ಮಡಿಕೇರಿ, ಅ. 4: ಪ್ರಾಕೃತಿಕ ವಿಕೋಪಕ್ಕೆ ಮಡಿಕೇರಿ ತಾಲೂಕಿನ ಕೆಲವು ಹಾಗೂ ಸೋಮವಾರಪೇಟೆ ಕೆಲವು ಗ್ರಾಮಗಳು ತತ್ತರಿಸಿ ಹೋಗಿವೆ. ಭೂಕುಸಿತ, ಜಲಪ್ರಳಯದಲ್ಲಿ ಮನೆಗಳು, ತೋಟ, ಗದ್ದೆಗಳು ನಾಶ ವಾಗಿದ್ದರೆ, ಜನ - ಜಾನುವಾರುಗಳ ಪ್ರಾಣಹಾನಿಯೂ ಸಂಭವಿಸಿದೆ. ಅದೇ ರೀತಿ ಹೃದಯಭಾಗ ಮಡಿಕೇರಿಯ ಕೆಲವು ಪ್ರದೇಶಗಳಲ್ಲಿ ಹಾನಿ ಸಂಭವಿಸಿದೆ. ಎಲ್ಲಾ ಕಡೆಗಳಲ್ಲಿ ದುರಸ್ತಿ, ಪರಿಹಾರೋಪಾಯ ಕಾರ್ಯಗಳು ಭರದಿಂದ ಸಾಗಿವೆ.ಆದರೆ, ವಿಚಿತ್ರವೆಂದರೆ ಮಡಿಕೇರಿ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಸಲುವಾಗಿ ಮಣ್ಣಿನಡಿ ಅಳವಡಿಸಲಾಗಿದ್ದ ಪೈಪ್‍ಲೈನ್‍ಗಳ ಮೇಲೆ ಮನೆಗಳನ್ನು ನಿರ್ಮಿಸಿರುವದು ಭೂಕುಸಿತದಿಂದಾಗಿ ಬೆಳಕಿಗೆ ಬಂದಿದೆ. ಮನೆ ನಿರ್ಮಿಸುವ ಸಲುವಾಗಿ ಕೊರೆಯಲಾಗಿದ್ದ ಭೂಮಿ ಕುಸಿದಿದ್ದು, ಮನೆ ಸಹಿತ ಭಾರೀ ಗಾತ್ರದ ನೀರಿನ ಪೈಪ್‍ಗಳೂ ಕೊಚ್ಚಿ ಹೋಗಿವೆ. ಘಟನೆ ಸಂಭವಿಸಿ ಎರಡು ತಿಂಗಳಾಗುತ್ತಾ ಬಂದರೂ ಇದರ ಗೊಡವೆಗೆ, ಪೈಪ್‍ಲೈನ್ ದುರಸ್ತಿಗೆ ಯಾರೂ ಮುಂದಾಗದಿರುವದು ವಿಶೇಷ.
ಮಡಿಕೇರಿ ನಗರಕ್ಕೆ ಶಾಶ್ವತ ಕುಡಿಯುವ ನೀರನ್ನು ಒದಗಿಸುವ ಸಲುವಾಗಿ ಗಾಳಿಬೀಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಣಚಲು ಬಳಿಯ ಕುಂಡಾಮೇಸ್ತ್ರಿ ಹೊಳೆಯಿಂದ ನೀರು ಸರಬರಾಜು ಯೋಜನೆ ರೂಪಿಸಲಾಗಿದೆ. ಈ ಸಂಬಂಧ ಸ್ಟಿವರ್ಟ್ ಹಿಲ್‍ನಲ್ಲಿರುವ ನೀರು ಸಂಗ್ರಹಣಾ ಕೇಂದ್ರಕ್ಕೆ ನೀರು ಸರಬರಾಜು ಮಾಡುವ ಸಲುವಾಗಿ ಬೆಟ್ಟ ಕೊರೆದು ಪೈಪ್‍ಗಳನ್ನು ಅಳವಡಿ ಸಲಾಗಿತ್ತು. ಈ ಪೈಪ್‍ಗಳ ಮೂಲಕವೇ ನೀರು ಸರಬರಾಜಾಗುತಿತ್ತು.
