ಮಡಿಕೇರಿ, ಅ. 3: ಮಡಿಕೇರಿ ನಗರದ ಖಾಸಗಿ ಹಳೆಯ ಬಸ್ ನಿಲ್ದಾಣ ಪ್ರಸಕ್ತ ಮಳೆಗಾಲದಲ್ಲಿ ಭೂಕುಸಿತದೊಂದಿಗೆ ಅಪಾಯದಲ್ಲಿರುವ ಕಾರಣ; ನೂತನ ಬಸ್ ನಿಲ್ದಾಣಕ್ಕೆ ಸ್ಥಳಾಂತರಗೊಳಿಸುವ ದಿಸೆಯಲ್ಲಿ ಜಿಲ್ಲಾಡಳಿತ ನೀಡಿರುವ ಮಾರ್ಗಸೂಚಿಯಂತೆ ಅಗತ್ಯ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಚರ್ಚೆ ನಡೆಯಿತಾದರೂ, ಗೊಂದಲದ ನಡುವೆ ಯಾವದೇ ತೀರ್ಮಾನವಾಗದೆ ಹೋಯಿತು. ಇಂದು ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅಧ್ಯಕ್ಷತೆಯಲ್ಲಿ ವಿಶೇಷ ಸಾಮಾನ್ಯ ಸಭೆ ನಡೆಯುವದರೊಂದಿಗೆ, ಸಾಕಷ್ಟು ಚರ್ಚೆಯಾದರೂ, ಒಮ್ಮತದ ನಿರ್ಧಾರಕ್ಕೆ ಬರಲಾರದೆ ಗೊಂದಲ ಸೃಷ್ಟಿಯಾಯಿತು.
(ಮೊದಲ ಪುಟದಿಂದ)ಕೆಲವರು ಖಾಸಗಿ ಬಸ್‍ನಿಲ್ದಾಣ ಕಾಮಗಾರಿ ಅವ್ಯವಹಾರದ ಬಗ್ಗೆ ಲೋಕಾಯುಕ್ತ ತನಿಖೆಗೆ ಆಗ್ರಹಿಸಿದರೆ, ಏಕಕಾಲಕ್ಕೆ ಹಣ ಪಾವತಿಸಿ, ಗುತ್ತಿಗೆದಾರ ನಿಯಮದಂತೆ ಕೆಲಸ ಪೂರೈಸಿಲ್ಲವೆಂಬ ಟೀಕೆಯೂ ಕೇಳಿ ಬಂತು. ಈ ನಡುವೆ ಕಳೆದ ಜುಲೈನಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು, ನೂತನ ಬಸ್ ನಿಲ್ದಾಣದತ್ತ ಖಾಸಗಿ ಬಸ್‍ಗಳ ಸಂಚಾರ ಸಂಬಂಧ ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಗಮನ ಸೆಳೆದಿರುವ ಅಂಶ ಬೆಳಕಿಗೆ ಬಂತು. ಅಲ್ಲದೆ, ಪೊಲೀಸ್ ಅಧೀಕ್ಷಕ ಪತ್ರದ ಬೆನ್ನಲ್ಲೇ ಜುಲೈ 11 ರಂದು ಜಿಲ್ಲಾಧಿಕಾರಿಗಳು ನಗರಸಭಾ ಆಯುಕ್ತರಿಗೆ ಪತ್ರ ಬರೆದು ಅಗತ್ಯ ಕ್ರಮಕ್ಕೆ ಸೂಚಿಸಿದ್ದರೂ, ಅಧಿಕಾರಿಗಳು ಈ ಹಿಂದಿನ ಯಾವ ಸಭೆಯಲ್ಲಿಯೂ ಸಂಬಂಧಿಸಿದ ಪತ್ರದ ಕುರಿತು ಜನಪ್ರತಿನಿಧಿಗಳ ಗಮನಕ್ಕೆ ವಿಷಯ ತಂದಿಲ್ಲವೆಂಬ ಅಸಮಾಧಾನ ಬಹುತೇಕ ಸದಸ್ಯರಿಂದ ವ್ಯಕ್ತವಾಯಿತು.
ಹಣದಲ್ಲಿ ಗೊಂದಲ : ಅಲ್ಲದೆ ಜಿಲ್ಲಾಧಿಕಾರಿಗಳು ಕಳೆದ ಮಳೆಯ ತೀವ್ರತೆ ನಡುವೆ ತುರ್ತು ಕೆಲಸಕ್ಕಾಗಿ ರೂ. 15 ಲಕ್ಷವನ್ನು ಮಳೆ ಪರಿಹಾರ ನಿಧಿಯಿಂದ ಕಲ್ಪಿಸಿದರೂ, ನಗರಸಭೆಯಿಂದ ಈ ಹಣ ಬಳಕೆಯಾಗಿರುವ ಬಗ್ಗೆ ನಿಖರ ಮಾಹಿತಿಯಿಲ್ಲವೆಂದು ಸದಸ್ಯರು, ರಾಜಕೀಯ ಮರೆತು ಅಸಮಾಧಾನ ಹೊರ ಹಾಕಿದರಲ್ಲದೆ, ಉಳಿಕೆ ಹಣ ಸದ್ಭಳಕೆಗೆ ಆಗ್ರಹಿಸಿದರು.
