ಭಾಗಮಂಡಲ, ಅ. 3: ತಾ. 17 ರಂದು ತಲಕಾವೇರಿಯಲ್ಲಿ ನಡೆಯುವ ಶ್ರೀ ಕಾವೇರಿ ತೀರ್ಥೋದ್ಭವ ತುಲಾ ಕಾವೇರಿ ಸಂಕ್ರಮಣ ಆಚರಣೆ ಪ್ರಯುಕ್ತ ನಡೆಯುತ್ತಿರುವ ಸಿದ್ಧತೆಯನ್ನು ಇಂದು ಜಿಲ್ಲಾಡಳಿತ ಪ್ರಮುಖರು ವೀಕ್ಷಿಸಿದರು.ಜಿಲ್ಲಾಧಿಕಾರಿ ಶ್ರೀವಿದ್ಯಾ ಪಿ.ಐ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ. ಪಣ್ಣೇಕರ್ ಮೊದಲಾದವರು ಇಂದು ಭಾಗಮಂಡಲ ಹಾಗೂ ತಲಕಾವೇರಿ ಕ್ಷೇತ್ರಗಳಿಗೆ ತೆರಳಿ ಜಾತ್ರಾ ಪೂರ್ವಭಾವಿ ಸಿದ್ಧತೆಗಳನ್ನು ವೀಕ್ಷಿಸಿ ಸುವ್ಯವಸ್ಥಿತ ಆಚರಣೆಗಾಗಿ ಸಂಬಂಧಿತ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆಯಿತ್ತರು. ಬ್ಯಾರಿಕೇಡ್ ಅಳವಡಿಕೆ, ವಿದ್ಯುದ್ದೀಪ ವ್ಯವಸ್ಥೆ,, ಶುಚಿತ್ವ ಕಾರ್ಯಗಳು, ಈಗಾಗಲೇ ಭಾಗಮಂಡಲ ಪಂಚಾಯ್ತಿಯಿಂದ ಕೈಗೊಂಡಿರುವ ಸ್ವಚ್ಛತಾ ಕಾರ್ಯಗಳ ಕುರಿತು ಪರಿಶೀಲಿಸಲಾಯಿತು. ದೇವಾಲಯಕ್ಕೆ ಸುಣ್ಣ ಬಣ್ಣ ಬಳಿಯುವದು,

(ಮೊದಲ ಪುಟದಿಂದ) ರಸ್ತೆ ದುರಸ್ತಿ, ಗೋಪುರ ಶುಚೀಕರಣಗೊಳಿಸುವದರ ಕುರಿತು ಪರಿಶೀಲಿಸಿ ನಿರ್ದೇಶನ ನೀಡಲಾಯಿತು.ಈಗಾಗಲೇ 30 ಮಂದಿಯ ಸ್ವಯಂ ಸೇವಕ ತಂಡವೊದು ತಯಾರಾಗಿದ್ದು ಈ ತಂಡವು ಪೊಲೀಸರೊಂದಿಗೆ ಕೈಜೋಡಿಸಿ ಯಾತ್ರಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡುವಂತೆ ಸೂಚಿಸಲಾಯಿತು. ಅಲ್ಲದೆ ಇನ್ನೂ ಯಾರಾದರೂ ಸ್ವಯಂ ಸೇವಕರಾಗಿ ಕೆಲಸ ಮಾಡುವ ಹುಮ್ಮಸ್ಸಿದ್ದರೆ, ಭಾಗಮಂಡಲ ಪಂಚಾಯ್ತಿಯ ಅಭಿವೃದ್ಧಿ ಅಧಿಕಾರಿ ಬಳಿ ಹೆಸರು ನೊಂದಾಯಿಸಿ ಗುರುತಿನ ಚೀಟಿ ಪಡೆದುಕೊಳ್ಳುವಂತೆ ನಿರ್ದೇಶಿಸಲಾಯಿತು. ಈ ಸಂದರ್ಭ ದೇವಸ್ಥಾನ ಸಮಿತಿ ಅಧ್ಯಕ್ಷ ಬಿ.ಎಸ್. ತಮ್ಮಯ್ಯ, ಸದಸ್ಯರುಗಳಾದ ಅಣ್ಣಯ್ಯ, ಮೀನಾಕ್ಷಿ, ಸುಭಾಶ್, ಕೆ.ಟಿ.ರಮೇಶ್ ಕಾರ್ಯ ನಿರ್ವಾಣಾಧಿಕಾರಿ ಜಗದೀಶ್ ಕುಮಾರ್ ಡಿ.ವೈಎಸ್ ಪಿ ಸುಂದರ್ ರಾಜ್ ಹಾಗೂ ಪಪ್ಪು ತಿಮ್ಮಯ್ಯ ಮೊದಲಾದವರಿದ್ದರು.