ಮನೆಗಳ ನಿರ್ಮಾಣ
ನಂತರದಲ್ಲಿ ಸರಕಾರಿ ಪೈಸಾರಿ ಜಾಗವಾದ ಈ ಪ್ರದೇಶದಲ್ಲಿ ಸದ್ದಿಲ್ಲದೆ ಎರಡು ಮನೆಗಳು ತಲೆ ಎತ್ತಿವೆ. ವಿಚಿತ್ರವೆಂದರೆ ಈ ಮನೆಗಳ ನಿರ್ಮಾಣವಾಗಿರುವ ಪೈಪ್‍ಗಳ ಮೇಲೆಯೇ... ಈ ಮನೆಗಳಿರುವ ಸ್ಥಳದ ನೇರಕ್ಕೆ ಮೇಲ್ಭಾಗದಲ್ಲಿ ಲಕ್ಷ ಲೀಟರ್ ಸಾಮಥ್ರ್ಯದ ಬೃಹತ್ ನೀರಿನ ಟ್ಯಾಂಕ್, ನೀರು ಶುದ್ಧೀಕರಣ ಘಟಕವಿದೆ. ಮೇಲ್ನೋಟಕ್ಕೆ ಇಂದು ಅಪಾಯಕಾರಿ ಎಂದು ಅರಿವಿದ್ದರೂ ಮನೆ ನಿರ್ಮಿಸಲಾಗಿದೆ. ಮನೆ ನಿರ್ಮಿಸಲು ಅವಕಾಶ ನೀಡಿರುವದೂ ಕೂಡ ರಾಜಕೀಯ ವ್ಯವಸ್ಥೆಯಡಿ ಎಂಬದು ತಿಳಿದು ಬರುತ್ತದೆ.
ಅತಿಕ್ರಮಣ ಅಪರಾಧ
ಕಾನೂನು ಪ್ರಕಾರ ನದಿ ದಂಡೆ, ರಾಜಕಾಲುವೆ ಕೆರೆ,
(ಮೊದಲ ಪುಟದಿಂದ) ಅಪಾಯಕಾರಿ ಸ್ಥಳ, ಪೈಪ್‍ಲೈನ್‍ಗಳು ಹಾದು ಹೋಗಿರುವ ಸ್ಥಳಗಳ ಒತ್ತುವರಿ ಹಾಗೂ ಮನೆ, ಕಟ್ಟಡಗಳ ನಿರ್ಮಾಣ ಅಪರಾಧವಾಗುತ್ತದೆ. ಆದರೆ ಇದ್ಯಾವದನ್ನು ಲೆಕ್ಕಿಸದೆ ಅತಿಕ್ರಮಗಳು ನಡೆಯುತ್ತಲೇ ಇವೆ, ಅನಾಹುತಗಳು ಸಂಭವಿಸುತ್ತಲೇ ಇವೆ. ಅದೇ ರೀತಿ ಇಲ್ಲೂ ಕೂಡ ಆಗಿದೆ.
ಕೆರೆ ಮುಳುಗಡೆ
ಮನೆ ನಿರ್ಮಿಸುವ ಸಲುವಾಗಿ ಬೆಟ್ಟ ಕೊರೆಯಲಾಗಿದೆ. ಅಲ್ಲದೆ ಭಾರೀ ಗಾತ್ರದ ಪೈಪ್ ಕೂಡ ಮನೆಯ ಅಡಿಪಾಯದ ಅಡಿಯಲ್ಲಿ ಹಾದು ಹೋಗಿದ್ದರಿಂದ ಮಣ್ಣು ಮತ್ತಷ್ಟು ಮೆದುವಾಗಿ ಮನೆಯೊಂದರ ಅರ್ಧಭಾಗದೊಂದಿಗೆ ಪೈಪ್‍ಗಳು ಕೂಡ ಕೊಚ್ಚಿ ಹೋಗಿವೆ. ಕಬ್ಬಿಣದ ಪೈಪ್‍ಗಳು ಇದೀಗ ಕರ್ಣಂಗೇರಿ ವ್ಯಾಪ್ತಿಗೊಳಪಡುವ 14ನೇ ಬ್ಲಾಕ್‍ನ ಸ.ನಂ. 461, 460/2 ರಲ್ಲಿರುವ ಬಿ.ಎನ್. ಪ್ರಕಾಶ್ ಎಂಬವರಿಗೆ ಸೇರಿದ ಜಾಗದಲ್ಲಿದೆ. ಅವರಿಗೆ ಸೇರಿದ ಶುದ್ಧ ನೀರಿನ ಕೆರೆ ಮುಚ್ಚಿಹೋಗಿದೆ. ಮನೆಯ ಅವಶೇಷಗಳು, ಸಾಮಗ್ರಿಗಳು ಚಪ್ಪಲಿ, ಬಾಟಲಿಗಳು ಕೆರೆಯ ನೀರಿನಲ್ಲಿ ತೇಲುತ್ತಿವೆ.
