಕೊಳ್ಳುತ್ತಿರುವದು ವಿಪರ್ಯಾಸ ಎಂದು ಟೀಕಿಸಿದರು.
ಜಮ್ಮಾ ಬಾಣೆ ಜಾಗಕ್ಕೆ ಸಂಬಂಧಿಸಿದಂತೆ ರಾಜ್ಯ ವಿಧಾನಸಭೆಯಲ್ಲೂ ಚರ್ಚೆಯಾಗಿ ಕಾನೂನೊಂದನ್ನು ಜಾರಿಗೆ ತಂದು ಅದಕ್ಕೆ ರಾಷ್ಟ್ರಪತಿಗಳ ಅಂಗೀಕಾರ ದೊರೆತು ಗೆಝೆಟ್ ನೋಟಿಫಿಕೇಷನ್ ಆಗಿದ್ದರೂ, ಅದನ್ನು ಇನ್ನೂ ಅಧಿಕಾರಿಗಳು ಜಾರಿಗೆ ತರದೆ ಬೆಳೆಗಾರರಿಗೆ ಹಾಗೂ ಕೃಷಿಕರಿಗೆ ಕಿರುಕುಳ ನೀಡುತ್ತಿರುವದರ ಹಿಂದೆ ಈ ಪರಿಸರವಾದಿಗಳ ಕುತಂತ್ರ ಅಡಗಿದೆ ಎಂದು ಭರತ್ ಆರೋಪಿಸಿದರು.
ಕೊಡಗಿನ ಜನತೆಯ ಸಂಪರ್ಕಕ್ಕೆ ಅಗತ್ಯವಾಗಿರುವ ಕರಿಕೆ, ಕಡಮಕಲ್ ರಸ್ತೆ ನಿರ್ಮಾಣಕ್ಕೂ ಅಡ್ಡಿಪಡಿಸಿರುವ ಪರಿಸರವಾದಿಗಳು ಜಿಲ್ಲೆಯ ಅಭಿವೃದ್ಧಿಗೂ ಅಡ್ಡಿಯಾಗಿದ್ದಾರೆ ಎಂದು ದೂರಿದರು.
ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಹಾನಿಗೊಳಗಾದ ಕೃಷಿಕರಿಗೆ ಅವರ ಅಭಿಪ್ರಾಯದಂತೆಯೇ ಪರಿಹಾರ ಕಾರ್ಯಗಳನ್ನು ನಡೆಸಲು ಸರಕಾರ ಮುಂದಾಗಿದ್ದು, ಇಂತಹ ಸಂದರ್ಭ ದಲ್ಲಿ ಪರಿಸರವಾದಿಗಳೆಂದು ಕರೆಸಿಕೊಳ್ಳುತ್ತಿರುವ ಕೆಲವರು ಅದಕ್ಕೆ ಅಡ್ಡಿಪಡಿಸಲು ಮುಂದಾಗಿದ್ದಾರೆ. ಬೆಳೆಗಾರರಿಗೆ ಅವರ ಜಾಗದ ದಾಖಲೆಗಳನ್ನು ನೀಡಲು ಅಧಿಕಾರಿ ಗಳು ಹಿಂದೇಟು ಹಾಕುತ್ತಿದ್ದಾರೆ. ಇದರ ಬಗ್ಗೆ ಜಿಲ್ಲೆಯ ಜನತೆ ಎಚ್ಚೆತ್ತುಕೊಳ್ಳ ಬೇಕಾದ ಕಾಲ ಬಂದಿದ್ದು, ಪರಿಸರವಾದಿಗಳನ್ನು ಜಿಲ್ಲೆಯಿಂದ ಗಡಿಪಾರು ಮಾಡುವಂತೆ ಆಗ್ರಹಿಸಿ ಬೃಹತ್ ಪ್ರತಿಭಟನಾ ಸಮಾವೇಶ ನಡೆಸುವದಾಗಿ ತಿಳಿಸಿದರು.
ಈಗಾಗಲೇ ಸೇವ್ ಕೊಡಗು ಸಂಘಟನೆ ಹಮ್ಮಿಕೊಂಡಿರುವ ಹೋರಾಟಕ್ಕೆ ಜಿಲ್ಲೆಯ ಕೃಷಿಕರು ಕೈಜೋಡಿಸಬೇಕಿದೆ ಎಂದು ಭರತ್ ಹೇಳಿದರು.
