ಸಿದ್ದಾಪುರ, ಅ. 3: ಆಟೋ ಚಾಲಕರು ನಗರದಲ್ಲಿ ಸಂಚಾರಿ ನಿಯಮವನ್ನು ಪಾಲಿಸುವ ಮೂಲಕ ಸಾರ್ವಜನಿಕರಿಗೆ ಅಡಚಣೆಯಾಗದಂತೆ, ಸುಗಮ ಸಂಚಾರಕ್ಕೆ ಸಹಕಾರ ನೀಡದಿದ್ದಲ್ಲಿ, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವದಾಗಿ ಸಿದ್ದಾಪುರ ಪೊಲೀಸ್ ಠಾಣಾಧಿಕಾರಿ ದಯಾನಂದ್ ಎಚ್ಚರಿಕೆ ನೀಡಿದರು.
ಸಿದ್ದಾಪುರದ ಪಂಚಾಯಿತಿ ಸಭಾಂಗಣದಲ್ಲಿ ಆಟೋ ಚಾಲಕರ ಹಾಗೂ ಮಾಲೀಕರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಆಟೋ ಚಾಲಕರು ಪಟ್ಟಣ ವ್ಯಾಪ್ತಿಯಲ್ಲಿ ಸಂಚಾರಿ ನಿಯಮವನ್ನು ಪಾಲಿಸದೇ ವಾಹನಗಳನ್ನು ಅಡ್ಡ ದಿಡ್ಡಿ ನಿಲ್ಲಿಸುವದರ ಮೂಲಕ ಸಾರ್ವಜನಿಕರಿಗೆ ತೊಂದರೆಯುಂಟಾಗುತ್ತಿರುವದು ಗಮನಕ್ಕೆ ಬಂದಿದೆ. ಈ ಹಿನ್ನೆಲೆ ಚಾಲಕರು ಸಂಚಾರ ನಿಯಮವನ್ನು ಪಾಲಿಸಬೇಕೆಂದರು. ಪರವಾನಗಿ ಇಲ್ಲದೆ ಚಾಲನೆ ಮಾಡಿದಲ್ಲಿ ಕಟ್ಟುನಿಟ್ಟಿನ ಕ್ರಮಕೈಗೊಂಡು ಸಾರಿಗೆ ಇಲಾಖೆಗೆ ದೂರು ನೀಡಲಾಗುವದೆಂದರು.
ಮಂಗಳವಾರವನ್ನು ಹೊರತುಪಡಿಸಿ ಉಳಿದೆಲ್ಲಾ ದಿನಗಳಲ್ಲಿ ಆಟೋ ಚಾಲಕರು ಸಮವಸ್ತ್ರವನ್ನು ಧರಿಸಿ ವಾಹನವನ್ನು ಚಲಾಯಿಸಬೇಕೆಂದರು. ಅಲ್ಲದೆ ಶಾಲಾ ಮಕ್ಕಳನ್ನು ಕರೆತರುವ ಆಟೋ ರಿಕ್ಷಾಗಳು ನಿಗದಿತ ಸಂಖ್ಯೆಯಲ್ಲಿ ಮಕ್ಕಳನ್ನು ಕರೆದೊಯ್ಯಬೇಕೆಂದರು. ಇತ್ತೀಚೆಗೆ ಯುವತಿಯರನ್ನು, ಶಾಲಾ-ಕಾಲೇಜು ವಿದ್ಯಾರ್ಥಿನಿಯರನ್ನು ಚುಡಾಯಿಸುವ ಕುರಿತು ಆಟೋ ಚಾಲಕರ ಮೇಲೆ ಆರೋಪಗಳು ಬಂದಿದ್ದು, ಆರೋಪಗಳು ಸಾಬೀತಾದಲ್ಲಿ ಕಾನೂನು ಕ್ರಮಕೈಗೊಳ್ಳುವದಾಗಿ ಎಚ್ಚರಿಕೆ ನೀಡಿದರು.
ಈ ಸಂದರ್ಭ ಚಾಲಕರು ತಮ್ಮ ಹಲವಾರು ಸಮಸ್ಯೆಗಳನ್ನು ಠಾಣಾಧಿಕಾರಿ ಬಳಿ ಪ್ರಸ್ತಾಪಿಸಿದರು. ಸಭೆಯಲ್ಲಿ ಸಹಾಯಕ ಠಾಣಾಧಿಕಾರಿ ರಾಜು ಹಾಜರಿದ್ದರು.