ಶ್ರೀಮಂಗಲ, ಅ. 4: ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯ ಪೊರಾಡು ಗ್ರಾಮದಲ್ಲಿ ಬೆಂಗಳೂರು ಮೂಲದ ವ್ಯಕ್ತಿಯೊಬ್ಬರು ಜಾಗ ಖರೀದಿಸಿ ಇಲ್ಲಿನ ಕಕ್ಕಟ್ಟ್‍ಪೊಳೆ ನದಿಯ ಅಂಚಿನಲ್ಲಿ 6 ಹೋಂ ಸ್ಟೇ ಕಾಟೇಜ್‍ಗಳನ್ನು ನಿರ್ಮಿಸಿದ್ದು, ಇದೀಗ ಇಲ್ಲಿನ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಬಿರುನಾಣಿ ಗ್ರಾ.ಪಂ.ಯಿಂದ ನಿರಾಕ್ಷೇಪಣಾ ಪತ್ರ ಕೋರಿರುವ ಹೋಂ ಸ್ಟೇ ಮಾಲೀಕರಿಗೆ ಈ ಪತ್ರ ನೀಡದಿರಲು ತೀರ್ಮಾನಿಸಲಾಗಿದೆ.
ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯ ಪೊರಾಡು ಗ್ರಾಮದಲ್ಲಿ ಸರ್ವೆ ನಂ 88 ರಲ್ಲಿ 5 ಎಕರೆ 35 ಸೆಂಟ್ ಜಾಗವನ್ನು ಬೆಂಗಳೂರು ಮೂಲದ ಬಾಲಮುರುಗನ್ ಅವರ ಪತ್ನಿ ಬಿ.ನಿವೇದಿತ ಅವರಿಗೆ ಸ್ಥಳೀಯ ನಿವಾಸಿ ಮಾರಾಟ ಮಾಡಿದ್ದು, ಈ ಜಾಗದಲ್ಲಿ ಬಿ.ನಿವೇದಿತ ಅವರು 6 ಹೋಂ ಸ್ಟೇ ಕಾಟೇಜ್‍ಗಳನ್ನು ನಿರ್ಮಾಣ ಮಾಡಿದ್ದಾರೆ.
ಕಳೆದ 6 ತಿಂಗಳ ಹಿಂದೆ ಇಲ್ಲಿ ಕಾಟೇಜ್‍ಗಳ ನಿರ್ಮಾಣ ಕಾರ್ಯ ಮುಗಿದಿದೆ. ನಿವೇದಿತ ಅವರು ಫೆಬ್ರವರಿಯಲ್ಲಿ ಬಿರುನಾಣಿ ಗ್ರಾ.ಪಂ.ಯಿಂದ ನಿರಾಕ್ಷೇಪಣಾ ಪತ್ರ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಈ ಬಗ್ಗೆ ಗ್ರಾಮಸ್ಥರ ಅಭಿಪ್ರಾಯವನ್ನು ಗ್ರಾ.ಪಂ. ಅಧ್ಯಕ್ಷ ಬುಟ್ಟಿಯಂಡ ತಂಬಿ ನಾಣಯ್ಯ ಕೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಇದಕ್ಕೆ ಪ್ರತಿಯಾಗಿ ಪೊರಾಡು ಊರು ಪಂಚಾಯಿತಿಯ ಅಧ್ಯಕ್ಷರಾದ ಮಿದೇರಿರ ಮಂಜುನಾಥ್ ಮತ್ತು ಕಾರ್ಯದರ್ಶಿ ಬಲ್ಯಮಿದೇರಿರ ಸಂಪತ್ ಅವರು ನಿರಾಕ್ಷೇಪಣಾ ಪತ್ರ ನೀಡದಂತೆ ಗ್ರಾ.ಪಂ.ಗೆ ಅರ್ಜಿ ಸಲ್ಲಿಸಿದ್ದರು.
 
						