ಬೇಡಿಕೆಗಳು
ಕೊಡಗಿನ ಜಮ್ಮಾ ಬಾಣೆ ಜಾಗಗಳು ಇಲ್ಲಿನ ಬೆಳೆಗಾರರ ಸ್ವಂತ ಆಸ್ತಿಯಾಗಿದ್ದು, ಇದರ ಮೇಲೆ ಪರಿಸರವಾದಿಗಳೆಂದು ಹೇಳಿಕೊಳ್ಳು ವವರಿಗಾಗಲಿ, ಅರಣ್ಯ ಇಲಾಖೆಗಾಗಲಿ ಯಾವದೇ ಹಕ್ಕಿಲ್ಲ. ಕೊಡಗಿನಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಬೆಳೆಗಾರರ ಆಸ್ತಿಗೆ ಸಂಬಂಧಿಸಿದ ಕಡತಗಳನ್ನು ತಕ್ಷಣದಿಂದಲೇ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಬೇಕು. 2013ರ ರಾಷ್ಟ್ರಪತಿ ಅಂಕಿತವಾಗಿರುವ ಭೂ ಕಾಯ್ದೆಯನ್ನು ತಕ್ಷಣದಿಂದ ಜಾರಿಗೆ ತರಬೇಕು. ಕೊಡಗು ಜಿಲ್ಲೆಯನ್ನು ರಾಷ್ಟ್ರೀಯ ವಿಪತ್ತು ಪೀಡಿತ ಪ್ರದೇಶವೆಂದು ಘೋಷಿಸಿ ಬೆಳೆಗಾರರ ಸಂಪೂರ್ಣ ಸಾಲವನ್ನು ಮನ್ನಾ ಮಾಡಬೇಕು. ಕೊಡಗಿನಲ್ಲಿ ಆನೆ ಹಾವಳಿ ನಿಯಂತ್ರಿಸಲು ರೈಲ್ವೆ ಹಳಿ ಬೇಲಿ ನಿರ್ಮಿಸುವದರೊಂದಿಗೆ ಕಾಡಾನೆ ಧಾಳಿಗೆ ಸಿಲುಕಿ ಹತರಾದವರ ಕುಟುಂಬಗಳಿಗೆ ತಲಾ 25 ಲಕ್ಷ ರೂ.ಗಳ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.
ಗ್ರಾಮಸ್ಥ ಕೆ.ಎ.ಮಿಟ್ಟು ಅವರು ಮಾತನಾಡಿ, ಕೊಡಗಿನಲ್ಲಿ ತಾವು ಪರಿಸರವಾದಿಗಳೆಂದು ಹೇಳಿ ಕೊಳ್ಳುತ್ತಿರುವವರಿಗೆ ಪರಿಸರದ ಬಗ್ಗೆ ನೈಜ ಕಾಳಜಿ ಇದ್ದರೆ ಅವರುಗಳು ಅನುಭವಿಸುತ್ತಿರುವ ಕಾಫಿ ತೋಟಗಳನ್ನು ಸಂಪೂರ್ಣವಾಗಿ ಕಿತ್ತೊಗೆದು ಅಲ್ಲಿ ಅರಣ್ಯವನ್ನು ಅಭಿವೃದ್ಧಿಪಡಿಸುವ ಮೂಲಕ ಇತರರಿಗೆ ಮಾದರಿಯಾಗಲಿ ಎಂದು ಸವಾಲು ಹಾಕಿದರು.
ಸುದ್ದಿಗೋಷ್ಠಿಯಲ್ಲಿ ಗ್ರಾಮಸ್ಥರಾದ ನಾಳಿಯಂಡ ಚಂಗಪ್ಪ, ಆಚೀರ ನಾಣಯ್ಯ, ಮೂಲೆಮಜಲು ನಾಗೇಶ ಹಾಗೂ ಗ್ರಾ.ಪಂ. ಸದಸ್ಯ ಕುದುಪಜೆ ಪುರುಷೋತ್ತಮ ಉಪಸ್ಥಿತರಿದ್ದರು.
 
						