ಸಮಿತಿಯಿಂದ ಸುಧಾರಿತ ಕ್ರಮ

ಈ ಬಾರಿಯ ಜಾತ್ರೆಯನ್ನು ಸುಧಾರಿತ ಕ್ರಮದಲ್ಲಿ, ಸಂಪ್ರದಾಯ ಬದ್ಧವಾಗಿ ಆಚರಿಸಲು ಸಮಿತಿಯಿಂದ ನಿರ್ಧಾರ ಕೈಗೊಳ್ಳಲಾಗಿದೆ. ಈ ಕುರಿತು ಮುಂದೆ ಜನಪ್ರತಿನಿಧಿಗಳೂ ಸೇರಿದಂತೆ ನಡೆಯುವ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಿರುವದಾಗಿ ದೇವಸ್ಥಾನ ಸಮಿತಿ ಅಧ್ಯಕ್ಷರಾದ ಬಿಎಸ್. ತಮ್ಮಯ್ಯ ತಿಳಿಸಿದ್ದಾರೆ. ಈ ಬಾರಿ ಕುಂಡಿಕೆಯ ಬಳಿ ನೂಕು ನುಗ್ಗಲಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಪರಿಣಿತ ಅರ್ಚಕರು ಮಾತ್ರ ಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ. ಕ್ಷೇತ್ರ ತಂತ್ರಿಯವರÀನ್ನೂ ಆಹ್ವಾನಿಸಲಾಗಿದೆ. ಪ್ರಮುಖ ವ್ಯಕ್ತಿಗಳಿಗೆ ಮತ್ತು ಮಾಧ್ಯಮದವರಿಗೆ ಮೇಲ್ಭಾಗದಲ್ಲಿ ಪ್ಲ್ಯಾಟ್ ಫಾರಂ ಅಳವಡಿಸಿ ವೀಕ್ಷಣೆಗೆ ಅನುವು ಮಾಡಿಕೊಡಲಾಗುತ್ತದೆ. ಸ್ನಾನದ ಕೊಳಕ್ಕೆ ತೀರ್ಥೋದ್ಭವಕ್ಕೂ ಅರ್ಧ ಗಂಟೆಗೆ ಮುನ್ನ ಮಾತ್ರ ಭಕ್ತಾದಿಗಳನ್ನು ಒಂದು ಬದಿಯಿಂದ ಮಾತ್ರ ಬಿಡಲಾಗುತ್ತದೆ. ಕೊಳದ ಸುತ್ತಲೂ ಭದ್ರತೆಯಿರುತ್ತದೆ. ಈ ಎಲ್ಲದರ ಕುರಿತಾಗಿ ಅರ್ಚಕರು ಮತ್ತಿತರೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ.

ಪ್ರಸಕ್ತ ತೀರ್ಥೋದ್ಭವ ಸಂದರ್ಭ ತಲಕಾವೇರಿಯಲ್ಲಿ 3 ದಿನಗಳ ಕಾಲ ಅನ್ನ ಸಂತರ್ಪಣೆಯಿರುತ್ತದೆ. ಕಿರು ಸಂಕ್ರಮಣದವರೆಗೆ ಮುಂದುವರಿಸುವ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ. ಆದರೆ, ಭಾಗಮಂಡಲದಲ್ಲಿ ಒಂದು ತಿಂಗಳ ಕಾಲ ಪೂರ್ವಾಹ್ನ 11 ಗಂಟೆಯಿಂದ ಅಪರಾಹ್ನ 2.30 ರವರೆÉಗೆ ಅನ್ನ ಸಂತರ್ಪಣೆಯಿರುತ್ತದೆ.

ಪ್ರಸಕ್ತ ತೀರ್ಥ ಕುಂಡಿಕೆಗೆ ನೇರವಾಗಿ ಕುಂಕುಮಾರ್ಚನೆ ಮಾಡುತ್ತಿಲ್ಲ. ತೀರ್ಥ ಮಂಟಪದಲ್ಲಿ ಸಂಕಲ್ಪ ಮಾಡಿ ಕುಂಡಿಕೆಗೆ ಮಂಗಳಾರತಿ ಮಾತ್ರ ಮಾಡಲಾಗುತ್ತಿದೆ. ಅರ್ಚಕರೊಂದಿಗೆ ಚರ್ಚಿಸಿ ತೀರ್ಥೋದ್ಭವದ ದಿನವೂ ಮಿತಿ ಪ್ರಮಾಣದಲ್ಲಿ ಕುಂಕುಮ, ಪುಷ್ಪಾರ್ಚನೆ ನಡೆಸಲು ಕೋರಲಾಗುತ್ತದೆ ಎಂದು ತಮ್ಮಯ್ಯ ಮಾಹಿತಿಯಿತ್ತರು.

ಬ್ರಹ್ಮಗಿರಿ ಪರ್ವತಕ್ಕೆ ಈಗ ಪ್ರವೇಶಾವಕಾಶವಿಲ್ಲ. ಜಾತ್ರೆವರೆಗೂ ಪಾವಿತ್ರ್ಯತೆ ಶುಚಿತ್ವ ಕಾಪಾಡುವ ದೃಷ್ಟಿಯಿಂದ ಬಿಡುವದಿಲ್ಲ. ತಾ. 19 ರ ನಂತರ ಭಕ್ತಾದಿಗಳಿಗೆ ಪ್ರವೇಶ ಕಲ್ಪಿಸಲಾಗುವದು. ಆದರೆ, ಮೊಬೈಲ್ ಬಳಸದಂತೆ, ಶುಚಿತ್ವ ಕಾಪಾಡುವ ಕೆಲವೊಂದು ನಿರ್ಬಂಧಗಳನ್ನು ವಿಧಿಸಲಾಗುತ್ತದೆ ಎಂದು ಅಧ್ಯಕ್ಷ ತಮ್ಮಯ್ಯ ಮಾಹಿತಿಯಿತ್ತರು.

(ವರದಿ: ಕೆ.ಡಿ.ಸುನಿಲ್)