ಕೂಡಿಗೆ, ಅ. 4 : ಕೂಡಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸೀಗೆಹೊಸೂರು ಗ್ರಾಮದ ಸಮೀಪವಿರುವ ಹುದುಗೂರು ಅರಣ್ಯ ಮತ್ತು ಬಾಣಾವರ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತಿರುವ ಮೀಸಲು ಅರಣ್ಯ ಪ್ರದೇಶಕ್ಕೆ ಕಂದಾಯ ಇಲಾಖೆಯ ಸರ್ವೇ ಅಧಿಕಾರಿಗಳ ತಂಡ ಇಂದು ಸರ್ವೆ ನಡೆಸಲು ಬಂದ ಸಂದರ್ಭ ಸೀಗೆಹೊಸೂರು ಗ್ರಾಮದ ನೂರಾರು ಜನ ಸರ್ವೆಗೆ ಅವಕಾಶ ನೀಡದೆ ಸ್ಥಗಿತಗೊಳಿಸಿದ ಘಟನೆ ನಡೆಯಿತು. ಸೀಗೆಹೊಸೂರು ಗ್ರಾಮದ ಸರ್ವೆ ನಂ.13/1ರಲ್ಲಿ ಪೈಸಾರಿ ಜಾಗ 23 ಎಕರೆ ಈ ಜಾಗವು ಈಗಾಗಲೇ ಮೀಸಲು ಅರಣ್ಯ ಪ್ರದೇಶಕ್ಕೆ ಒಳಪಟ್ಟು ಆನೆ ಕಾರಿಡಾರ್ ಮತ್ತು ಮೀಸಲು ಅರಣ್ಯದ ಗಿಡ ಮರಗಳು ಬೆಳೆದಿದ್ದು, ಇದು ಅರಣ್ಯ ಇಲಾಖೆಯ ಸುಪರ್ದಿಯಲ್ಲಿಯೇ ಇದೆ. ಸೀಗೆಹೊಸೂರು ಗ್ರಾಮಸ್ಥರು ಕಳೆದ 10 ವರ್ಷಗಳಿಂದಲೂ ಈ ಜಾಗಕ್ಕೆ ಈ ವ್ಯಾಪ್ತಿಯ 150 ಕುಟುಂಬಗಳು ನೆಲೆಸಲು ನಿವೇಶನ ಇಲ್ಲದೆ ಪರದಾಡುತ್ತಿದ್ದ ಸಂದರ್ಭ ನಿವೇಶನವನ್ನು ಕಟ್ಟಿಕೊಳ್ಳಲು ಈ ಜಾಗಕ್ಕೆ ತೆರಳಿದಾಗ ಅರಣ್ಯ ಇಲಾಖೆಯ ಅಧಿಕಾರಿಗಳು ಅಲ್ಲಿಂದ ಒಕ್ಕಲೆಬ್ಬಿಸಿದ್ದ ಘಟನೆಯು ನಡೆದಿತ್ತು. ಆದರೆ, 40 ವರ್ಷಗಳ ಹಿಂದೆ ಹಾರಂಗಿ ಅಣೆಕಟ್ಟೆಯ ನಿರ್ಮಾಣದ ಸಂದರ್ಭ ಭೂಮಿ ಕಳೆದುಕೊಂಡಿದ್ದೇವೆ ಎಂದು ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದ ಸುಂಟಿಕೊಪ್ಪದ ಓರ್ವವ್ಯಕ್ತಿಗೆ 23 ಎಕರೆ ಜಾಗ ಮಂಜೂರಾಗಿದೆ ಎಂದು ಯಾವದೇ ದಾಖಲಾತಿ ಮತ್ತು ಅನುಮತಿ ಪತ್ರವಿಲ್ಲದೆ, ಇದ್ದಕ್ಕಿದ್ದಂತೆ ಮೀಸಲು ಅರಣ್ಯದಲ್ಲಿ ಪೈಸಾರಿ ಜಾಗ ಇದೆ ಎಂದು ಈ ಜಾಗಕ್ಕೆ ಸರ್ವೆ ಮಾಡಲು ಅಧಿಕಾರಿಗಳು ಬಂದ ಸಂದರ್ಭ ತಡೆ ಹಿಡಿದರು.