ಸ್ಪಂದನವಿಲ್ಲ
ಪೈಪ್‍ಲೈನ್ ಹಾದು ಹೋಗಿರುವ ಜಾಗದಲ್ಲಿ ಮನೆ ನಿರ್ಮಾಣಕ್ಕೆ ಅವಕಾಶ ನೀಡದಂತೆ ಈ ಹಿಂದೆ ಬಿಜೆಪಿ ಆಡಳಿತವಿದ್ದ ಸಂದರ್ಭ ಪ್ರಕಾಶ್ ಅವರು ಮನವಿ ಮಾಡಿಕೊಂಡಿದ್ದರೂ ಇವರ ಮಾತಿಗೆ ಯಾರೂ ಸೊಪ್ಪು ಹಾಕಿರಲಿಲ್ಲ. ಅಲ್ಲದೆ, ಇದೀಗ ದುರಂತ ಸಂಭವಿಸಿ ಎರಡೂ ತಿಂಗಳಾಗುತ್ತಾ ಬಂದರೂ ಪೈಪ್‍ಲೈನ್ ದುರಸ್ತಿಗಾಗಲೀ, ಅಪಾಯದಲ್ಲಿರುವ ಮನೆಗಳ ಸ್ಥಳಾಂತರಕ್ಕಾಗಲೀ ಯಾರೂ ಆಸ್ಥೆ ವಹಿಸುತ್ತಿಲ್ಲ. ನಗರಸಭೆಯವರಿಗೆ ಮಾಹಿತಿ ನೀಡಿದರೂ ಏನೂ ಪ್ರಯೋಜವಾಗಿಲ್ಲ. ಅಧ್ಯಕ್ಷರಾದಿಯಾಗಿ ಎಲ್ಲರೂ ಬಂದು ನೋಡಿ ಹೋಗಿದ್ದರೂ ಯಾವದೇ ಸ್ಪಂದನ ಇಲ್ಲದಂತಾಗಿದೆ ಎಂದು ಪ್ರಕಾಶ್ ‘ಶಕ್ತಿ’ಯೊಂದಿಗೆ ಅಳಲು ತೊಡಿಕೊಂಡಿದ್ದಾರೆ. ಜಾಗ ನಾಶವಾಗಿ ಕೆರೆಗೆ ಹಾನಿಯಾಗಿದ್ದರೂ ಯಾವದೇ ಪರಿಹಾರ ಕೂಡ ಸಿಗಲಿಲ್ಲವೆಂದು ಅವರು ನೋವು ತೋಡಿಕೊಂಡರು.
ಕಾದಿದೆ ಅಪಾಯ
ಇಲ್ಲಿ ಮತ್ತೆ ಮನೆ ನಿರ್ಮಾಣಕ್ಕೆ ಅಥವಾ ವಾಸಿಸಲು ಅವಕಾಶ ಕಲ್ಪಿಸಿದಲ್ಲಿ ಅಪಾಯ ತಪ್ಪಿದ್ದಲ್ಲ. ಪೈಪ್‍ಲೈನ್ ದುರಸ್ತಿ ಸಂದರ್ಭ ಒದಗಿ ಬಂದರೆ ಮತ್ತೆ ಭೂಮಿ ಕೊರೆಯಬೇಕಾಗುತ್ತದೆ. ಮನೆಯ ಕೆಳಭಾಗದಲ್ಲೇ ಪೈಪ್ ಇರುವದರಿಂದ ನೀರೂ ಕೂಡ ರಭಸದಲ್ಲಿ ಬರುವದರಿಂದ ಅಪಾಯ ಎದುರಾಗುವ ಸಂಭವವಿದೆ. ಆದರೂ, ಅಲ್ಲೇ ಉಳಿದಿರುವ ಮತ್ತೊಂದು ಮನೆಯಲ್ಲಿ ಇನ್ನೂ ಕೂಡ ವಾಸವಿದ್ದಾರೆ. ಆಡಳಿತ ಇತ್ತ ಗಮನ ಹರಿಸಿ ಸೂಕ್ತ ವ್ಯವಸ್ಥೆ ಕಲ್ಪಿಸಬೇಕಾಗಿದೆ. -ಕುಡೆಕಲ್ ಸಂತೋಷ್
 
						