ಶುಚಿತ್ವಕ್ಕೆ ಪಟ್ಟು : ಕಳೆದ ಸ್ಥಾಯಿ ಸಮಿತಿ ಸಭೆಯ ತೀರ್ಮಾನದಂತೆ ವಾರ್ಡ್‍ವಾರು ರೂ. 20 ಸಾವಿರ ಅನುದಾನದೊಂದಿಗೆ ತುರ್ತಾಗಿ ಚರಂಡಿಗಳ ದುರಸ್ತಿ, ಕಾಡು ಕಡಿದು ರಸ್ತೆ ಬದಿ ಕಸ ವಿಲೇವಾರಿಯೊಂದಿಗೆ ನಗರದ ಶುಚಿತ್ವಕ್ಕೆ ಆದ್ಯತೆ ನೀಡಬೇಕೆಂಬ ಒತ್ತಾಯ ವ್ಯಕ್ತವಾಯಿತು. ವಾರ್ಡ್‍ವಾರು ರೂ. 20 ಸಾವಿರದಂತೆ ಕಾಮಗಾರಿಗೆ ಜಿಲ್ಲಾಧಿಕಾರಿಗಳ ಅನುಮೋದನೆ ಅವಶ್ಯಕವೆಂಬ ಪೌರಾಯುಕ್ತ ರಮೇಶ್ ಅವರ ವಾದಕ್ಕೆ ಸದಸ್ಯರು ತೀವ್ರ ತರಾಟೆಗೆ ತೆಗೆದುಕೊಂಡರು. ದಸರಾ ನಾಡಹಬ್ಬಕ್ಕೆ ಕೇವಲ ನಾಲ್ಕೈದು ದಿನಗಳು ಇರುವಾಗ ಕನಿಷ್ಟ ನಾಲ್ಕು ಶಕ್ತಿ ದೇವತೆಗಳ ಕರಗ ಸಂಚರಿಸುವ ಮಾರ್ಗ ಸರಿಪಡಿಸಿ, ಬೀದಿ ದೀಪಗಳನ್ನು ಎಲ್ಲೆಡೆ ಅಳವಡಿಸಿ ನಗರ ಶುಚಿತ್ವಕ್ಕೆ ಒತ್ತು ನೀಡುವಂತೆ ನಿರ್ಧಾರ ತೆಗೆದುಕೊಳ್ಳಲಾಯಿತು.
ಸಭೆಯಲ್ಲಿ ಕಾಮಗಾರಿ ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಟಿ. ಉನ್ನಿಕೃಷ್ಣನ್, ಸದಸ್ಯರುಗಳಾದ ಪಿ.ಡಿ. ಪೊನ್ನಪ್ಪ, ಹೆಚ್.ಎಂ. ನಂದಕುಮಾರ್, ಕೆ.ಎಸ್. ರಮೇಶ್, ಚುಮ್ಮಿದೇವಯ್ಯ, ಪ್ರಕಾಶ್ ಆಚಾರ್ಯ, ಅಮೀನ್ ಮೊಯ್ಸಿನ್, ಮನ್ಸೂರ್, ಪೀಟರ್, ಅನಿತಾ ಪೂವಯ್ಯ, ಶ್ರೀಮತಿ ಬಂಗೇರ, ವೀಣಾಕ್ಷಿ, ಜುಲೇಕಾಬಿ, ಶಿವಕುಮಾರ್, ಲಕ್ಷ್ಮಿ, ತಜುಸ್ಸುಂ, ಉದಯಕುಮಾರ್ ಮೊದಲಾದವರು ವಿಷಯಗಳ ಗಂಭೀತ ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಆದಷ್ಟು ಬೇಗ ನಗರದಲ್ಲಿ ಎಲ್ಲಾ 23 ವಾರ್ಡ್‍ಗಳ ಕೆಲಸಕ್ಕೆ ಒತ್ತ್ತು ನೀಡಲು ನಿರ್ಧರಿಸಲಾಯಿತು. ಸುಬ್ರಹ್ಮಣ್ಯ ನಗರ ಬೆಟ್ಟಸಾಲಿನ ಕಸ ವಿಲೇವಾರಿಯಿಂದ ಅಲ್ಲಿನ ಜನತೆಗೆ ಆಗಿರುವ ತೊಂದರೆ, ಕಸ ನಿರ್ವಹಣೆ ಸಮಸ್ಯೆ, ಪೌರ ಕಾರ್ಮಿಕರ ಕೊರತೆ, ದೈನಂದಿನ ಕೆಲಸಗಳಲ್ಲಿ ತೊಡಕುಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಸಭೆ ಸದಾಭಿಪ್ರಾಯ ಕೈಗೊಂಡಿತು.