ಸೀಗೆಹೊಸೂರು ದೇವಾಲಯ ಸಮಿತಿಯ ಅಧ್ಯಕ್ಷ ಹೆಚ್.ಎಂ.ಸತೀಶ್, ಗ್ರಾಮ ಪಂಚಾಯ್ತಿ ಸದಸ್ಯರಾದ ಜಗನ್ನಾಥ್, ಧನಂಜಯ್, ಬಿಜೆಪಿ ಯುವ ಮೋರ್ಚದ ಅಧ್ಯಕ್ಷ ಬೊಮ್ಮೇಗೌಡನ ಚಿಣ್ಣಪ್ಪ, ಗ್ರಾಮದ ಪ್ರಮುಖರಾದ ಮಂಜುನಾಥ್, ಶಿವಣ್ಣ, ಪ್ರಕಾಶ್, ನಾಗರಾಜ್, ಸುಂದರ್, ರಘು,

(ಮೊದಲ ಪುಟದಿಂದ) ಡಿ.ಎಲ್.ಲೋಕೇಶ್, ಪಿ.ಎಸ್.ಕಾವೇರಪ್ಪ, ಆನಂದ್, ಓಂಕೇಶ್ ಸೇರಿದಂತೆ ನೂರಾರು ಜನ ಗ್ರಾಮಸ್ಥರು ಮೀಸಲು ಅರಣ್ಯದ ಜಾಗವನ್ನು ಸರ್ವೆ ನಡೆಸದಂತೆ ತಡೆವೊಡ್ಡಿದ ಹಿನ್ನೆಲೆಯಲ್ಲಿ ಸರ್ವೆ ಅಧಿಕಾರಿಗಳು ಸರ್ವೆಯನ್ನು ಸ್ಥಗಿತಗೊಳಿಸಿ ಅಲ್ಲಿಂದ ತೆರಳಿದರು.

ಕೂಡಿಗೆ ಗ್ರಾಮ ಪಂಚಾಯಿತಿಗೆ ಒಳಪಡುವ ಸೀಗೆಹೊಸೂರು ಗ್ರಾಮವು ಇದಕ್ಕೆ ಹೊಂದಿಕೊಂಡಂತೆ ಭುವನಗಿರಿ, ಹುಣಸೆಪಾರೆ ಹಾಗೂ ಉಪಗ್ರಾಮಗಳಿದ್ದು ಈ ಪ್ರದೇಶದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡ ಮತ್ತು ಇತರೆ ವರ್ಗದವರಿಗೆ ನಿವೇಶನ ಮತ್ತು ಮನೆಗಳು ಇರುವದಿಲ್ಲ. ಇವರು ಅನೇಕ ವರ್ಷಗಳಿಂದಲೂ ಗ್ರಾಮ ಪಂಚಾಯಿತಿಗೆ ಮತ್ತು ತಾಲೂಕು ಪಂಚಾಯ್ತಿಯ ಅಕ್ರಮ-ಸಕ್ರಮದವರಿಗೂ, ಸಮಾಜ ಕಲ್ಯಾಣ ಇಲಾಖೆಯವರಿಗೂ ಅರ್ಜಿಗಳನ್ನು ಸಲ್ಲಿಸಿದ್ದರೂ ಇದುವರೆಗೂ ಯಾವದೇ ರೀತಿಯ ಪ್ರಯೋಜನಗಳೂ ಆಗಿಲ್ಲ. ಆದರೆ, ಇದ್ದಕ್ಕಿದ್ದಂತೆಯೇ ಅಧಿಕಾರಿಗಳು ಸ್ಥಳೀಯ ನಿವೇಶನ ರಹಿತರಿಗೆ ಜಾಗವನ್ನು ಗುರುತಿಸದೇ ಬೇರೆಯವರಿಗೆ ಗುರುತಿಸಿ ಸರ್ವೆ ನಡೆಸಲು ಬಂದರೆ ಪ್ರತಿಭಟನೆ ಮಾಡಲಾಗುವದು ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ತಾಲೂಕು ತಹಶೀಲ್ದಾರ್ ಅವರೊಂದಿಗೆ ದೂರವಾಣಿಯ ಮೂಲಕ ಮಾತನಾಡಿಸಿದಾಗ, ಹಾರಂಗಿ ಅಣೆಕಟ್ಟೆಯನ್ನು ನಿರ್ಮಾಣ ಮಾಡುವ ಸಂದರ್ಭ ಭೂಮಿಯನ್ನು ಕಳೆದುಕೊಂಡವರು ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದರಿಂದ ಅಂತಹ ಫಲಾನುಭವಿಗಳಿಗೆ ಬೇರೆ ಸರ್ವೆ ನಂಬರ್ ಜಾಗದಲ್ಲಿ ನೀಡಲಾಗಿದೆ. ಸೀಗೆಹೊಸೂರು ಗ್ರಾಮದ ಸರ್ವೆ ನಂ.13/1ರಲ್ಲಿ ಯಾರಿಗೂ ಜಾಗವನ್ನು ಕಾದಿರಿಸಿಲ್ಲ ಅಥವಾ ನೀಡಿಲ್ಲ ಎಂದು ತಿಳಿಸಿದರು.

