ಮಡಿಕೇರಿ, ಅ. 3: ಪ್ರಕೃತಿ ವಿಕೋಪದಿಂದಾಗಿ ಭೂಕುಸಿತ, ಪ್ರವಾಹಕ್ಕೆ ಸಿಲುಕಿ ಜೀವ ಕಳೆದುಕೊಂಡವರ ಕುಟುಂಬಗಳಿಗೆ ಶ್ರೀ ಆದಿಚುಂಚನಗಿರಿ ಮಠದ ವತಿಯಿಂದ ತಲಾ 50 ಸಾವಿರ ನೆರವು ನೀಡಲಾಯಿತು. ಮಠದ ಪೀಠಾಧಿಪತಿ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಸಂತ್ರಸ್ತ ಕುಟುಂಬಸ್ಥರನ್ನು ಭೇಟಿ ಮಾಡಿ ನೆರವನ್ನು ಹಸ್ತಾಂತರಿಸಿದರು.ಇಂದು ಬೆಳಿಗ್ಗೆ ಜಿಲ್ಲೆಗೆ ಆಗಮಿಸಿದ ಸ್ವಾಮೀಜಿಗಳು ಹಟ್ಟಿಹೊಳೆಯಲ್ಲಿ ನೀರುಪಾಲಾಗಿದ್ದ ಫ್ರಾನ್ಸಿಸ್ ಮೊಂತೆರೋ (ಅಪ್ಪು) ಎಂಬವರ ಮನೆಗೆ ತೆರಳಿ ನೆರವು ನೀಡಿದರು. ನಂತರ ಹೆಮ್ಮೆತ್ತಾಳು ಗ್ರಾಮದಲ್ಲಿ ಚಂದ್ರವತಿ ಹಾಗೂ ಉಮೇಶ್ ರೈ ಅವರು ಮಣ್ಣಿನಡಿ ಸಮಾಧಿಯಾದ ಸ್ಥಳ ವೀಕ್ಷಣೆ ಮಾಡಿದರಲ್ಲದೆ,

(ಮೊದಲ ಪುಟದಿಂದ) ಚಂದ್ರವತಿ ಅವರ ಪುತ್ರರಿಗೆ ನೆರವನ್ನು ಹಸ್ತಾಂತರಿಸಿದರು. ಬಳಿಕ ಮಕ್ಕಂದೂರು ಪ್ರೌಢಶಾಲೆಯಲ್ಲಿ ತೆರೆಯಲಾಗಿರುವ ನಿರಾಶ್ರಿತ ವಿದ್ಯಾರ್ಥಿಗಳ ವಸತಿ ನಿಲಯಕ್ಕೆ ಭೇಟಿ ಮಾಡಿ ಅಲ್ಲಿ ಉದಯಗಿರಿಯಲ್ಲಿ ಸಾವನ್ನಪ್ಪಿದ ಬಾಬು ಅವರ ಕುಟುಂಬಸ್ಥರಿಗೆ ನೆರವು ನೀಡಿದರು. ನಂತರ ಪ್ರೌಢಶಾಲಾ ವಿದ್ಯಾರ್ತಿಗಳಿಗೆ ಜಾಗತಿಕ ತಾಪಮಾನದ ಬಗ್ಗೆ ಪ್ರವಚನ ಮಾಡಿದರು. ನಂತರ ಮಡಿಕೇರಿಗೆ ಆಗಮಿಸಿ ಬಳಪದ ಮಂದಣ್ಣ ಅವರ ಮನೆಯಲ್ಲಿ ವ್ಯವಸ್ಥೆ ಮಾಡಲಾಗಿದ್ದ ಸ್ಥಳಕ್ಕೆ ಇನ್ನುಳಿದ ಜೀವ ಕಳೆದುಕೊಂಡ 12 ಮಂದಿಯ ಕುಟುಂಬಸ್ಥರಿಗೆ ನೆರವನ್ನು ಹಸ್ತಾಂತರಿಸಿದರು. ಈ ಎಲ್ಲ ವ್ಯವಸ್ಥೆಗಳನ್ನು ಕೊಡಗು ಗೌಡ ಯುವ ವೇದಿಕೆ ವತಿಯಿಂದ ಕಲ್ಪಿಸಲಾಗಿತ್ತು. ಸ್ವಾಮೀಜಿ ಭೇಟಿ ಸಂದರ್ಭ ಹಾಜರಿದ್ದ ಸಂತ್ರಸ್ತರು ನೆರವು ಕೋರಿ ಮನವಿ ಸಲ್ಲಿಸಿದರು. ಸ್ವಾಮೀಜಿಯವರೊಂದಿಗೆ ಹಾಸನ-ಕೊಡಗು ಶಾಖಾ ಮಠದ ಪೀಠಾಧಿಪತಿ ಶಂಭುನಾಥ ಸ್ವಾಮೀಜಿ, ಮಠದ ಅಧಿಕಾರಿ ವರ್ಗದವರು, ಗೌಡ ಸಮಾಜಗಳ ಮುಖಂಡರು, ಗೌಡ ಯುವ ವೇದಿಕೆ ಪದಾಧಿಕಾರಿಗಳು ಇದ್ದರು.