ಅರಣ್ಯ ಇಲಾಖೆಯ ತಾಲೂಕು ವಲಯ ಅರಣ್ಯ ಸಂರಕ್ಷಣಾಧಿಕಾರಿ ಲಕ್ಷ್ಮೀಕಾಂತ್ ಅವರನ್ನು ಮಾತನಾಡಿಸಿದಾಗ ಸರ್ವೆ ನಂ.13/1 ಜಾಗವು ಅರಣ್ಯ ಪ್ರದೇಶದಲ್ಲಿದ್ದು, ಈ ವ್ಯಾಪ್ತಿಯ ಜಾಗವನ್ನು ಅರಣ್ಯ ಇಲಾಖೆಯ ವತಿಯಿಂದ ಮೀಸಲು ಅರಣ್ಯ ನೀತಿಯನ್ವಯ ಆನೆ ಕಾರಿಡಾರ್ ಹಾಗೂ ಉತ್ತಮ ಮರಗಳನ್ನು ಈ ಪ್ರದೇಶದಲ್ಲಿ ಬೆಳೆಸಲಾಗಿದೆ. ಮೀಸಲು ಅರಣ್ಯವನ್ನಾಗಿ ಇಟ್ಟುಕೊಂಡಿದ್ದೇವೆ. ಈ ಅರಣ್ಯಕ್ಕೆ ಹೊಂದಿಕೊಂಡಂತೆ ಏನಾದರೂ ಪೈಸಾರಿ ಜಾಗವಿದ್ದರೇ ಆ ಜಾಗವನ್ನು ಸಹ ಅರಣ್ಯ ಇಲಾಖೆಗೆ ಬಿಟ್ಟುಕೊಡುವಂತೆ ಒತ್ತಾಯ ಮಾಡುವದರ ಜೊತೆಗೆ ಯಾವದೇ ಸಂದರ್ಭದಲ್ಲಿಯೂ ಇಲಾಖೆಯ ಜಾಗವನ್ನು ಬೇರೆಡೆ ನೀಡಲು ಒಪ್ಪುವದಿಲ್ಲ ಎಂದು ತಿಳಿಸಿದ್ದಾರೆ.

-ಕೆ.ಕೆ.ನಾಗರಾಜಶೆಟ್ಟಿ